ಸಾರಾಂಶ
-ದಾಂಪತ್ಯಕ್ಕೆ ಅಡಿ ಇಟ್ಟ ಐದು ಜೋಡಿ । ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ
ಕನ್ನಡಪ್ರಭವಾರ್ತೆ, ಚಿತ್ರದುರ್ಗಬಸವಕೇಂದ್ರ ಮುರುಘಾ ಮಠದಲ್ಲಿ ಪ್ರತಿ ತಿಂಗಳು ಐದನೇ ತಾರೀಕು ನಡೆಯುವ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ದಾಂಪತ್ಯಕ್ಕೆ ಅಡಿ ಇಡುವ ವಧೂವರರಿಗೆ ಬದುಕಿನ ಪಾಠ ಬೋಧಿಸಲಾಗುತ್ತಿತ್ತು. ಆದರೆ, ಸಾಮೂಹಿಕ ವಿವಾಹ ನಾಡು ನುಡಿ ಕಲರವಕ್ಕೆ ಸೀಮಿತವಾಗಿತ್ತು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಸನ್ಮಾನಿಸುವ ಮೂಲಕ ಹೊಸ ಪರಂಪರೆಯೊಂದಕ್ಕೆ ನಾಂದಿ ಹಾಡಲಾಯಿತು.
ಕಾರ್ಯಕ್ರಮದ ಸಮ್ಮುಖ ವಹಿಸಿ ಮಾತನಾಡಿದ ಡಾ. ಬಸವಪ್ರಭು ಸ್ವಾಮೀಜಿ, ಕರ್ನಾಟಕ ಮೊದಲು ಮೈಸೂರು ರಾಜ್ಯವಾಗಿತ್ತು. ನಂತರದಲ್ಲಿ ಕರ್ನಾಟಕ ಎಂದು ನಾಮಕರಣವಾಯಿತು. ಹೆಸರಾಯಿತು ಕರ್ನಾಟಕ ಆದರೆ ಉಸಿರಾಗಲಿಲ್ಲ. ಬದುಕಿಗೆ ಉಸಿರು ಎಷ್ಟು ಮುಖ್ಯವೋ ಹಾಗೆಯೇ ಕನ್ನಡ ಉಸಿರಾಗಬೇಕು ಎಂದು ಎಂದರು.ಇಂದು ಬೆಂಗಳೂರು ಎಲ್ಲ ಕ್ಷೇತ್ರದಲ್ಲಿ ಮುಂದೆ ಬಂದಿದೆ. ಆದರೆ, ಕನ್ನಡಿಗರಿಗೆ ಅಲ್ಲಿ ಉದ್ಯೋಗ ಸಿಗುತ್ತಿಲ್ಲ. ಉದ್ಯೋಗ ಕೊಡಿ ಎಂದು ಒತ್ತಾಯಿಸುವ ಸ್ಥಿತಿ ಬಂದಿದೆ. ಕರ್ನಾಟಕದ ಎರಡನೇ ರಾಜಧಾನಿಯಾಗಿ ಚಿತ್ರದುರ್ಗ ಅಥವಾ ದಾವಣಗೆರೆಯನ್ನು ಘೋಷಣೆ ಮಾಡಿದರೆ ಕನ್ನಡ ಮತ್ತಷ್ಟು ಅಭಿವೃದ್ಧಿಯಾಗುತ್ತದೆ ಎಂದರು.
ರಾಜ್ಯವನ್ನಾಳುವ ನಾಯಕರು ಕನ್ನಡವನ್ನು ಉಳಿಸುವ ಪ್ರಯತ್ನ ಮಾಡಬೇಕು. ನಮಗೆ ದೂರದೃಷ್ಟಿ ಮುಖ್ಯ. ನಮ್ಮ ಭಾಷೆಯನ್ನು ಪ್ರೀತಿಸಬೇಕು. ಕನ್ನಡದ ಕವಿಗಳು, ವಚನಕಾರರ ಸಾಹಿತ್ಯವನ್ನು ಓದಿದರೆ ಜ್ಞಾನೋದಯವಾಗುತ್ತದೆ. ವಿಶ್ವಕ್ಕೆ ದೊಡ್ಡ ಕೊಡುಗೆ ವಚನ ಸಾಹಿತ್ಯ ಎಂದರು.ಡಾ.ಅಶ್ವಿನಿಕುಮಾರ್ ಪಸಾರದ ಮಾತನಾಡಿ, ಸಮಾಜದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯ. ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಚಿಕ್ಕ ಸಮಸ್ಯೆ ಇದ್ದರೂ ಉದಾಸೀನ ಮಾಡಬಾರದು. ಹಾಗೆಯೇ ಮುಂದೆ ಅದು ದೊಡ್ಡ ಸಮಸ್ಯೆಯಾಗಿಯೇ ಉಳಿಯಬಹುದು ಎಂದರು.
ಡಾ.ಮಲ್ಲಪ್ಪ ಮಾತನಾಡಿ, ಜ್ಞಾನ ಮತ್ತು ಭಾಷೆಗೂ ವ್ಯತ್ಯಾಸ ಇದೆ. ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಪ್ರಯತ್ನವಾಗಬೇಕು. ಕನ್ನಡ ಅನ್ನದ ಭಾಷೆಯಾಗಬೇಕು. ಹೃದಯದ ಭಾಷೆಯಾಗಬೇಕು. ಅತ್ಯಂತ ಪ್ರಾಚೀನ ಇತಿಹಾಸ ಹೊಂದಿರುವ ಭಾಷೆ ನಮ್ಮದು. ನಮಗೆ ಭಾಷೆಗಳ ಕೀಳರಿಮೆಗಳು ತೊಲಗಬೇಕು. ಪ್ರತಿಯೊಂದು ಭಾಷೆಗೂ ತನ್ನದೇ ಆದ ಮಹತ್ವವಿದೆ. ಅನೇಕ ಕವಿಗಳು ಕನ್ನಡ ನಾಡು ನುಡಿ ಸಾಂಸ್ಕತಿಕ ಶ್ರೀಮಂತಿಕೆ ಬಗ್ಗೆ ಬರೆದಿದ್ದಾರೆ ಎಂದರು.2024ನೇ ಸಾಲಿನ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಶ್ರೀ ಬಸವನಾಗಿದೇವ ಸ್ವಾಮಿಗಳು ಇದ್ದರು. ಗಂಜಿಗಟ್ಟಿ ಕೃಷ್ಣಮೂರ್ತಿ ಜಾನಪದ ಗೀತೆ ಹಾಡಿದರು. ಜಮುರಾ ಕಲಾವಿದರು ವಚನ ಪ್ರಾರ್ಥನೆ ಹಾಡಿದರು. ಜ್ಞಾನಮೂರ್ತಿ ಸ್ವಾಗತಿಸಿದರು. ನವೀನ್ ಮಸ್ಕಲ್ ನಿರೂಪಿಸಿದರು.
-------------ಪೋಟೋ: ಚಿತ್ರದುರ್ಗ ಮುರುಘಾಮಠದಲ್ಲಿ ನಡೆದ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ಬಸವಕುಮಾರ ಸ್ವಾಮೀಜಿ ಪುಷ್ಪವೃಷ್ಟಿಗೈದು ವಧೂವರರ ಆಶೀರ್ವದಿಸಿದರು.
--------ಫೋಟೋ: 5 ಸಿಟಿಡಿ8
--