ಶ್ರಾವಣ ಮಾಸದ ಪ್ರಮುಖ ಹಬ್ಬಗಳಲ್ಲಿ ಒಂದಾದ ನಾಗರ ಪಂಚಮಿಯನ್ನು ಭಾನುವಾರ ಜಿಲ್ಲೆಯಾದ್ಯಂತ ಆವರಿಸಿರುವ ತೀವ್ರ ಬರಗಾಲದ ನಡುವೆಯೂ ಸಡಗರ, ಸಂಭ್ರಮದಿಂದ ಆಚರಿಸಲಾಯಿತು.
ಶಿವಕುಮಾರ ಕುಷ್ಟಗಿ
ಗದಗ: ಶ್ರಾವಣ ಮಾಸದ ಪ್ರಮುಖ ಹಬ್ಬಗಳಲ್ಲಿ ಒಂದಾದ ನಾಗರ ಪಂಚಮಿಯನ್ನು ಭಾನುವಾರ ಜಿಲ್ಲೆಯಾದ್ಯಂತ ಆವರಿಸಿರುವ ತೀವ್ರ ಬರಗಾಲದ ನಡುವೆಯೂ ಸಡಗರ, ಸಂಭ್ರಮದಿಂದ ಆಚರಿಸಲಾಯಿತು.ನಗರದ ವಿವಿಧ ಬಡಾವಣೆಗಳು, ಓಣಿಗಳು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ನಾಗದೇವರ ಕಟ್ಟೆ, ನಾಗರಕಲ್ಲು, ಹುತ್ತ ಹಾಗೂ ದೇವಸ್ಥಾನಗಳಿಗೆ ತೆರಳಿದ ಮಹಿಳೆಯರು, ಮಕ್ಕಳು ಭಕ್ತಿಭಾವದಿಂದ ಪೂಜೆ ಸಲ್ಲಿಸಿ ನಾಗದೇವರಿಗೆ ಹಾಲೆರೆಯುವ ಮೂಲಕ ಹಬ್ಬದ ಸಂಭ್ರಮವನ್ನು ಹೆಚ್ಚಿಸಿದರು.
ಬೆಳಗ್ಗೆಯಿಂದಲೇ ಮನೆಗಳ ಬಾಗಿಲು ಮತ್ತು ಅಂಗಳದಲ್ಲಿ ನಾಗದೇವರ ಚಿತ್ರ ಬಿಡಿಸಿ, ಅರಿಶಿನ, ಕುಂಕುಮ, ಹೂವು, ಗಂಧ ಹಾಗೂ ಹಾಲಿನಿಂದ ಪೂಜೆ ಸಲ್ಲಿಸಲಾಯಿತು. ಮುತ್ತೈದೆಯರು ಹಾಗೂ ಹೆಣ್ಣುಮಕ್ಕಳು ಹೊಸ ಬಟ್ಟೆ ಧರಿಸಿ ನಾಗದೇವರ ಕಟ್ಟೆಗಳಿಗೆ ತೆರಳಿ ಕುಟುಂಬದ ಸುಖ, ಶಾಂತಿ, ಆರೋಗ್ಯ ಹಾಗೂ ಸಮೃದ್ಧಿಗಾಗಿ ಪ್ರಾರ್ಥಿಸಿದರು. ಹಲವು ಕಡೆ ಸಹೋದರರ ಆಯುಷ್ಯ, ಆರೋಗ್ಯ ಹಾಗೂ ಕ್ಷೇಮಕ್ಕಾಗಿ ನಾಗದೇವರನ್ನು ಪೂಜಿಸಿದರು. ಇದನ್ನು ಅಣ್ಣ, ತಂಗಿಯರ ಹಬ್ಬವೆಂದೂ ಕರೆಯುತ್ತಾರೆ.