ನಡಿಕೇರಿಯಂಡ ಚಿಣ್ಣಪ್ಪ ಕೊಡವ ಜನಾಂಗದ ಪ್ರಾತಃಕಾಲ ಸ್ಮರಣೀಯರು: ಡಾ. ಶಿವಪ್ಪ

| Published : Aug 30 2025, 01:01 AM IST

ನಡಿಕೇರಿಯಂಡ ಚಿಣ್ಣಪ್ಪ ಕೊಡವ ಜನಾಂಗದ ಪ್ರಾತಃಕಾಲ ಸ್ಮರಣೀಯರು: ಡಾ. ಶಿವಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಪೊನ್ನಂಪೇಟೆ ಕೊಡವ ಸಮಾಜ ಹಾಗೂ ಪೊಮ್ಮಕ್ಕಡ ಕೂಟ ಜಂಟಿ ಆಶ್ರಯದಲ್ಲಿ ಮಹಾನ್ ಸಾಹಿತಿ ನಡಿಕೇರಿಯಂಡ ಚಿಣ್ಣಪ್ಪ ಅವರ 150ನೇ ಜನ್ಮೋತ್ಸವ ಕಾರ್ಯಕ್ರಮ ನಡೆಯಿತು.

ಸಾಹಿತಿ ನಡಿಕೇರಿಯಂಡ ಚಿಣ್ಣಪ್ಪ ಅವರ 150ನೇ ಜನ್ಮೋತ್ಸವ

ಕನ್ನಡಪ್ರಭ ವಾರ್ತೆ ಶ್ರೀಮಂಗಲ

ಕೊಡವ ಸಾಹಿತ್ಯದಲ್ಲಿ ಅಲಿಖಿತವಾಗಿದ್ದ ಕೊಡವ ಸಂಸ್ಕೃತಿ, ಆಚಾರ ವಿಚಾರ ಪರಂಪರೆಗಳನ್ನು ಪಟ್ಟೋಲೆ ಪಳಮೆ ಕೃತಿಯಲ್ಲಿ ದಾಖಲಿಸಿ ಕೊಡವ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಸಾಹಿತಿ ನಡಿಕೇರಿಯಂಡ ಚಿಣ್ಣಪ್ಪ ಅವರು ಕೊಡವ ಜನಾಂಗದಲ್ಲಿ ಪ್ರಾತಃ ಸ್ಮರಣೀಯರಾಗಿ ಉಳಿದಿದ್ದಾರೆ ಎಂದು ಸಾಹಿತಿ ಡಾ. ಕಾಳಿಮಾಡ ಕೆ.ಶಿವಪ್ಪ ಅಭಿಪ್ರಾಯಪಟ್ಟರು.

ಪೊನ್ನಂಪೇಟೆ ಕೊಡವ ಸಮಾಜ ಹಾಗೂ ಪೊಮ್ಮಕ್ಕಡ ಕೂಟ ಜಂಟಿ ಆಶ್ರಯದಲ್ಲಿ ನಡೆದ ಮಹಾನ್ ಸಾಹಿತಿ ನಡಿಕೇರಿಯಂಡ ಚಿಣ್ಣಪ್ಪ ಅವರ 150ನೇ ಜನ್ಮೋತ್ಸವ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.

