ಕನ್ನಡಪ್ರಭ ವಾರ್ತೆ ಹಾಸನ
ನಾಡಪ್ರಭು ಕೆಂಪೇಗೌಡರು ಕೇವಲ ಒಕ್ಕಲಿಗ ಸಮುದಾಯಕ್ಕೆ ಸೀಮಿತವಾಗಿರದೆ, ಸಮಾನತೆ, ಉತ್ತಮ ಆಡಳಿತ, ದೂರದೃಷ್ಟಿ ಮತ್ತು ಸಮಾಜಮುಖಿ ಚಿಂತನೆಯ ಮೂಲಕ ಇತಿಹಾಸದಲ್ಲಿ ಅಜರಾಮರರಾದ ನಾಡಪ್ರಭು ಕೆಂಪೇಗೌಡರ ಆದರ್ಶಗಳು ಇಂದಿನ ಸಮಾಜಕ್ಕೂ ಪ್ರಸ್ತುತವಾಗಿವೆ. ಅವರ ಜೀವನ ಮತ್ತು ಆಡಳಿತ ವೈಖರಿಯನ್ನು ಯುವಜನತೆ ಅಳವಡಿಸಿಕೊಂಡರೆ ಸುಭದ್ರ ಸಮಾಜ ನಿರ್ಮಾಣ ಸಾಧ್ಯ ಎಂದು ಆದಿಚುಂಚನಗಿರಿ ಶಾಖಾಮಠದ ಶಂಭುನಾಥ ಸ್ವಾಮೀಜಿ ಹೇಳಿದರು.ನಗರದ ಹಾಸನಾಂಬಾ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಒಕ್ಕಲಿಗರ ಸಂಘ ಹಾಗೂ ವಿವಿಧ ಸಂಘಸಂಸ್ಥೆಗಳ ಸಹಯೋಗದಲ್ಲಿ ನಡೆದ ೫೧೭ನೇ ನಾಡಪ್ರಭು ಕೆಂಪೇಗೌಡ ಜಯಂತಿ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದ ಅವರು, ಕೆಂಪೇಗೌಡರು ಕೇವಲ ಬೆಂಗಳೂರು ನಗರವನ್ನು ಕಟ್ಟಿದ ರಾಜನಲ್ಲ. ಭವಿಷ್ಯದ ಅಗತ್ಯಗಳನ್ನು ಮನಗಂಡು ನಗರ ಯೋಜನೆ ರೂಪಿಸಿದ ಮಹಾನ್ ದೃಷ್ಟಿವಂತರು. ನೀರಿನ ಸಂರಕ್ಷಣೆಗಾಗಿ ಕೆರೆ-ಕಟ್ಟೆಗಳನ್ನು ನಿರ್ಮಿಸುವುದರಿಂದ ಹಿಡಿದು ವಿವಿಧ ವೃತ್ತಿಗಳ ಜನರಿಗೆ ಪ್ರತ್ಯೇಕ ಪೇಟೆಗಳನ್ನು ನಿರ್ಮಿಸುವವರೆಗೆ ಅವರ ಆಡಳಿತದಲ್ಲಿ ವೈಜ್ಞಾನಿಕ ಚಿಂತನೆ ಅಡಕವಾಗಿತ್ತು. ಇಂದು ಬೆಂಗಳೂರು ವಿಶ್ವದ ಗಮನ ಸೆಳೆಯುವ ನಗರವಾಗಿ ಬೆಳೆದಿರುವುದಕ್ಕೆ ಅವರ ದೂರದೃಷ್ಟಿಯೇ ಬುನಾದಿಯಾಗಿದೆ ಎಂದು ಸ್ವಾಮೀಜಿ ಹೇಳಿದರು. ಇತಿಹಾಸವನ್ನು ತಿಳಿದವರು ಮಾತ್ರ ಭವಿಷ್ಯವನ್ನು ಕಟ್ಟಲು ಸಾಧ್ಯ. ಆದ್ದರಿಂದ ಮಹನೀಯರ ಬದುಕು, ಸಾಧನೆ ಮತ್ತು ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ಸಮಾಜದ ಜವಾಬ್ದಾರಿಯಾಗಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಎಚ್. ಪಿ. ಸ್ವರೂಪ್, ಹಾಸನದಲ್ಲಿ ನಾಡಪ್ರಭು ಕೆಂಪೇಗೌಡರ ಪುತ್ಥಳಿ ನಿರ್ಮಾಣಕ್ಕೆ ಅಗತ್ಯ ಸಿದ್ಧತೆಗಳು ಆರಂಭವಾಗಿವೆ. ಶ್ರೀ ಶಂಭುನಾಥ ಸ್ವಾಮೀಜಿ ನೇತೃತ್ವದಲ್ಲಿ ವಿವಿಧ ಸಮಾಜಗಳ ಮುಖಂಡರ ಸಭೆ ನಡೆಸಲಾಗಿದ್ದು, ಪಕ್ಷಾತೀತ ಹಾಗೂ ಜಾತ್ಯತೀತ ಸಮಿತಿ ರಚಿಸಿ ನಗರದ ಬಸ್ ನಿಲ್ದಾಣದ ಉದ್ಯಾನವನದ ಸಮೀಪ ಪುತ್ಥಳಿ ಪ್ರತಿಷ್ಠಾಪಿಸಲಾಗುವುದು. ಮುಂದಿನ ವರ್ಷದ ಕೆಂಪೇಗೌಡ ಜಯಂತಿಯಂದೇ ಪುತ್ಥಳಿಯನ್ನು ಸಾರ್ವಜನಿಕರಿಗೆ ಸಮರ್ಪಿಸಲಾಗುವುದು ಎಂದು ಘೋಷಿಸಿದರು. ಜಾತಿ,ಧರ್ಮಗಳ ಮಿತಿಯನ್ನು ಮೀರಿ ಎಲ್ಲ ಸಮಾಜದವರು ಒಗ್ಗೂಡಿ ಜಯಂತಿ ಆಚರಿಸಿರುವುದು ಕೆಂಪೇಗೌಡರ ಆದರ್ಶಗಳಿಗೆ ಸಲ್ಲಿಸಿದ ನಿಜವಾದ ಗೌರವವಾಗಿದೆ ಎಂದು ಅವರು ಹೇಳಿದರು. ಒಕ್ಕಲಿಗರ ಸಮಾಜದರಾದ ಎಚ್.