ರಾಜ್ಯ ಸರ್ಕಾರದ ಸಂಪುಟದಲ್ಲಿ ನಾಲ್ಕನೇ ಬಾರಿ ಸಚಿವರಾದ ಬಳಿಕ ಮೊದಲ ಬಾರಿಗೆ ಸ್ವಕ್ಷೇತ್ರಕ್ಕೆ ಸೋಮವಾರ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರಿಗೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಅಭೂತ ಪೂರ್ವ ಸ್ವಾಗತ ಕೋರಿ ಬರಮಾಡಿಕೊಂಡರು.

ಕನ್ನಡಪ್ರಭವಾರ್ತೆ ನಾಗಮಂಗಲ

ರಾಜ್ಯ ಸರ್ಕಾರದ ಸಂಪುಟದಲ್ಲಿ ನಾಲ್ಕನೇ ಬಾರಿ ಸಚಿವರಾದ ಬಳಿಕ ಮೊದಲ ಬಾರಿಗೆ ಸ್ವಕ್ಷೇತ್ರಕ್ಕೆ ಸೋಮವಾರ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರಿಗೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಅಭೂತ ಪೂರ್ವ ಸ್ವಾಗತ ಕೋರಿ ಬರಮಾಡಿಕೊಂಡರು.

ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿ ಮೂಲಕ ತಾಲೂಕಿನ ಗಡಿ ಗ್ರಾಮ ಗೊಂದಿಹಳ್ಳಿಗೆ ಆಗಮಿಸಿದ ಸಚಿವ ಎನ್.ಚಲುವರಾಯಸ್ವಾಮಿ ಅವರಿಗೆ ಶಿಷ್ಟಾಚಾರದಂತೆ ತಾಲೂಕು ಆಡಳಿತದಿಂದ ತಹಸೀಲ್ದಾರ್ ಅಶೋಕ್, ತಾಪಂ ಇಒ ಸತೀಶ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹೂಗುಚ್ಚ ನೀಡಿ ಸ್ವಾಗತ ಕೋರಿದರು.

ನಂತರ ನೆಲ್ಲಿಗೆರೆ ಕ್ರಾಸ್ ಬಳಿಯಿರುವ ಟೋಲ್‌ ಕೇಂದ್ರಕ್ಕೆ ಸಚಿವರು ಆಗಮಿಸುತ್ತಿದ್ದಂತೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಬೃಹತ್ ಪಟಾಕಿ ಸಿಡಿಸಿ ಜಯಘೋಷದೊಂದಿಗೆ ಹೂಮಾಲೆ ಹಾಕಿ ಆತ್ಮೀಯವಾಗಿ ಬರಮಾಡಿಕೊಂಡರು. ಮಹಿಳಾ ಕಾಂಗ್ರೆಸ್

ಕಾರ್ಯಕರ್ತರು ಬೆಲ್ಲದಾರತಿ ಮಾಡಿ ಸ್ವಾಗತ ಕೋರಿದರು.

ನೆರೆದಿದ್ದ ಸಹಸ್ರಾರು ಕಾರ್ಯಕರ್ತರು ಮತ್ತು ಅಭಿಮಾನಿಗಳು ಬೈಕ್ ರ್‍ಯಾಲಿಯೊಂದಿಗೆ ಬೆಳ್ಳೂರು ಕ್ರಾಸ್‌ಗೆ ಸಚಿವರನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಕರೆತಂದು ಪಟಾಕಿ ಸಿಡಿಸಿ ಜೆಸಿಬಿ ಯಂತ್ರಗಳಲ್ಲಿ ಪುಷ್ಪವೃಷ್ಟಿ ಮಾಡುವ ಜೊತೆಗೆ ಕ್ರೇನ್ ಯಂತ್ರದ ಮೂಲಕ ಬೃಹತ್ ಗಾತ್ರದ ಬೆಲ್ಲದ ಹಾರ ಹಾಕಿ ಅದ್ಧೂರಿ ಸ್ವಾಗತ ಕೋರಿದರು. ಬೆಳ್ಳೂರು ಕ್ರಾಸ್‌ನಲ್ಲಿ ನಿಲ್ಲಿಸಿದ್ದ ಚಲುವರಾಯಸ್ವಾಮಿ ಅವರ ಬೃಹತ್ ಕಟೌಟ್‌ಗೆ ಅಭಿಮಾನಿಗಳು ಹಾಲಿನ ಅಭಿಷೇಕ ಮಾಡಿ ಸಂಭ್ರಮಿಸಿದರು.