ಚಿಣ್ಣಪ್ಪ ಅವರು ಮಹಾನ್ ಚೇತನರಾಗಿದ್ದು, ಅವರು ಮಾಡಿದ ಸಾಧನೆ ಬಹುಶಃ ಇಲ್ಲಿಯವರೆಗೆ ಯಾರು ಮಾಡಿಲ್ಲ ಮುಂದೆಯೂ ಮಾಡಲು ಸಾಧ್ಯವಿಲ್ಲ. ಕೊಡವ ಸಂಸ್ಕೃತಿ, ಜನಪದ ಕಲೆ, ಇತಿಹಾಸ, ಆಚಾರ ವಿಚಾರ, ಹಬ್ಬ ಹರಿದಿನಗಳನ್ನು ಲಿಖಿತ ರೂಪದಲ್ಲಿ ತರುವಲ್ಲಿ ಅವರು ಪಟ್ಟ ಶ್ರಮ ಊಹಿಸಲು ಸಾಧ್ಯವಿಲ್ಲ. ಜಾನಪದ ಸಂಸ್ಕೃತಿಯಲ್ಲಿ ಯಾವುದೇ ಲಿಖಿತವಾದ ದಾಖಲೆ ಇಲ್ಲದಂಥ ಕಾಲಘಟ್ಟದಲ್ಲಿ ಜನರಿಂದ ಮಾಹಿತಿಗಳನ್ನು ಪಡೆದು ಸಂಗ್ರಹಿಸಿ ಅದನ್ನು ಲಿಖಿತ ರೂಪದಲ್ಲಿ ತಂದ ಅವರ ಪ್ರಯತ್ನ, ಅವರ ಶ್ರಮ ಇಂದು ಪುಸ್ತಕ ರೂಪದಲ್ಲಿ ನಮ್ಮ ಮುಂದೆ ಇದೆ. ಅದು ನಮ್ಮ ಪುಣ್ಯವಾಗಿದೆ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪೊನ್ನಂಪೇಟೆ ಕೊಡವ ಸಮಾಜದ ಪೊಮ್ಮಕ್ಕಡ ಕೂಟ ಅಧ್ಯಕ್ಷೆ ಪ್ರೊ. ಇಟ್ಟಿರ ಕಮಲಾಕ್ಷಿ ಬಿದ್ದಪ್ಪ, ನಾಡಿನ ಜನರ ಜೀವನ ಕ್ರಮ, ಹಬ್ಬ ಹರಿದಿನ, ಸಾವು, ಮದುವೆ, ನಾಮಕರಣ ಹಾಗೂ ಆಚಾರ ವಿಚಾರ, ಜಾನಪದ ಕಲೆ ಇವುಗಳೆಲ್ಲವನ್ನು ತಮ್ಮ ಸರ್ಕಾರಿ ಉದ್ಯೋಗದಲ್ಲಿ ಇದ್ದ ಸಂದರ್ಭದಲ್ಲಿ ನಾಡಿನ ಮೂಲೆ ಮೂಲೆಗೆ ತೆರಳಿ ಜನಪದ ಕಲೆ, ಸಂಸ್ಕೃತಿ ಅರಿತಿದ್ದ ಹಿರಿಯರನ್ನು ಕುದುರೆಯಲ್ಲಿ ತಮ್ಮ ಮನೆಗೆ ಕರೆದುಕೊಂಡು ಹೋಗಿ ಅವರಿಗೆ ಸತ್ಕಾರ ಮಾಡಿ ರಾತ್ರಿ ಜನಪದ ಕಲೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ದಾಖಲಿಸುತ್ತಿದ್ದರು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪೊನ್ನಂಪೇಟೆ ಸಮಾಜದ ಅಧ್ಯಕ್ಷ ಹಾಗೂ ಜಾನಪದ ತಜ್ಞ ಕಾಳಿಮಾಡ ಮೋಟಯ್ಯ, ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ನಡಿಕೇರಿಯಂಡ ಚಿಣ್ಣಪ್ಪ ಅವರು ಕೊಡವ ಸಾಹಿತ್ಯ, ಜಾನಪದ ಕಲೆ, ಆಚಾರ ವಿಚಾರ, ಇತಿಹಾಸ ಇತ್ಯಾದಿಗಳನ್ನು ದಾಖಲಿಸುವ ಉದ್ದೇಶದಿಂದ ಅವುಗಳನ್ನು ಅರಿತು ಅದನ್ನು ಮುಂದಿನ ಪೀಳಿಗೆಗೆ ಪರಿಚಯಿಸಿ ಉಳಿಸುವ ನಿಟ್ಟಿನಲ್ಲಿ ಅವರು ಪುಸ್ತಕ ರೂಪದಲ್ಲಿ ಹೊರ ತಂದಿದ್ದಾರೆ ಎಂದರು.

