ಬಿಜೆಪಿಗೆ ವಿಷನ್ ಚಿಂತೆ, ಪ್ರತಿಪಕ್ಷಗಳಿಗೆ ಕಮಿಷನ್ ಚಿಂತೆ: ನಡ್ಡಾ

| Published : May 01 2024, 01:20 AM IST

ಸಾರಾಂಶ

ಬಿಜೆಪಿ ಇಡೀ ದೇಶವನ್ನು ಅಖಂಡ ಭಾರತವಾಗಿ ನಿರ್ಮಿಸುತ್ತಿದೆ. ಆದರೆ, ಇಂಡಿಯಾ ಒಕ್ಕೂಟ ದೇಶವನ್ನು ಇಬ್ಭಾಗ ಮಾಡುತ್ತಿದೆ. ತೆರಿಗೆ ವಿಷಯದಲ್ಲಿ ದಕ್ಷಿಣ ಭಾರತ ಹಾಗೂ ಉತ್ತರ ಭಾರತ ಎಂದು ಇಬ್ಬಗೆ ನೀತಿ ಅನುಸರಿಸುತ್ತಿದೆ. ಇದು ಅತ್ಯಂತ ಅಪಾಯಕಾರಿ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದರು.

- ಇಂಡಿಯಾ ಒಕ್ಕೂಟದಿಂದ ದೇಶ ಇಬ್ಭಾಗ ಸಾಧ್ಯತೆ

- ಶಿವಮೊಗ್ಗ, ಹಾವೇರಿಗಳಲ್ಲಿ ಬಿಜೆಪಿ ಪರ ನಡ್ಡಾ ಭರ್ಜರಿ ಪ್ರಚಾರ

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಬಿಜೆಪಿ ಇಡೀ ದೇಶವನ್ನು ಅಖಂಡ ಭಾರತವಾಗಿ ನಿರ್ಮಿಸುತ್ತಿದೆ. ಆದರೆ, ಇಂಡಿಯಾ ಒಕ್ಕೂಟ ದೇಶವನ್ನು ಇಬ್ಭಾಗ ಮಾಡುತ್ತಿದೆ. ತೆರಿಗೆ ವಿಷಯದಲ್ಲಿ ದಕ್ಷಿಣ ಭಾರತ ಹಾಗೂ ಉತ್ತರ ಭಾರತ ಎಂದು ಇಬ್ಬಗೆ ನೀತಿ ಅನುಸರಿಸುತ್ತಿದೆ. ಇದು ಅತ್ಯಂತ ಅಪಾಯಕಾರಿ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದರು.

ನಗರದ ಸಾಗರ ರಸ್ತೆಯಲ್ಲಿರುವ ಪ್ರೇರಣಾ ಕನ್ವೆನ್‌ಷನ್ ಹಾಲ್‌ನಲ್ಲಿ ಮಂಗಳವಾರ ಜಿಲ್ಲಾ ಬಿಜೆಪಿ ಆಯೋಜಿಸಿದ್ದ ವೃತ್ತಿಪರರ ಸಮಾವೇಶದಲ್ಲಿ ಮಾತನಾಡಿ, ಬಿಜೆಪಿ ಮತ್ತು ಮೈತ್ರಿ ಪಕ್ಷದ ಕೂಟಗಳಿಗೆ ದೇಶದ ಬಗ್ಗೆ ದೂರದೃಷ್ಟಿ ಚಿಂತೆ ಹಾಗೂ ಚಿಂತನೆ ಇದೆ. ಆದರೆ ವಿರೋಧ ಪಕ್ಷಗಳಿಗೆ ಇದ್ಯಾವುದೂ ಇಲ್ಲ. ಅವರಿಗೆ ಕೇವಲ ಕಮಿಷನ್ ಚಿಂತೆ ಎಂದರು.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸ್ವಾತಂತ್ರ್ಯೋತ್ಸವದ ಭಾಷಣ ಸಂದರ್ಭದಲ್ಲಿ ರಾಷ್ಟ್ರಕವಿ ಕುವೆಂಪು ಕವಿತೆ ಸಾಲು ಉಲ್ಲೇಖ ಮಾಡಿದರು. ಇದು ಭಾರತದ ಏಕತೆಗೆ ಸಾಕ್ಷಿ. ಆದರೆ ಕಾಂಗ್ರೆಸ್ಸಿಗರು ವಿಭಜನೆ ಕುರಿತು ಮಾತನಾಡುತ್ತಾರೆ. ಅದರಲ್ಲೂ ಕರ್ನಾಟಕದ ಸಂಸದರೊಬ್ಬ ಈ ಕುರಿತು ಮಾತನಾಡಿದ್ದು ನೋವು ತಂದಿದೆ. ಇಂಥವರಿಗೆ ಸಾರ್ವಜನಿಕ ಜೀವನದಲ್ಲಿರಲು ಅವಕಾಶ ನೀಡಬೇಕಾ? ಎಂದರು.

ಪ್ರಧಾನಿ ಮೋದಿಯವರು 10 ವರ್ಷಗಳ ಈಚೆಗೆ ರಾಷ್ಟ್ರವನ್ನು ವಿಶ್ವದ ಮುಂಚೂಣಿ ರಾಷ್ಟ್ರಗಳ ಸಾಲಿಗೆ ತಂದಿದ್ದಾರೆ. 12 ಕೋಟಿ ಶೌಚಾಲಯ ನಿರ್ಮಿಸಿಕೊಡುವ ಮೂಲಕ ಕೇಂದ್ರ ಸರ್ಕಾರ ಗ್ರಾಮೀಣ ಭಾಗದ ಮಹಿಳೆಯರು ಗೌರವಯುತ ಜೀವನ ನಿರ್ವಹಿಸುವಂತೆ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ ಎಂದು ಹೇಳಿದರು.

20 ವರ್ಷ ಮೇಲ್ಪಟ್ಟ ಪುರುಷ ಹಾಗೂ ಮಹಿಳೆಯರಿಗೆ 5 ಲಕ್ಷ ರು.ಗಳ ಆರೋಗ್ಯ ವಿಮಾ ಸೌಲಭ್ಯವನ್ನು ಪ್ರಧಾನಿ ಮೋದಿ ಜಾರಿಗೆ ತಂದಿದ್ದಾರೆ. ಇದರೊಂದಿಗೆ ರಿಕ್ಷಾ ಚಾಲಕ, ಟ್ರಕ್, ಬಸ್, ಚಾಲಕ ಹಾಗೂ ಕ್ಲೀನರ್ ಜಟ್ಕಾವಾಲಾ ಹೀಗೆ ಸಮಾಜದ ವಿವಿಧ ಹಂತಗಳಲ್ಲಿ ದುಡಿಯುತ್ತಿರುವ ಅನೇಕ ಉದ್ಯೋಗಿಗಳಿಗೆ ಆರೋಗ್ಯ ವಿಮೆ ಸೌಲಭ್ಯವನ್ನು ಕಲ್ಪಿಸುವ ಮೂಲಕ ಸಮುದಾಯಕ್ಕೆ ಆರೋಗ್ಯ ಭದ್ರತೆ ನೀಡಿದ್ದಾರೆ ಎಂದರು.