ನಾಗಮಂಗಲ: ರಸ್ತೆಗಿಳಿದ 13 ಸಾರಿಗೆ ಬಸ್‌ಗಳು ಸಂಚಾರ

| Published : Aug 05 2025, 11:45 PM IST

ಸಾರಾಂಶ

38 ತಿಂಗಳ ವೇತನ ಹಿಂಬಾಕಿ (ಅರಿಯರ್ಸ್‌) ಮತ್ತು ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೆಎಸ್‌ಆರ್‌ಟಿಸಿ ನಾಗಮಂಗಲ ಘಟಕದ ಸಾರಿಗೆ ನೌಕರರು ಮಂಗಳವಾರ ಮುಷ್ಕರ ನಡೆಸಿದರು. ಇದರಿಂದಾಗಿ ಪ್ರಯಾಣಿಕರು ಮತ್ತು ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಬಸ್‌ಗಳಿಲ್ಲದೆ ಪರದಾಡಿದರು.

ಕನ್ನಡಪ್ರಭವಾರ್ತೆ ನಾಗಮಂಗಲ

38 ತಿಂಗಳ ವೇತನ ಹಿಂಬಾಕಿ (ಅರಿಯರ್ಸ್‌) ಮತ್ತು ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೆಎಸ್‌ಆರ್‌ಟಿಸಿ ನಾಗಮಂಗಲ ಘಟಕದ ಸಾರಿಗೆ ನೌಕರರು ಮಂಗಳವಾರ ಮುಷ್ಕರ ನಡೆಸಿದರು. ಇದರಿಂದಾಗಿ ಪ್ರಯಾಣಿಕರು ಮತ್ತು ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಬಸ್‌ಗಳಿಲ್ಲದೆ ಪರದಾಡಿದರು.

ನಾಗಮಂಗಲ ಘಟಕದ 74 ಸಾರಿಗೆ ಬಸ್‌ಗಳ ಪೈಕಿ ಕೇವಲ 13 ಬಸ್‌ಗಳು ಮಾತ್ರ ವಿವಿಧ ಮಾರ್ಗಗಳಲ್ಲಿ ಸಂಚಾರ ನಡೆಸಿದರೆ, ಇನ್ನುಳಿದ 60ಕ್ಕೂ ಹೆಚ್ಚು ಸಾರಿಗೆ ಬಸ್‌ಗಳನ್ನು ಕೆಎಸ್‌ಆರ್‌ಟಿಸಿ ಡಿಪೋ ಮತ್ತು ನಿಲ್ದಾಣದಲ್ಲಿ ನಿಲ್ಲಿಸಿ ಸಾರಿಗೆ ನೌಕರರು ಮುಷ್ಕರ ನಡೆಸಿದರು. ಮುನ್ನೆಚ್ಚರಿಕೆಯಾಗಿ ಸಾರಿಗೆ ಡಿಪೋ ಮತ್ತು ನಿಲ್ದಾಣದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ತಾಲೂಕಿನ ಗ್ರಾಮೀಣ ಪ್ರದೇಶದಿಂದ ಪಟ್ಟಣದ ವಿವಿಧ ಶಾಲಾ ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳು ಸಂಪರ್ಕದ ಬಸ್‌ಗಳಿಲ್ಲದೆ ಖಾಸಗಿ ವಾಹನಗಳನ್ನೇ ಅವಲಂಬಿಸಬೇಕಾದ ಅನಿವಾರ್ಯತೆ ಎದುರಾಯಿತು. ಸಾರಿಗೆ ನೌಕರರ ಮುಷ್ಕರದಿಂದಾಗಿ ತಾಲೂಕಿನ ದೇವಲಾಪುರ ಹ್ಯಾಂಡ್‌ಪೋಸ್ಟ್‌ನಲ್ಲಿರುವ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ 350ಕ್ಕೂ ಹೆಚ್ಚು ವಿದ್ಯಾರ್ಥಿಗಳ ಪೈಕಿ ಕೇವಲ 10 ವಿದ್ಯಾರ್ಥಿಗಳು ಹಾಜರಾದರೆ, ಸರ್ಕಾರಿ ಪಾಲಿಟಕ್ನಿಕ್ ಕಾಲೇಜು ಮತ್ತು ಸರ್ಕಾರಿ ಐಟಿಐ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಬೆರಳೆಣಿಕೆಯಷ್ಟಿತ್ತು.