ಮತ್ತೋರ್ವ ಮುಖ್ಯ ಅತಿಥಿ ಅಜ್ಜಿನಿಕಂಡ ಇನಿತಾ ಮಾಚಯ್ಯ ಮಾತನಾಡಿ, ನಡಿಕೇರಿಯಿಂದ ಚಿಣ್ಣಪ್ಪ ಅವರು ವರ್ಣನಾತೀತರು. ಕೊಡವ ಸಾಹಿತ್ಯ ಲೋಕಕ್ಕೆ ಅವರ ಕೊಡುಗೆಗೆ ಬೆಲೆಕಟ್ಟಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಅತಿಥಿಗಳ ಪರಿಚಯವನ್ನು ಕೊಡವ ಸಮಾಜದ ನಿರ್ದೇಶಕಿ ಮೂಕಳೆರ ಕಾವ್ಯ ಮಧು ಹಾಗೂ ಪೊಮ್ಮಕ್ಕಡ ಕೂಟದ ನಿರ್ದೇಶಕಿ ಬಲ್ಯಮೀದೇರಿರ ಆಶಾ ಶಂಕರ್ ಮಾಡಿದರು. ಪೊಮ್ಮಕ್ಕಡ ಕೂಟದ ಗೌರವ ಕಾರ್ಯದರ್ಶಿ ಬಲ್ಲಾಡಿಚಂಡ ಕಸ್ತೂರಿ ಸೋಮಯ್ಯ ಸ್ವಾಗತಿಸಿ, ನಿರೂಪಿಸಿದರು. ಮೂಕಳೆರ ಆಶಾಪೂಣಚ್ಚ ವಂದಿಸಿದರು.

ವೇದಿಕೆಯಲ್ಲಿ ನಡಿಕೇರಿಯಂಡ ಕುಟುಂಬದ ಉಪಾಧ್ಯಕ್ಷ ಸೋಮಯ್ಯ ಎನ್.ಎಂ. ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಚೆಕ್ಕೆರ ವಾಣಿ ಸಂಜು ಹಾಗೂ ಅಜ್ಜಿಕುಟ್ಟಿರ ದೇವಕ್ಕಿ ಹಾಡು ಹಾಡಿದರು. ಡಾ. ಕಾಳಿಮಾಡ ಶಿವಪ್ಪ, ನಡಿಕೇರಿಯಂಡ ಚಿಣ್ಣಪ್ಪ ಅವರು ಬರೆದಿರುವ ಹಾಡುಗಳನ್ನು ಹಾಡಿದರು. ಕೊಡವ ಸಮಾಜದ ಗೌರವ ಕಾರ್ಯದರ್ಶಿ ಕೋಟೆರ ಕಿಶನ್ ಉತ್ತಪ್ಪ, ನಿರ್ದೇಶಕರಾದ ಕೊಣಿಯಂಡ ಸಂಜು ಸೋಮಯ್ಯ, ಕಳ್ಳಿಚಂಡ ಚಿಪ್ಪದೇವಯ್ಯ, ಅಡ್ಡಂಡ ಪ್ರಕಾಶ್ ಕುಶಾಲಪ್ಪ ಹಾಜರಿದ್ದರು. ಪೊಮ್ಮಕ್ಕಡ ಕೂಟದ ಖಜಾಂಚಿ ಮೂಕಳೆರ ಲೀಲಾವತಿ ಪಟ್ಟು, ಮಾಣಿಪಂಡ ಪಾರ್ವತಿ ಜೋಯಪ್ಪ ಹಾಜರಿದ್ದರು.