ಡಿ. ದೇವೇಗೌಡ ಅವರು ದೇಶದ ಅತ್ಯುನ್ನತ ಹುದ್ದೇಯನ್ನು ಅಲಂಕರಿಸಿ ಕೆಂಪುಕೋಟೆಯಲ್ಲಿ ಧ್ವಜಾರೋಹಣ ಮಾಡಿದ ಹೆಮ್ಮೆ ರಾಜ್ಯಕ್ಕಿದೆ. ಮಾಜಿ ಸಿಎಂ ಎಸ್.ಎಂ. ಕೃಷ್ಣ ಸೇರಿದಂತೆ ಅನೇಕ ನಾಯಕರು ರಾಜ್ಯದ ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.ಸಂಸದ ಶ್ರೇಯಸ್ ಎಂ. ಪಟೇಲ್ ಮಾತನಾಡಿ, ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿರುವ ಬೆಂಗಳೂರಿನ ಅಡಿಪಾಯವನ್ನು ಕೆಂಪೇಗೌಡರು ಹಾಕಿದ್ದರು. ದೂರದೃಷ್ಟಿಯ ನಾಯಕತ್ವ ಎಂದರೇನು ಎಂಬುದಕ್ಕೆ ಅವರ ಜೀವನವೇ ಉತ್ತಮ ಉದಾಹರಣೆ. ಸಮಾಜದ ಅಭಿವೃದ್ಧಿಗೆ ಸರ್ಕಾರ ಮತ್ತು ಸಮಾಜ ಕೈಜೋಡಿಸಬೇಕು ಎಂದು ಕರೆ ನೀಡಿದರು.ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಂ ಶುಕ್ಲಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭನ್ವಿತ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪಟೇಲ್ ಶಿವಪ್ಪ ಹಾಗೂ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ನಿವೃತ್ತ ಉಪನ್ಯಾಸಕ ಡಾ. ಎನ್.ಎಸ್. ರಂಗರಾಜು ಮಾತನಾಡಿ, ಕೆಂಪೇಗೌಡರ ದೂರದೃಷ್ಟಿ, ರೈತಪರ ಆಡಳಿತ, ನಗರ ಯೋಜನೆ, ಕೆರೆಗಳು, ಮಾರುಕಟ್ಟೆಗಳು, ಉದ್ಯಾನಗಳು ಹಾಗೂ ರಸ್ತೆ ನಿರ್ಮಾಣದ ಮೂಲಕ ಬೆಂಗಳೂರು ಜಾಗತಿಕ ಮಟ್ಟದ ಮಹಾನಗರವಾಗಿ ಬೆಳೆಯಲು ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟರು. ಕೆಂಪೇಗೌಡರ ಆಡಳಿತ, ವಿಜಯನಗರ ಸಾಮ್ರಾಜ್ಯದ ಕಾಲಘಟ್ಟ, ನಗರ ಯೋಜನೆ ಹಾಗೂ ಅವರ ಐತಿಹಾಸಿಕ ಕೊಡುಗೆಗಳ ಕುರಿತು ವಿಶೇಷ ಉಪನ್ಯಾಸ ನೀಡಿ, ಯುವಜನತೆ ಇತಿಹಾಸದ ಅರಿವು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಕೆಂಪೇಗೌಡರ ನೀರಿನ ಸಂರಕ್ಷಣೆ, ನಗರಾಭಿವೃದ್ಧಿ ಹಾಗೂ ಉದ್ಯೋಗಾಧಾರಿತ ಯೋಜನೆಗಳು ಇಂದಿಗೂ ಮಾದರಿಯಾಗಿವೆ ಎಂದು ಹೇಳಿದರು.