ವಿಶೇಷ ಖಾದ್ಯ: ನಾಗರ ಪಂಚಮಿ ಸಂದರ್ಭದಲ್ಲಿ ನಾಗದೇವರಿಗೆ ಆಳ್ಳಿಟ್ಟು, ಉಸುಳಿ ಸೇರಿದಂತೆ ಸ್ಥಳೀಯ ಸಂಪ್ರದಾಯದ ವಿಶೇಷ ಖಾದ್ಯಗಳನ್ನು ತಯಾರಿಸಿ ನೈವೇದ್ಯ ಅರ್ಪಿಸಲಾಯಿತು. ನೆನೆಸಿದ ಕಡಲೆ, ಎಳ್ಳು, ಶೇಂಗಾ, ಕಡಲೆಬೇಳೆ ಸೇರಿದಂತೆ ವಿವಿಧ ಧಾನ್ಯಗಳಿಂದ ತಯಾರಿಸಿದ ಉಂಡಿಗಳು, ತಂಬಿಟ್ಟು ಹಾಗೂ ಇತರ ಸಾತ್ವಿಕ ತಿನಿಸುಗಳನ್ನೂ ಕೆಲವೆಡೆ ನೈವೇದ್ಯವಾಗಿ ಸಮರ್ಪಿಸಲಾಯಿತು. ಉತ್ತರ ಕರ್ನಾಟಕದ ಗ್ರಾಮೀಣ ಭಾಗದಲ್ಲಿ ಹಬ್ಬದ ದಿನ ಜೋಕಾಲಿ ಆಡುವುದು, ಮಕ್ಕಳೊಂದಿಗೆ ವಿವಿಧ ಆಟಗಳಲ್ಲಿ ಪಾಲ್ಗೊಳ್ಳುವುದು ವಿಶೇಷ ಸಂಭ್ರಮದ ಭಾಗವಾಗಿದೆ.
ಜೋಕಾಲಿಯು ವಿಶೇಷ: ಆಧುನಿಕತೆಯ ಹೆಸರಿನಲ್ಲಿ ಮಾಯವಾಗುತ್ತಿರುವ ಗ್ರಾಮೀಣ ಸಂಪ್ರದಾಯಗಳನ್ನು ಉಳಿಸುವಲ್ಲಿ ಪಂಚಮಿ ಹಬ್ಬದ ಪಾತ್ರ ಅತ್ಯಂತ ಪ್ರಮುಖವಾಗಿದ್ದು, ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಮರಗಳಿಗೆ ಜೋಕಾಲಿ ಕಟ್ಟಿ ಮಹಿಳೆಯರು, ಮಕ್ಕಳು ಹಾಗೂ ಯುವತಿಯರು ಜೋಕಾಲಿಯಾಡಿ ಸಂಭ್ರಮಿಸಿದರು.ಯುವಕರು ವಿವಿಧ ಗ್ರಾಮೀಣ ಮೋಜಿನಾಟಗಳಲ್ಲಿ ಪಾಲ್ಗೊಂಡು ಹಬ್ಬಕ್ಕೆ ಮತ್ತಷ್ಟು ಕಳೆ ತಂದರು. ತವರು ಮನೆಗೆ ಆಗಮಿಸಿದ್ದ ಹೆಣ್ಣುಮಕ್ಕಳು ಬಂಧು-ಬಳಗದೊಂದಿಗೆ ಹಬ್ಬ ಆಚರಿಸಿದ್ದು, ಗ್ರಾಮೀಣ ಬದುಕಿನ ಸೊಗಡನ್ನು ಮತ್ತಷ್ಟು ಹೆಚ್ಚಿಸಿತು.