ತಾಲೂಕು ಕೇಂದ್ರದಲ್ಲಿರುವ ಹಲವು ಸರ್ಕಾರಿ ಕಚೇರಿಗಳಿಗೆ ದೂರದ ಊರುಗಳಿಂದ ಬರುವ ಅಧಿಕಾರಿಗಳು ಮತ್ತು ಸಿಬ್ಬಂದಿ ನಿಗಧಿತ ಸಮಯಕ್ಕೆ ಬರಲಾಗಲಿಲ್ಲ. ಶಕ್ತಿ ಯೋಜನೆಯಡಿ ಪ್ರತಿನಿತ್ಯ ಸಾರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣ ಮಾಡುತ್ತಿದ್ದ ಮಹಿಳಾ ಪ್ರಯಾಣಿಕರು ಖಾಸಗಿ ಬಸ್‌ಗಳನ್ನೇ ಅವಲಂಬಿಸಬೇಕಾಯಿತು. ನಿಲ್ದಾಣದಲ್ಲಿ ಗಂಟೆಗಟ್ಟಲೆ ಬಸ್‌ಗಾಗಿ ಕಾಯ್ದು ನಿಂತಿದ್ದ ಪ್ರಯಾಣಿಕರು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದ ದೃಶ್ಯ ಕಂಡುಬಂತು.

ದುಡಿದಿರುವ ಕೂಲಿ ಕೇಳುತ್ತಿದ್ದೇವೆ:

ಕಳೆದ 38 ತಿಂಗಳಿಂದ ನಮಗೆ ಅರಿಯರ್ಸ್‌ ಕೊಟ್ಟಿಲ್ಲ. 2024ರಿಂದ ವೇತನ ಪರಿಷ್ಕರಣೆಯಾಗಿಲ್ಲ. ಈ ಬಗ್ಗೆ ಹಲವು ಬಾರಿ ಮನವಿ ಮಾಡಿಕೊಂಡರೂ ಸರ್ಕಾರ ಯಾವುದೇ ಕ್ರಮವಹಿಸಿಲ್ಲ. ಶಕ್ತಿ ಯೋಜನೆಯನ್ನು ಯಶಸ್ವಿಯಾಗಿ ಕಾರ್ಯರೂಪ ಮಾಡಿದ್ದೇವೆ. ಅದರ ಕೀರ್ತಿ ರಾಜ್ಯ ಸರ್ಕಾರಕ್ಕೆ ಸಲ್ಲುತ್ತದೆ. ನಾವು ಲಾಭಾಂಶದ ಹಣ ಕೇಳುತ್ತಿಲ್ಲ. ದುಡಿದಿರುವ ಕೂಲಿ ಹಣ ಕೇಳುತ್ತಿದ್ದೇವೆ. ನಮಗೂ ಕುಟುಂಬವಿದೆ. ವೇತನವಿಲ್ಲದೆ ಮಕ್ಕಳಿಗೆ ಶಿಕ್ಷಣ ಕೊಡಿಸುವುದಾದರೂ ಹೇಗೆ ಮತ್ತು ಕುಟುಂಬ ನಿರ್ವಹಣೆ ಮಾಡುವುದಾದರೂ ಹೇಗೆಂದು ತೋಚುತ್ತಿಲ್ಲ. ಹಾಗಾಗಿ ಸಾರಿಗೆ ನೌಕರರಿಗೆ ಅನುಕೂಲವಾಗುವ ರೀತಿಯಲ್ಲಿ ಸರ್ಕಾರ ಅಗತ್ಯ ಕ್ರಮವಹಿಸಬೇಕೆಂದು ನಾಗಮಂಗಲ ಘಟಕದ ಸಾರಿಗೆ ನೌಕರ ಎಂ.ಜೆ.ಗಿರೀಶ್ ಆಗ್ರಹಿಸಿದರು.

ಸಾರಿಗೆ ನಿಗಮಗಳಲ್ಲಿ ನಾಲ್ಕು ವರ್ಷಕ್ಕೊಮ್ಮೆ ವೇತನ ಪರಿಷ್ಕರಣೆಯಾಗಬೇಕೆಂಬ ನಿಯಮವಿದೆ. ಆದರಂತೆ 2020ರ ಜನವರಿ 1ರಲ್ಲಿ ವೇತನ ಪರಿಷ್ಕರಣೆಯಾಗಬೇಕಿತ್ತು. ಆದರೆ, ಕೋವಿಡ್ ಹಿನ್ನೆಲೆಯಲ್ಲಿ ಅಂದಿನ ಬಿಜೆಪಿ ಸರ್ಕಾರ ಮೂರು ವರ್ಷ ತಡವಾಗಿ 2023ರಲ್ಲಿ ವೇತನ ಪರಿಷ್ಕರಣೆ ಮಾಡಿತು. ನಂತರದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಈವರೆಗೂ ವೇತನ ಪರಿಷ್ಕರಣೆ ಮಾಡದೆ ಸಾರಿಗೆ ನೌಕರರ ಮೇಲೆ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಆದ್ದರಿಂದ ಸಾರಿಗೆ ನೌಕರರ ಬೇಡಿಕೆಗಳನ್ನು ಈಡೇರಿಸಬೇಕೆಂದು ನೌಕರರು ಸರ್ಕಾರವನ್ನು ಒತ್ತಾಯಿಸಿದರು.