ಜಯಂತಿ ಅಂಗವಾಗಿ ಜಿಲ್ಲಾಧಿಕಾರಿ ಕಚೇರಿ ಆವರಣದಿಂದ ಆರಂಭವಾದ ಭವ್ಯ ಮೆರವಣಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. ಡೊಳ್ಳು-ಕುಣಿತ, ವೀರಗಾಸೆ, ಜಾನಪದ ಕಲಾತಂಡಗಳು, ಸಾಂಸ್ಕೃತಿಕ ಪ್ರದರ್ಶನಗಳು ಹಾಗೂ ಕೆಂಪೇಗೌಡರ ಭಾವಚಿತ್ರಗಳೊಂದಿಗೆ ನಡೆದ ಮೆರವಣಿಗೆ ಸಾರ್ವಜನಿಕರ ಗಮನ ಸೆಳೆಯಿತು. ಸಾವಿರಾರು ಜನರು ಪಾಲ್ಗೊಂಡು ಜಯಂತಿಯನ್ನು ಸಂಭ್ರಮದಿಂದ ಆಚರಿಸಿದರು. ಯುವಕರು ಡಿಜೆ ಸಂಗೀತಕ್ಕೆ ಹೆಜ್ಜೆ ಹಾಕಿ ಸಂಭ್ರಮಿಸಿದ ದೃಶ್ಯಗಳು ವಿಶೇಷ ಆಕರ್ಷಣೆಯಾಗಿದ್ದವು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಜಗದೀಶ್ ಗಂಗಣ್ಣನವರ್, ಒಕ್ಕಲಿಗರ ಸಂಘದ ಅಧ್ಯಕ್ಷ ಜಿ.ಎಲ್. ಮುದ್ದೇಗೌಡ, ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಪಿ. ಕೃಷ್ಣೇಗೌಡ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಹೆಚ್.ಎಲ್. ಮಲ್ಲೇಶ್ ಗೌಡ, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಹೆಚ್.ಬಿ. ಮದನ್ ಗೌಡ, ಜಿಲ್ಲಾಧ್ಯಕ್ಷ ಜೆ.ಆರ್. ಕೆಂಚೇಗೌಡ, ಸಮಾಜಸೇವಕ ಕಂಚಮಾರನಹಳ್ಳಿ ಕಾಂತರಾಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ಹೆಚ್.ಪಿ. ತಾರನಾಥ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಗಣ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
===ಹೇಳಿಕೆ
ನಾಡಪ್ರಭು ಕೆಂಪೇಗೌಡ ಅವರು ಆಡಳಿತದ ಮಾರ್ಗದರ್ಶಿಯಾಗಿ ಪ್ರತಿ ಮನೆಮನೆಯಲ್ಲೂ ಮಾತಾಗಿದ್ದರು. ಜಾತ್ಯತೀತ ಹೋರಾಟಗಾರರು. ಅವರ ಆಡಳಿತದ ನೆರಳಿನಲ್ಲಿ ನಾವು ಸಹ ಬದುಕುತ್ತಿದ್ದೇವೆ. ಕೃಷಿಗೆ ಹೆಚ್ಚು ಹೊತ್ತು ನೀಡಿ ಗಿಡ ಮರಗಳ ಬೆಳೆಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರವಹಿಸಿದ್ದರುಲತಾ ಕುಮಾರಿ ಜಿಲ್ಲಾಧಿಕಾರಿ