ಶ್ರಾವಣ ಶುಕ್ಲ ಪಂಚಮಿ: ಹಿಂದೂ ಪಂಚಾಂಗದ ಪ್ರಕಾರ ನಾಗರ ಪಂಚಮಿಯನ್ನು ಸಾಮಾನ್ಯವಾಗಿ ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿ ತಿಥಿಯಂದು ಆಚರಿಸಲಾಗುತ್ತದೆ. ನಾಗದೇವರನ್ನು ಶೇಷ, ವಾಸುಕಿ ಸೇರಿದಂತೆ ಸರ್ಪರೂಪದ ದೈವಶಕ್ತಿಯ ಪ್ರತೀಕವಾಗಿ ಪೂಜಿಸುವ ಸಂಪ್ರದಾಯವಿದೆ. ನಾಗರ ಪಂಚಮಿ ಪ್ರಕೃತಿ ಮತ್ತು ಜೀವ ಜಗತ್ತಿನೊಂದಿಗೆ ಮಾನವನ ಹೊಂದಾಣಿಕೆಯನ್ನು ಸಾರುವ ಹಬ್ಬವಾಗಿಯೂ ಪರಿಗಣಿಸಲಾಗಿದೆ. ಭೂಮಿಯೊಳಗೆ ವಾಸಿಸುವ ಸರ್ಪಗಳು ಹಾಗೂ ಇತರ ಜೀವಿಗಳಿಗೆ ಗೌರವ ಸಲ್ಲಿಸುವ ಸಂಕೇತವಾಗಿದೆ ಎನ್ನುತ್ತಾರೆ ಹಿರಿಯರು.ವಿಶೇಷ ನಂಬಿಕೆಯೂ ಇದೆ: ನಾಗದೇವರ ಪೂಜೆಯಿಂದ ಕುಟುಂಬಕ್ಕೆ ರಕ್ಷಣೆ, ಸಂತಾನ ಸುಖ, ಆರೋಗ್ಯ ಹಾಗೂ ಸಮೃದ್ಧಿ ದೊರೆಯುತ್ತದೆ ಎಂಬುದು ಭಕ್ತರ ನಂಬಿಕೆ. ಹೀಗಾಗಿ ನಾಗರ ಪಂಚಮಿ ಕೇವಲ ಧಾರ್ಮಿಕ ಆಚರಣೆಯಾಗಿರದೆ, ಕುಟುಂಬ ಬಾಂಧವ್ಯ, ಗ್ರಾಮೀಣ ಸಂಸ್ಕೃತಿ, ಪ್ರಕೃತಿ ಆರಾಧನೆ ಮತ್ತು ಪರಂಪರೆಯ ಆಹಾರ ಸಂಸ್ಕೃತಿಯನ್ನು ಒಟ್ಟುಗೂಡಿಸುವ ಹಬ್ಬವಾಗಿದೆ ಎನ್ನುವ ನಂಬಿಕೆ ಇದೆ.
ಬರದ ಛಾಯೆ: ಗದಗ ಜಿಲ್ಲೆಯಲ್ಲಿ ಈ ಬಾರಿ ಮಳೆ ಕೊರತೆಯಿಂದ ಬರದ ಛಾಯೆ ಆವರಿಸಿರುವ ಪರಿಣಾಮ ನಾಗರ ಪಂಚಮಿ ಸಂಭ್ರಮಕ್ಕೂ ಅಲ್ಪಮಟ್ಟಿನ ಅಡ್ಡಿಯಾಗಿದೆ. ಈ ಬಾರಿ ಮಳೆಯ ಕೊರತೆ ಹಾಗೂ ಹೊಲ-ಗದ್ದೆಗಳಲ್ಲಿ ಕಂಡುಬರುತ್ತಿರುವ ಒಣ ವಾತಾವರಣ ಹಬ್ಬದ ಸಡಗರಕ್ಕೆ ಕೊಂಚ ಮಂಕು ತಂದಿದೆ. ಜಿಲ್ಲೆಯಲ್ಲಿ ಕೃಷಿ ಮಳೆಯನ್ನೇ ಹೆಚ್ಚಿನ ಪ್ರಮಾಣದಲ್ಲಿ ಅವಲಂಬಿಸಿರುವುದರಿಂದ ಮಳೆ ಕೊರತೆಯ ಪರಿಣಾಮ ರೈತಾಪಿ ವರ್ಗದಲ್ಲಿ ಆತಂಕ ಮೂಡಿದ್ದು, ಹಬ್ಬದ ಸಂಭ್ರಮದ ನಡುವೆಯೂ ಇನ್ನಾದರೂ ಉತ್ತಮ ಮಳೆಯಾಗಲಿ, ನಮ್ಮ ಬದುಕು ಹಸನಾಗಲಿ ಎಂದು ನಾಗದೇವರಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.