ಸಾರಾಂಶ
ಗೌರವ ಡಾಕ್ಟರೇಟ್ ಪುರಸ್ಕಾರಕ್ಕೆ ಬಿ. ನಾಗನಗೌಡ ಹಾಗೂ ಡಾ. ವಸುಂಧರಾ ಭೂಪತಿ ಆಯ್ಕೆ-ಸಂತಸಗೊಂಡ ತಾಲೂಕಿನ ಜನತೆ
ಕನ್ನಡಪ್ರಭ ವಾರ್ತೆ ಸಂಡೂರುಬಿ. ನಾಗನಗೌಡರ ಜೀವನ ತೆರೆದ ಪುಸ್ತಕ. ಅವರ ಸಾಧನೆ ಹಾಗೂ ಕೊಡುಗೆ ಗಮನಿಸಿದರೆ, ಅವರನ್ನು ಗೌರವ ಡಾಕ್ಟರೇಟ್ ಪದವಿ ಪುರಸ್ಕಾರಕ್ಕೆ ಆಯ್ಕೆ ಮಾಡಿರುವುದು ಅಚ್ಚರಿಯ ವಿಷಯವೇನಲ್ಲ ಎಂದು ನಾಡೋಜ ಡಾ.ವಿ.ಟಿ. ಕಾಳೆ ಹೇಳಿದರು.
ತಾಲೂಕಿನ ಬಿ. ನಾಗನಗೌಡ ಡಾ. ವಸುಂಧರಾ ಭೂಪತಿ ಅವರನ್ನು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಪದವಿ ಪುರಸ್ಕಾರಕ್ಕೆ ಆಯ್ಕೆ ಮಾಡಿದೆ. ಈ ಹಿನ್ನೆಲೆ ಪಟ್ಟಣದ ಬಿಕೆಜಿ ಕಚೇರಿ ಸಭಾಂಗಣದಲ್ಲಿ ಬುಧವಾರ ಕಸಾಪ ತಾಲೂಕು ಘಟಕದ ವತಿಯಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.ಕಸಾಪ ತಾಲೂಕು ಘಟಕದ ಮಾಜಿ ಅಧ್ಯಕ್ಷ ಬಸವರಾಜ ಮಸೂತಿಯವರು ಮಾತನಾಡಿ, ಬಿ. ನಾಗನಗೌಡರು ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸಿರುವುದಲ್ಲದೆ, ಪ್ರಸ್ತುತ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಶರಣ ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷರಾಗಿ, ಉದ್ಯಮಿಯಾಗಿ ಶಿಕ್ಷಣ, ಸಾಹಿತ್ಯ, ಸಾಮಾಜಿಕ, ಆರೋಗ್ಯ ಹಾಗೂ ಧಾರ್ಮಿಕ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದರು.
ಅದೇ ರೀತಿ ಡಾ. ವಸುಂಧರಾ ಭೂಪತಿಯವರು ಸಾಹಿತಿ, ಸಂಘಟಕಿ, ಸಾಮಾಜಿಕ ಹೋರಾಟಗಾರ್ತಿ ಮತ್ತು ಅಂಕಣಗಾರ್ತಿಯಾಗಿ ನಾಡಿನಾದ್ಯಂತ ಪ್ರಸಿದ್ಧರಾಗಿದ್ದಾರೆ. ಅವರು ಹಲವು ಪುಸ್ತಕಗಳು ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಿಗೆ ಅನುವಾದಗೊಂಡಿವೆ. ಕನ್ನಡ ಪುಸ್ತಕ ಪ್ರಾಧಿಕಾರದ ಮೊದಲ ಮಹಿಳಾ ಅಧ್ಯಕ್ಷರಾಗಿ ಪುಸ್ತಕ ಸಂಸ್ಕೃತಿ ಬೆಳೆಸಲು ಹಲವು ಯೋಜನೆಗಳನ್ನು ಕೈಗೊಂಡಿದ್ದರು ಎಂದು ವಿವರಿಸಿದರು.ಸಾನ್ನಿಧ್ಯ ವಹಿಸಿದ್ದ ಪ್ರಭುಸ್ವಾಮೀಜಿ ಮಾತನಾಡಿ, ಬಿ. ನಾಗನಗೌಡ ಹಾಗೂ ಡಾ. ವಸುಂಧರಾ ಭೂಪತಿಯವರು ಕನ್ನಡ ಸಾಹಿತ್ಯ ಪರಿಷತ್‌ನೊಂದಿಗೆ ನಿಕಟ ಸಂಪರ್ಕ ಹೊಂದಿರುವುದು ವಿಶೇಷವಾಗಿದೆ. ಈ ಆಯ್ಕೆ ಯೋಗ್ಯವಾದ ಆಯ್ಕೆಯಾಗಿದೆ ಎಂದರಲ್ಲದೆ, ಉನ್ನತ ಶಿಕ್ಷಣವನ್ನು ನೀಡುವ ವಿಶ್ವವಿದ್ಯಾಲಯಗಳಲ್ಲಿ ಖಾಯಂ ಉಪನ್ಯಾಸಕರ ಕೊರತೆ ಕಂಡು ಬರುತ್ತಿದೆ. ಹಲವು ವಿಶ್ವವಿದ್ಯಾಲಯಗಳು ಆರ್ಥಿಕ ತೊಂದರೆ ಅನುಭವಿಸುತ್ತಿವೆ. ಆದ್ದರಿಂದ ಸರ್ಕಾರ ವಿವಿಗಳಿಗೆ ಅನುದಾನ ಒದಗಿಸಿ, ಅವುಗಳನ್ನು ಸದೃಢವಾಗಿಸಬೇಕು ಹಾಗೂ ಗುಣಮಟ್ಟದ ವಿಶ್ವವಿದ್ಯಾಲಯಗಳನ್ನಾಗಿ ರೂಪಿಸಬೇಕಿದೆ ಎಂದು ತಿಳಿಸಿದರು.
ಕಸಾಪ ತಾಲೂಕು ಘಟಕದ ಮಾಜಿ ಅಧ್ಯಕ್ಷ ಸಿ.ಎಂ. ಶಿಗ್ಗಾವಿಯವರು ಮಾತನಾಡಿದರು. ಕಸಾಪ ತಾಲೂಕು ಘಟಕದ ಕಾರ್ಯದರ್ಶಿ ಜಿ. ವೀರೇಶ್ ಕಾರ್ಯಕ್ರಮ ನಿರೂಪಿಸಿದರು. ಎಚ್.ಎನ್. ಭೋಸ್ಲೆ ಸ್ವಾಗತಿಸಿದರು. ಎಂ.ಟಿ. ರಾಥೋಡ್ ವಂದಿಸಿದರು.ಕಸಾಪ ತಾಲೂಕು ಘಟಕದ ಪದಾಧಿಕಾರಿಗಳಾದ ಷಣ್ಮುಖರಾವ್, ಕೆ. ಕುಮಾರಸ್ವಾಮಿ, ಬಿ.ಎಂ. ಮಹಾಂತೇಶ್ ಹಾಗೂ ಶಿವಮೂರ್ತಿಸ್ವಾಮಿ ಸೋವೇನಹಳ್ಳಿ ಉಪಸ್ಥಿತರಿದ್ದರು.