ಬಳಿಕ ಬೆಳ್ಳೂರು ಕ್ರಾಸ್‌ನಿಂದ ನಾಗಮಂಗಲ ಪಟ್ಟಣದವೆರೆಗೂ ಸಿಗುವ ಹಲವು ಗ್ರಾಮಗಳು ಮತ್ತು ಗೇಟ್‌ಗಳಲ್ಲಿ ಪಟಾಕಿ ಸಿಡಿಸಿ ಜಯಘೋಷದೊಂದಿಗೆ ಚಲುವರಾಯಸ್ವಾಮಿ ಅವರಿಗೆ ಸ್ವಾಗತ ಕೋರಲಾಯಿತು. ದಾರಿಯುದ್ದಕ್ಕೂ ನಿಂತಿದ್ದ ಮಹಿಳೆಯರು, ಮಕ್ಕಳು ಹಾಗೂ ವೃದ್ಧರು ಸಚಿವರತ್ತ ಕೈ ಬೀಸಿ ಸ್ವಾಗತ ಕೋರಿದರೆ ಹಿರಿಯರು ಆಶೀರ್ವದಿಸಿ ಶುಭಕೋರಿದರು.

ಪಟ್ಟಣದ ಟಿ.ಮರಿಯಪ್ಪ ವೃತ್ತಕ್ಕೆ ಆಗಮಿಸಿದ ಸಚಿವ ಚಲುವರಾಯಸ್ವಾಮಿ ಅವರು ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಬಳಿಕ ತಾಲೂಕು ಆಡಳಿತ ಸೌಧದ ಆವರಣದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧೀಜಿ ಅವರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿ ನಂತರ ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀ ಸೌಮ್ಯಕೇಶವಸ್ವಾಮಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ದೇವರ ಆಶೀರ್ವಾದ ಪಡೆದುಕೊಂಡರು.

ಮೆರುಗು ನೀಡಿದ ಜಾನಪದ ಕಲಾತಂಡ ಪಟ್ಟಣದ ಹೊರವಲಯ ಎಪಿಎಂಸಿ ಯಾರ್ಡ್‌ನಿಂದ ನೂರಾರು ಮಹಿಳೆಯರೂ ಕೂಡ ಬೈಕ್ ರ್ಯಾಲಿ ನಡೆಸಿದರು. ಟಿ.ಬಿ.ಬಡಾವಣೆಯ ಉಪ್ಪಾರಹಳ್ಳಿ ಗೇಟ್‌ನಿಂದ ಪಟ್ಟಣದ ಟಿ.ಮರಿಯಪ್ಪ ವೃತ್ತದವರೆಗೆ ನಡೆದ ಮೆರವಣಿಗೆಯಲ್ಲಿ ಮಹಿಳೆಯರ ಡೊಳ್ಳು ಕುಣಿತ, ಪೂಜಾ ಕುಣಿತ, ವೀರಗಾಸೆ ಕುಣಿತ, ತಮಟೆ ಮೇಳ, ಸ್ಥಬ್ದಚಿತ್ರ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳು ಮೆರಗು ನೀಡಿದವು.

ಪುಷ್ಪವೃಷ್ಟಿಯೊಂದಿಗೆ ಬೃಹತ್ ಹಾರಗಳಿಂದ ಸ್ವಾಗತ:

ಸಚಿವ ಚಲುವರಾಯಸ್ವಾಮಿ ಅವರಿಗೆ ಟಿ.ಬಿ.ಬಡಾವಣೆಯ ಬಿಜಿಎಸ್ ವೃತ್ತದಲ್ಲಿ ಕ್ರೇನ್ ಯಂತ್ರದ ಮೂಲಕ ಬೃಹತ್ ಗಾತ್ರದ ಮುಸುಕಿನ ಜೋಳದ ಹಾರ ಹಾಕಿದರೆ, ಬ್ಲಾಕ್ ಕಾಂಗ್ರೆಸ್ ಕಚೇರಿ ಮುಂಭಾಗ ವಿವಿಧ ಬಗೆಯ ಹಣ್ಣುಗಳ ಹಾರ, ಟಿ.ಮರಿಯಪ್ಪ ವೃತ್ತದಲ್ಲಿ ಸೇಬಿನ ಹಾರ, ಮಂಡ್ಯ ವೃತ್ತದಲ್ಲಿ ಮೋಸಂಬಿ ಹಾರದ ಜೊತೆಗೆ ಜೆಸಿಬಿ ಯಂತ್ರಗಳಿಂದ ಪುಷ್ಪವೃಷ್ಟಿ ಮಾಡಿ

ಅಭಿಮಾನಿಗಳು ಅದ್ದೂರಿ ಸ್ವಾಗತ ಕೋರಿದರು.

