ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿ
ಇಲ್ಲಿನ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಮೂಲಕ ನೀಡುವ ಶ್ರೀಮತಿ ಟಿ. ವಿಮಲಾ ವಿ. ಪೈ ಪ್ರಾಯೋಜಿತ ರಾಷ್ಟ್ರಕವಿ ಗೋವಿಂದ ಪೈ ಪ್ರಶಸ್ತಿ - 2024ಕ್ಕೆ ಹಿರಿಯ ಸಾಹಿತಿ ನಾಡೋಜ ಪ್ರೊ. ಹಂ.ಪ ನಾಗರಾಜಯ್ಯ ಅವರನ್ನು ಆಯ್ಕೆ ಮಾಡಲಾಗಿದೆ.ಈ ಪ್ರಶಸ್ತಿಯನ್ನು ಟಿ.ವಿ. ಮೋಹನ್‌ದಾಸ್ ಪೈ ಸ್ಥಾಪಿಸಿದ್ದು, ಪ್ರಶಸ್ತಿಯು ೧ ಲಕ್ಷ ರು. ಹಾಗೂ ಪ್ರಶಸ್ತಿ ಪತ್ರವನ್ನೊಳಗೊಂಡಿರುತ್ತದೆ. ಮಾ.23ರಂದು ಗೋವಿಂದ ಪೈ ಸಂಶೋಧನ ಸಂಪುಟದ ದ್ವಿತೀಯ ಭಾಗದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಂಪನಾ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾಗಿರುವ ಹಂ.ಪ ನಾಗರಾಜಯ್ಯ ಅವರು, ಕರ್ನಾಟಕದ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರೀಬಿದನೂರು ತಾಲೂಕಿನ ಹಂಪಸಂದ್ರ ಹಳ್ಳಿಯಲ್ಲಿ ಪದ್ಮಾವತಮ್ಮ- ಪದ್ಮನಾಭಯ್ಯ ದಂಪತಿ ಮಗನಾಗಿ ಜನಿಸಿದರು. ಹಂಪಸಂದ್ರ, ಗೌರೀಬಿದನೂರು, ಮಂಡ್ಯ, ಮಧುಗಿರಿ ಶಾಲೆಗಳಲ್ಲಿ ಆರಂಭಿಕ ಶಿಕ್ಷಣ ಪಡೆದ ಹಂಪನಾ, ತುಮಕೂರು ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಇಂಟರ್ ಮೀಡಿಯೆಟ್ ಶಿಕ್ಷಣ ಪೂರೈಸಿದರು. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಎಂ.ಎ., ಸ್ನಾತಕೋತ್ತರ ಪದವಿ ಪಡೆದರು.ವಿದ್ವಾಂಸ ರಂ.ಶ್ರೀ.ಮುಗಳಿ ಮಾರ್ಗದರ್ಶನದಲ್ಲಿ ‘ವಡ್ಡಾರಾಧನೆ : ಸಮಗ್ರ ಅಧ್ಯಯನ’ ಎಂಬ ವಿಷಯವಾಗಿ ಸಂಶೋಧನ ಪ್ರಬಂಧ ಬರೆದು ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪಡೆದಿದ್ದಾರೆ.
ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ವೃತ್ತಿಜೀವನ ಆರಂಭಿಸಿದ ಇವರು ಮಂಡ್ಯ, ದಾವಣಗೆರೆ, ಶಿವಮೊಗ್ಗ, ಬೆಂಗಳೂರು ಸರ್ಕಾರಿ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸಿದರು. ಬೆಂಗಳೂರು ವಿಶ್ವವಿದ್ಯಾನಿಲಯ ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕರಾಗಿ, ನಿರ್ದೇಶಕರಾಗಿ, ಮಂಗಳೂರು ವಿಶ್ವವಿದ್ಯಾನಿಲಯ ಸಿಂಡಿಕೇಟಿನ ಸದಸ್ಯರಾಗಿ, ಕನ್ನಡ-ಸಂಸ್ಕೃತಿ ಇಲಾಖೆ ಹಾಗೂ ಜೈನ ಸಂಶೋಧನ ಸಂಸ್ಥೆಯ ನಿರ್ದೇಶಕರಾಗಿ, ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಅಧ್ಯಕ್ಷರಾಗಿ ನಾಡುನುಡಿಯ ಮುನ್ನಡೆಗಾಗಿ ಅಪಾರ ಸೇವೆ ಸಲ್ಲಿಸಿದ್ದಾರೆ.ಹಂ.ಪ.ನಾ. ಸವ್ಯಸಾಚಿ ಲೇಖಕ. ನೂರಕ್ಕೂ ಹೆಚ್ಚು ಕೃತಿಗಳನ್ನು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ರಚಿಸಿದ್ದಾರೆ. ಭಾಷಾವಿಜ್ಞಾನ, ಜನಪದ, ಅನುವಾದ, ಕಾದಂಬರಿ, ಪ್ರಬಂಧ, ಶಿಶುಸಾಹಿತ್ಯ, ಕಾವ್ಯ, ವಿಮರ್ಶೆ, ಜೀವನಚರಿತ್ರೆ ಕ್ಷೇತ್ರಗಳಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಅವರ ‘ಚಾರುವಸಂತ’ ಮಹಾಕಾವ್ಯ ದೇಸಿ ಮತ್ತು ಜಾನಪದೀಯ ನೆಲೆಗಳಲ್ಲಿ ರೂಪಿತವಾಗಿದ್ದು ರಾಷ್ಟ್ರೀಯ ಖ್ಯಾತಿ ಗಳಿಸಿದೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ವಿಚಾರ ಸಂಕಿರಣ, ಕಮ್ಮಟ ಕಾರ್ಯಾಗಾರಗಳಲ್ಲಿ ಪ್ರಬಂಧ ಮಂಡಿಸಿರುವ ಇವರು ಕನ್ನಡ ಕಟ್ಟುವ ಕಾಯಕದಲ್ಲಿ ನಿರಂತರವಾಗಿ ತಮ್ಮನ್ನು ತೊಡಗಿಸಿಕೊಂಡವರು.
ಹಂಪನಾ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಶಿಶುಸಾಹಿತ್ಯ ರಾಷ್ಟ್ರೀಯ ಪ್ರಶಸ್ತಿ, ಚಾವುಂಡರಾಯ ಪುರಸ್ಕಾರ, ಕಾವ್ಯಾನಂದ ಪ್ರಶಸ್ತಿ, ಪಂಪಪ್ರಶಸ್ತಿ, ನಾಡೋಜ ಗೌರವ ಡಾಕ್ಟರೇಟ್, ಸೇಡಿಯಾಪು, ಮುಧೋಳದ ರನ್ನಕವಿಗಳಂತಹ ಹಲವಾರು ಪ್ರಶಸ್ತಿಗಳೊಂದಿಗೆ ಜ್ಯೂಯೆಲ್ ಆಫ್ ಜೈನ ವರ್ಲ್ಡ್ (ಜೈನಲೋಕದ ರತ್ನ) ಎಂಬ ಅಂತಾರಾಷ್ಟ್ರೀಯ ಪುರಸ್ಕಾರಕ್ಕೂ ಭಾಜನರಾಗಿದ್ದಾರೆ.