ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ನಗರದ ಹೃದಯ ಭಾಗ ಕೊಡಿಯಲ್‌ಬೈಲ್‌ನಲ್ಲಿರುವ ಕುದ್ರೋಳಿ ಶ್ರೀ ಭಗವತೀ ಕ್ಷೇತ್ರದಲ್ಲಿ ಏಪ್ರಿಲ್ 9 ರಿಂದ 11ರ ವರೆಗೆ ವಿವಿಧ ಸಾಂಪ್ರದಾಯಿಕ, ಧಾರ್ಮಿಕ ಆಚರಣೆಗಳು, ಭಜನಾ ಸಂಕೀರ್ತನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡಾವಳಿ ಉತ್ಸವ ನಡೆಯಲಿದೆ.ಕ್ಷೇತ್ರದ ಅಧ್ಯಕ್ಷ ಗಣೇಶ್ ಕುಂಟಲ್ಪಾಡಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶ್ರೀ ಕ್ಷೇತ್ರದಲ್ಲಿ ಶ್ರೀ ಮಾತೆಯರಿಗೆ ಭರಣಿ ಮಹೋತ್ಸವ, ಪೆರುಂಕಳಿಯಾಟ, ನಡಾವಳಿ ಉತ್ಸವಗಳು ಕಾಲಕಾಲಕ್ಕೆ ನಡೆಯುತ್ತಿದೆ. ನಡಾವಳಿಯಂದು ಶ್ರೀ ಮಾತೆಯರ ಭವ್ಯ ಶೋಭಾಯಾತ್ರೆ ಹಾಗೂ ಪಾರಂಪರಿಕ ಪವಿತ್ರ ಕೆಂಡ ಸೇವೆ ನಡೆಯಲಿದೆ. ಪ್ರತೀ ದಿನ ಮಧ್ಯಾಹ್ನ ಹಾಗೂ ರಾತ್ರಿ ಮಹಾಪೂಜೆಯ ಬಳಿಕ ಅನ್ನ ಸಂತರ್ಪಣಾ ಸೇವೆ ನಡೆಯಲಿದೆ ಎಂದರು.
ಶ್ರೀ ಕ್ಷೇತ್ರದ ವ್ಯಾಪ್ತಿಗೆ ಕೊಡಿಯಾಲ್ ಬೈಲ್, ಕದ್ರಿ, ಜೆಪ್ಪು, ಬೋಳಾರ, ಕಂಕನಾಡಿ, ನೆತ್ತರೆಕೆರೆ, ಸಜಿಪ, ಚೇಳೂರು, ಇರಾ ಕಲ್ಲಾಡಿ, ಪಜೀರು, ನೀರುಮಾರ್ಗ, ಪಡುಬೊಂಡಂತಿಲ, ಬೆಳ್ಳೂರು ಮೊದಲಾದ 13 ಗ್ರಾಮಗಳು, ಕೆಳಗಿನ ಮನೆ ತರವಾಡು, ಜಪ್ಪು, ವಿಷ್ಣುಮೂರ್ತಿ ಆದಿಕ್ಷೇತ್ರ, ಕಡವಿನ ಬಳಿ ಬೋಳಾರ ತರವಾಡು ಹಾಗೂ ಕದ್ರಿ ಕಣ್ಣಬೆಟ್ಟು ತರವಾಡು ಹೀಗೆ ನಾಲ್ಕು ತರವಾಡುಗಳು ಒಳಪಟ್ಟಿದೆ.ಈ ಕ್ಷೇತ್ರಕ್ಕೆ ಸುಮಾರು 10 ಶತಮಾನಗಳಿಗೂ ಹೆಚ್ಚು ಭವ್ಯ ಇತಿಹಾಸವಿದ್ದು ಆದಿಶಕ್ತಿ ಶ್ರೀಭಗವತೀ ಮಾತೆಯು 14 ಸ್ವರೂಪಗಳಲ್ಲಿ ಶ್ರೀ ಚೀರುಂಭ ಭಗವತೀ - ನಾಲ್ವರು, ಶ್ರೀ ಪಾಡಾಂಗರ ಭಗವತೀ - ಐವರು, ಶ್ರೀ ಪುಲ್ಲೂರಾಳಿ ಭಗವತೀ - ಐವರು ಕಾರಣೀಕ ಮೆರೆದು ಭಕ್ತ ರಕ್ಷಕಿಯಾಗಿ ನೆಲೆನಿಂತುದರಿಂದ ‘ಕೂಟಕ್ಕಳ’ಎಂಬುದಾಗಿ ಖ್ಯಾತಿ ಪಡೆದಿದೆ. ತೀಯಾ ಸಮುದಾಯ ಆರಾಧಿಸಿಕೊಂಡು ಬಂದಿದ್ದರೂ ಶ್ರೀ ಮಾತೆಯರು ಜಾತಿಯ ಚೌಕಟ್ಟನ್ನು ಮೀರಿ ಶರಣುಬಂದ ಭಕ್ತರನ್ನು ಹರಸಿ ಕಾಯುತ್ತಿರುವುದರಿಂದ ಸ್ಥಳೀಯ ಭಕ್ತಾದಿಗಳಿಂದ ಶ್ರೀ ಕ್ಷೇತ್ರವು ‘ಗುತ್ಯಮ್ಮ ಸ್ಥಾನ’ ಎಂದೇ ಪ್ರಸಿದ್ಧಿ ಪಡೆದಿದೆ.
ಕಳೆದ 18 ವರ್ಷಗಳಿಂದ ಪ್ರತಿ ಶುಕ್ರವಾರ ಮಧ್ಯಾಹ್ನ ಕ್ಷೇತ್ರದಲ್ಲಿ ಶ್ರೀ ಮಾತೆಯರ ಪ್ರಸಾದ ರೂಪವಾಗಿ ಭಕ್ತಾದಿಗಳಿಗೆಅನ್ನಸಂತರ್ಪಣೆ ಜರಗುತ್ತಿದ್ದು, ಸ್ಥಳೀಯ ವಿವಿಧ ವಿದ್ಯಾ ಸಂಸ್ಥೆಗಳ ಸುಮಾರು 700 ವಿದ್ಯಾರ್ಥಿಗಳ ಸಮೇತ 3,000ಕ್ಕೂ ಹೆಚ್ಚು ಭಕ್ತಾದಿಗಳು ಅನ್ನ ಪ್ರಸಾದ ಸ್ವೀಕರಿಸುತ್ತಿದ್ದಾರೆ ಎಂದರು. ಪದಾಧಿಕಾರಿಗಳಾದ ವಿಶ್ವನಾಥ್ ಕುಡುಪು, ಸುಧೀರ್ ಬಿ.ಜೆಪ್ಪು, ಲೋಕೇಶ್ ಬೋಳಾರ್, ಸೃಜನ್ ದಾಸ್, ಮೋಹನ್, ಪುರುಷ ಸಾಲಿಯಾನ್, ರವೀಂದ್ರ ಕೊಡಿಯಾಲ್ ಬೈಲ್, ಉಷಾ ಪ್ರಭಾಕರ್, ಆಶಾ ಚಂದ್ರಮೋಹನ್, ಪುರುಷ ಸಾಲಿಯಾನ್ ಮತ್ತಿತರರು ಇದ್ದರು.