ಸಚಿವರ ಆಗಮನದ ಹಿನ್ನೆಲೆಯಲ್ಲಿ ತಾಲೂಕಿನ ಗಡಿ ಗ್ರಾಮದಿಂದ ಪಟ್ಟಣದ ವರೆಗೂ ದಾರಿಯುದ್ದಕ್ಕೂ ತಳಿರು ತೋರಣ, ಕಾಂಗ್ರೆಸ್ ಪಕ್ಷದ ಬಾವುಟ, ಸ್ವಾಗತ ಕೋರುವ ಬ್ಯಾನರ್‌ಗಳನ್ನು ಕಟ್ಟಲಾಗಿತ್ತು. ಪಟ್ಟಣ ವ್ಯಾಪ್ತಿಯ ಎರಡೂ ರಸ್ತೆ ಬದಿಗಳಲ್ಲಿ

ಚಲುವರಾಯಸ್ವಾಮಿ ಅವರ ಬೃಹತ್ ಕಟೌಟ್‌ಗಳು, ಸ್ವಾಗತ ಕಮಾನುಗಳು, ಪಕ್ಷದ ಬಾವುಟಗಳು ರಾರಾಜಿಸುತ್ತಿದ್ದವು. ಭಾರಿ ಸದ್ದಿನ ಪಟಾಕಿಗಳನ್ನು ಸಿಡಿಸಿದ ಕೈ ಪಕ್ಷದ ಕಾರ್ಯಕರ್ತರು ಜಯಘೋಷ ಮೊಳಗಿಸಿ ಸಂಭ್ರಮಿಸಿದರು.

ತುಂತುರು ಮಳೆಯ ಸಿಂಚನ:

ಸೋಮವಾರ ಬೆಳಿಗ್ಗೆಯಿಂದ ಸಂಜೆ ವರೆಗೂ ತಾಲೂಕಿನಾದ್ಯಂತ ಬಿಸಿಲಿನ ವಾತಾವರಣವಿತ್ತಾರೂ ತಾಲೂಕಿನ ನೆಲ್ಲಿಗೆರೆ ಟೋಲ್ ಕೇಂದ್ರಕ್ಕೆ ಸಚಿವ ಚಲುವರಾಯಸ್ವಾಮಿ ಆಗಮನವಾಗುತ್ತಿದ್ದಂತೆ ಇದ್ದಕ್ಕಿದ್ದಂತೆ ಪವಾಡದ ರೀತಿಯಲ್ಲಿ ತುಂತುರು ಮಳೆಯ ಸಿಂಚನವಾಯಿತು. ಬಳಿಕ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಸಚಿವರು ಪಟ್ಟಣಕ್ಕೆ ಪ್ರವೇಶಿಸುತ್ತಿದ್ದಂತೆ ಉಪ್ಪಾರಹಳ್ಳಿ ಗೇಟ್‌ನಲ್ಲಿಯೂ ಸಹ ತುಂತುರು ಮಳೆಯ ಸಿಂಚನವಾಗುತ್ತಿದ್ದಂತೆ ನೆರೆದಿದ್ದ ಕಾರ್ಯಕತರ್ಯರು ಇದು ಸಚಿವರಿಗೆ ಶುಭಸೂಚನೆ ಎಂದು ಜಯಘೋಷ ಮೊಳಗಿಸಿ ಸಂಭ್ರಮಿಸಿದರು.

ಹೊಸ ಇತಿಹಾಸ ಸೃಷ್ಟಿಸಿದ ಕಾರ್ಯಕರ್ತರು:

ನಾಲ್ಕನೇ ಬಾರಿ ಸಚಿವರಾದ ಬಳಿಕ ಮೊದಲ ಬಾರಿಗೆ ಸ್ವಕ್ಷೇತ್ರಕ್ಕೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರಿಗೆ ಅಭೂತಪೂರ್ವ ಸ್ವಾಗತ ಕೋರಲು ಕಾಂಗ್ರೆಸ್ ಪಕ್ಷದ ಸಹಸ್ರಾರು ಕಾರ್ಯಕರ್ತರು ಮತ್ತು ಅಭಿಮಾನಿಗಳು ಉತ್ಸುಕರಾಗಿ ನಿಂತಿದ್ದರು. ಹಿಂದೆಂದೂ ಕಂಡರಿಯದ ರೀತಿ ಯಲ್ಲಿ ಸ್ವಾಗತ ಕೋರುವ ಕಟೌಟ್, ಬ್ಯಾನರ್, ಬಂಟಿಂಗ್ಸ್‌ಗಳನ್ನು ಕಟ್ಟಿ ಸಾವಿರಕ್ಕೂ ಹೆಚ್ಚು ಬೈಕ್‌ಗಳು, ನೂರಾರು ಕಾರುಗಳ ರ್ಯಾಲಿ ನಡೆಸಿ ಸಚಿವರನ್ನು ತವರು ಕ್ಷೇತ್ರಕ್ಕೆ ಬರಮಾಡಿಕೊಂಡ ಕೈ ಪಕ್ಷದ ಕಾರ್ಯಕರ್ತರು ಹೊಸ ಇತಿಹಾಸಕ್ಕೆ ಮುನ್ನುಡಿ ಬರೆದರು.