ನಾಗಲಾಪೂರ ಶಾಲೆಗೆ ಬೀಗ ಜಡಿದು ಪ್ರತಿಭಟನೆ

| Published : Jun 13 2024, 12:47 AM IST

ಸಾರಾಂಶ

ಮುದಗಲ್ ಸಮೀಪ ನಾಗಲಾಪೂರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಗ್ರಾಮಸ್ಥರು ಬೀಗ ಜಡಿದು ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಮುದಗಲ್

ಮಕ್ಕಳಿಗೆ ತಳಪಾಯದ ಗಟ್ಟಿ ಮುಟ್ಟಾದ ಶಿಕ್ಷಣ ಕೊಡುತ್ತಿರುವ ಶಿಕ್ಷಕರೇ ದಿನಂಪ್ರತಿ ತಡವಾಗಿ ಶಾಲೆಗೆ ಬರುತ್ತಿರುವದಕ್ಕೆ ಬೇಸತ್ತ ಗ್ರಾಮಸ್ಥರು ಶಾಲೆಗೆ ಬೀಗ ಜಡಿದು ಪ್ರತಿಭಟಿಸಿ ಬುಧವಾರ ಆಕ್ರೋಶ ವ್ಯಕ್ತಪಡಿಸಿದರು.

ಸಮೀಪದ ನಾಗಲಾಪೂರ ಗ್ರಾಮದಲ್ಲಿ 1ರಿಂದ 7ನೇ ತರಗತಿಯವರೆಗೆ ಪ್ರಾಥಮಿಕ ಶಿಕ್ಷಣ ನೀಡುವ ಹಿನ್ನೆಲೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇದೆ. ಅದರಲ್ಲಿ ನೂರಾರು ವಿದ್ಯಾರ್ಥಿಗಳು ಪ್ರಾಥಮಿಕ ಹಂತದಲ್ಲಿ ಉತ್ತಮ ಶಿಕ್ಷಣ ಪಡೆದುಕೊಂಡು ಶೈಕ್ಷಣಿಕ ಅಡಿಪಾಯವನ್ನು ಗಟ್ಟಿ ಮುಟ್ಟಿಗೊಳಿಸಕೊಳ್ಳಬೇಕೆನ್ನುವ ನಿಟ್ಟಿನಲ್ಲಿ ಕನಸು ಕಾಣುತ್ತಿರುವ ಮಕ್ಕಳಿಗೆ ಶಿಕ್ಷಕರ ಸಮಸ್ಯೆ ನಡುವೆಯೂ ಕೂಡ ಇದ್ದ ನಾಲ್ಕು ಶಿಕ್ಷಕರು ತಡವಾಗಿ ಬರುವದರಿಂದ ಮಕ್ಕಳ ಶಿಕ್ಷಣ ಮಟ್ಟ ಕುಂಠಿತಗೊಳ್ಳುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದರು.

1 ರಿಂದ 7ನೇ ತರಗತಿಯವರೆಗೆ 360 ವಿದ್ಯಾರ್ಥಿಗಳಿದ್ದು, 1ರಿಂದ 5 ಆಂಗ್ಲ ಮಾಧ್ಯಮ ಸೇರಿ 13 ತರಗತಿಗಳಿವೆ. ಇನ್ನು 11 ಶಿಕ್ಷಕರ ಹುದ್ದೆಗಳಲ್ಲಿ ಕೇವಲ 6 ಜನ ಶಿಕ್ಷಕರಿರುವದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಇದ್ದ ಬೆರಳೆಣಿಕೆ ಶಿಕ್ಷಕರು ಈ ರೀತಿಯಾಗಿ ತಡವಾಗಿ ಶಾಲೆಗೆ ಬಂದರೆ ಮಕ್ಕಳ ಶಿಕ್ಷಣದ ಪರಿಸ್ಥಿತಿಯ ಏನಾಗುತ್ತದೆ ಎಂದು ಪ್ರತಿಭಟನಾ ನಿರತರು ಪ್ರಶ್ನಿಸಿದರು. ಅಧಿಕಾರಿಗಳು ಶೀಘ್ರವೇ ಕ್ರಮ ಕೈಕೊಳ್ಳಬೇಕು ಇಲ್ಲವಾದರಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಪ್ರತಿಭಟನಾ ನಿರತರು ಸ್ಥಳದಲ್ಲಿದ್ದ ಸಿಆರ್‌ಪಿ ಬಸವರಾಜಗೆ ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಕೆಪಿಆರ್‌ಎಸ್ ಅಧ್ಯಕ್ಷ ಆಂಜನೇಯ, ಪ್ರಧಾನ ಕಾರ್ಯದರ್ಶಿ ಹನುಮಂತ ಛಲವಾದಿ, ಹನುಮಂತಗೌಡ ಸೇರಿ ಪಾಲಕರು, ಗ್ರಾಮಸ್ಥರು ಇದ್ದರು.