ಸಾರಾಂಶ
ಶ್ರಾವಣ ಮಾಸದಲ್ಲಿ ಬರುವ ನಾಗರ ಪಂಚಮಿ ಹಬ್ಬವನ್ನು ಕಲ್ಲ ನಾಗರಕ್ಕೆ, ಹುತ್ತಕ್ಕೆ, ಮನೆಗಳಲ್ಲಿ ಬೆಳ್ಳಿಯ ನಾಗಪ್ಪನಿಗೆ ಹಾಲು ಎರೆಯುವ ಮೂಲಕ ಜಿಲ್ಲಾದ್ಯಂತ ಶ್ರದ್ಧಾ- ಭಕ್ತಿಯಿಂದ ಆಚರಿಸಲಾಯಿತು.
- ಹುತ್ತ, ಕಲ್ಲಿನ ನಾಗರಕ್ಕೆ ಪೂಜಿಸಿ ಹಾಲೆರೆದ ಭಕ್ತರು
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಶ್ರಾವಣ ಮಾಸದಲ್ಲಿ ಬರುವ ನಾಗರ ಪಂಚಮಿ ಹಬ್ಬವನ್ನು ಕಲ್ಲ ನಾಗರಕ್ಕೆ, ಹುತ್ತಕ್ಕೆ, ಮನೆಗಳಲ್ಲಿ ಬೆಳ್ಳಿಯ ನಾಗಪ್ಪನಿಗೆ ಹಾಲು ಎರೆಯುವ ಮೂಲಕ ಜಿಲ್ಲಾದ್ಯಂತ ಶ್ರದ್ಧಾ- ಭಕ್ತಿಯಿಂದ ಆಚರಿಸಲಾಯಿತು.ನಾಗರ ಚತುರ್ಥಿಯಂದು ನಾಗಪ್ಪನಿಗೆ ಹಾಲು ಎರೆಯುವುದು ವಾಡಿಕೆ. ಆದರೆ, ಪಂಚಾಗದ ಪ್ರಕಾರ ಈ ವರ್ಷ ಚತುರ್ಥಿ ಮಂಗಳವಾರ ಬಂದಿತ್ತು. ಅಂದು ಹಾಲು ಹಾಕುವುದು ಸಂಪ್ರದಾಯಕ್ಕೆ ತರವಲ್ಲ ಎನ್ನುವ ಕಾರಣಕ್ಕೆ ಬಹುತೇಕ ಮನೆಗಳಲ್ಲಿ ಜನರು ಸೋಮವಾರವೇ ಹಾಲೆರೆದು ಭಕ್ತಿ ಸಮರ್ಪಿಸಿದ್ದಾರೆ.
ಭಾನುವಾರ ರೊಟ್ಟಿ ಪಂಚಮಿ ಆಚರಿಸಿ ರೊಟ್ಟಿಯೊಂದಿಗೆ ಹಲವಾರು ಪಲ್ಯಗಳು, ಕೋಸಂಬರಿ, ಪಚಡಿ ಸವಿದಿದ್ದ ಜನರು, ಸೋಮವಾರಕ್ಕೆ ಪಂಚಮಿ ಹಬ್ಬದ ವಿಶೇಷವಾಗಿರುವ ಶೇಂಗಾ, ಕಡ್ಲೆ, ಎಳ್ಳು, ಬೇಸನ್, ಮಂಡಕ್ಕಿ, ರವೆ ಉಂಡೆ ಸೇರಿದಂತೆ ವಿವಿಧ ಉಂಡೆಗಳು ಮತ್ತು ಕರಜಿಕಾಯಿ ತಯಾರಿಸಿಟ್ಟು, ನಾಗಪ್ಪನಿಗೆ ನೇವೈದ್ಯಕ್ಕೆ ಸಮರ್ಪಿಸಿ, ಮನೆಯಲ್ಲಿಯೂ ಹಾಲೆರೆದು, ಹುತ್ತಕ್ಕೆ ಮತ್ತು ಕಲ್ಲಿನಲ್ಲಿ ಪ್ರತಿಷ್ಠಾಪಿಸಲಾಗಿರುವ ನಾಗಕ್ಕೆ ಹಾಲೆರೆದು ಹಬ್ಬವನ್ನು ಆಚರಿಸಿದರು.ಮಹಿಳೆಯರು ಮತ್ತು ಪುರುಷರು ಹಾಗೂ ಮಕ್ಕಳು ಸಾಂಪ್ರದಾಯಿಕ ಉಡುಗೆಯಲ್ಲಿ ದೇವಸ್ಥಾನಕ್ಕೆ ಆಗಮಿಸಿ, ಹೂವು, ಗೆಜ್ಜೆ ವಸ್ತçಗಳಿಂದ ಪೂಜೆ ಮಾಡಿ, ನೆನೆಸಿದ ಕಡ್ಲೆಕಾಳು, ಹರಳು ಸೇರಿದಂತೆ ಐದು ತರಹದ ಉಂಡೆಗಳು ಮತ್ತು ಅನ್ನ, ಪಲ್ಯ ಇತ್ಯಾದಿಗಳನ್ನು ನಾಗಪ್ಪನಿಗೆ ಸಮರ್ಪಿಸಿ ಭಕ್ತಿ ಮೆರೆದರು. ಜಿಟಿ ಜಿಟಿ ಮಳೆ ಇದ್ದರೂ ಕೂಡಾ ನಾಗಪ್ಪನ ಪ್ರತಿಷ್ಠಾಪಿಸಲಾಗಿರುವ ಎಲ್ಲಾ ದೇವಾಲಯಗಳು ಭಕ್ತರಿಂದ ಗಿಜಿಗುಡುತ್ತಿರುವುದು ಕಂಡುಬಂತು.
ಮಂಗಳವಾರದ ಕೂಡ ಜನರು ಹೊಳೆ ಗಂಗಮ್ಮನ ಪೂಜೆ ಮಾಡಿದರು ಶ್ರಾವಣ ಸೋಮವಾರ ಹಾಗೂ ನಾಗರ ಪಂಚಮಿ ಹಬ್ಬದ ಹಿನ್ನಲೆ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಮತ್ತು ಕೆಲವು ದೇವಸ್ಥಾನಗಳಲ್ಲಿ ಪ್ರಸಾದ, ಅನ್ನಸಂತರ್ಪಣೆ ನಡೆಯಿತು.- - -
-28ಕೆಡಿವಿಜಿ49: ದಾವಣಗೆರೆಯಲ್ಲಿ ನಾಗರ ಕಲ್ಲಿಗೆ ಪೂಜೆ ಸಲ್ಲಿಸಿ ಹಾಲೆರೆಯುತ್ತಿರುವ ಮಹಿಳೆಯರು.