ಸಾರಾಂಶ
ಕನ್ನಡಪ್ರಭ ವಾರ್ತೆ ಬಾದಾಮಿ
ಕನ್ನಡ ನಾಡು-ನುಡಿ, ಕಲೆ, ಸಾಹಿತ್ಯ, ಸಂಗೀತ, ಮತ್ತು ಸಂಸ್ಕೃತಿ ಪರಂಪರೆಗೆ ಕನ್ನಡ ಸಾಹಿತ್ಯ ಪರಿಷತ್ತು ಕೊಡುಗೆ ಅಪಾರವಾಗಿದೆ. 110 ವರ್ಷಗಳಿಂದ ಕಸಾಪ ಕನ್ನಡ ಉಳಿಸಿ, ಬೆಳೆಸುವ ಕೆಲಸ ನಿರಂತರವಾಗಿ ಮಾಡಿದೆ ಎಂದು ಸಾಹಿತಿ ಶಶಿಧರ ಮೂಲಿಮನಿ ಹೇಳಿದರು.ಬಾದಾಮಿ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ 110ನೇ ಸಂಸ್ಥಾಪನೆ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,1915 ರಿಂದ ಈವರಗೆ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಪುಸ್ತಕಗಳ ಪ್ರಕಟಣೆ ಜೊತೆಗೆ ನಾಡಿನ ಸಾಂಸ್ಕೃತಿಕ ಲೋಕ ಕಟ್ಟಿಕೊಟ್ಟಿದೆ ಎಂದು ಹೇಳಿದರು.
ಸಾಹಿತಿ ಡಾ.ಮೈನುದ್ದಿನ್ ರೇವಡಿಗಾರ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ ನ್ನು 1915ರಲ್ಲಿ ಸಂಸ್ಥಾಪನೆ ಮಾಡಿರುವ ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್, ದಿವಾನರಾದ ಸರ್.ಎಂ. ವಿಶ್ವೇಶ್ವರಯ್ಯನವರು, ಸರ್.ಮಿರ್ಜಾ ಇಸ್ಮಾಯಿಲ್ ರ ಕೊಡುಗೆ ಅಪಾರವಾಗಿದೆ. ಅವರು ಹಾಕಿಕೊಟ್ಟ ದಾರಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಇಂದು ವಿಶ್ವವ್ಯಾಪಿಯಾಗಿ ಬೆಳದಿದೆ ಎಂದರು.ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ ಸಾಹಿತ್ಯಿಕ, ಸಾಂಸ್ಕೃತಿಕ ಚಟುವಟಿಕೆಗಳೊಂದಿಗೆ ಸಮ್ಮೇಳನ, ದತ್ತಿ ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿ ನಡೆಸಿಕೊಂಡು ಬರಲಾಗುತ್ತಿದೆ. ನಾಡುನುಡಿ ಸೇವೆಗೆ ಕನ್ನಡ ಸಾಹಿತ್ಯ ಪರಿಷತ್ ಕನ್ನಡಿಗರಿಗೆ ಸ್ಫೂರ್ತಿದಾಯಕವಾಗಿದೆ ಎಂದ ಅವರು, ಕನ್ನಡ ಸಾಹಿತ್ಯ ಪರಿಷತ್ ಕಾರ್ಯಚಟುವಟಿಕೆ ಪಕ್ಷಿನೋಟ ವಿವರಿಸಿದರು. ಉಪನ್ಯಾಸಕರಾದ ಶಿವುಕುಮಾರ ಅಂಗಡಿ ಕನ್ನಡ ಸಾಹಿತ್ಯ ಪರಿಷತ್ ನಡೆದ ಬಂದು ದಾರಿ ಕುರಿತು ಉಪನ್ಯಾಸ ನೀಡಿದರು.
ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಡಾ.ಚಂದ್ರಶೇಖರ ಕಾಳನ್ನವರ ಮಾತನಾಡಿ, ಕನ್ನಡ ಭಾಷೆ, ನೆಲ, ಜಲ, ಸಂಸ್ಕೃತಿಯ ಬಗೆಗೆ ನಾವೆಲ್ಲರೂ ಅಭಿಮಾನ ಮತ್ತು ಗೌರವ ಬೆಳೆಸಿಕೊಂಡು ಆದರ್ಶ ಕನ್ನಡಿಗರಾಗೋಣ ಎಂದರು.ಬಾದಾಮಿ ತಾಲೂಕು ಘಟಕದ ಅಧ್ಯಕ್ಷ ಬಿ.ಎಫ್. ಹೊರಕೇರಿ, ಈರಣ್ಣ ಶೆಟ್ಟರ, ಶಿವಾನಂದ ಪೂಜಾರ, ಎಸ್.ಕೆ. ಜವಳಗದ್ದಿ, ದಯಾನಂದ, ಕುಮಾರ ಪವಾಡಶೆಟ್ಟಿ ಉಪಸ್ಥಿತರಿದ್ದರು.
ಶೈಲಜಾ ಸಿಂಪಿ ಪ್ರಾರ್ಥಿಸಿದರು. ಕಸಾಪ ಬಾದಾಮಿ ತಾಲೂಕು ಘಟಕದ ಅಧ್ಯಕ್ಷ ಬಿ.ಎಫ್. ಹೊರಕೇರಿ ಸ್ವಾಗತಿಸಿದರು. ಶಂಕ್ರಮ್ಮ ಕುಬಸದ ಕಾರ್ಯಕ್ರಮ ನಿರೂಪಿಸಿದರು. ಕಾಳಪ್ಪ ಬಡಿಗೇರ ವಂದಿಸಿದರು.