ಲೋಕಾಯುಕ್ತ ಪೊಲೀಸರು ಈ ಬಗ್ಗೆ ನಾಗಮಂಗಲ ಪೊಲೀಸ್ ಠಾಣೆಯಲ್ಲಿ ೧೧ ಜನ ಸರ್ಕಾರಿ ನೌಕರರು, ಖಾಸಗಿ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿ ಏಳು ಜನರನ್ನು ಬಂಧಿಸಿ, ಮೂವರು ನಾಪತ್ತೆಯಾಗಿ ಹೈಕೋರ್ಟ್‌ನಿಂದ ಜಾಮೀನು ಪಡೆದುಕೊಂಡಿದ್ದಾರೆ.
- ಸರ್ಕಾರಿ ಭೂಕಬಳಿಕೆ ಪ್ರಕರಣ ತನಿಖೆ ಕುಂಠಿತ; ಅಪರಾಧಿಗಳು ತಪ್ಪಿಸಿಕೊಳ್ಳಲು ಹುನ್ನಾರ
- ನಕಲಿ ಅಂಗವಿಕಲ ಪ್ರಮಾಣಪತ್ರ, ಅತಿವೃಷ್ಠಿ ಅನುದಾನ ದುರುಪಯೋಗ, ಬಗರ್‌ಹುಕುಂ ಸಾಗುವಳಿ ಅಕ್ರಮ- ಎಲ್ಲಾ ಹಗರಣಗಳೂ ವಿಶೇಷ ತನಿಖಾ ತಂಡದಿಂದ ತನಿಖೆಯಾಗಲಿ: ಕೆ.ಆರ್.ರವೀಂದ್ರ
ಕನ್ನಡಪ್ರಭ ವಾರ್ತೆ ಮಂಡ್ಯನಾಗಮಂಗಲ ಸರ್ಕಾರಿ ಭೂ-ಕಬಳಿಕೆ ಪ್ರಕರಣ, ಗ್ರಾಮ ಆಡಳಿತಾಧಿಕಾರಿಗಳ ನಕಲಿ ಅಂಗವಿಕಲ ಪ್ರಮಾಣಪತ್ರ, ಕೋವಿಡ್-೧೯, ಅತಿವೃಷ್ಟಿ ಅನುದಾನದಲ್ಲಿ ೩ ಕೋಟಿ ರು. ಹಣ ದುರುಪಯೋಗ ಪ್ರಕರಣಗಳು ಜಂಟಿ ತನಿಖಾ ತಂಡದಿಂದ ದೃಢಪಟ್ಟಿದೆ. ಈ ಎಲ್ಲಾ ಪ್ರಕರಣಗಳ ತನಿಖೆಗೆ ವಿಶೇಷ ತನಿಖಾ ತಂಡವನ್ನು ನೇಮಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಸಾಮಾಜಿಕ ಹೋರಾಟಗಾರ ಕೆ.ಆರ್.ರವೀಂದ್ರ ಒತ್ತಾಯಿಸಿದರು.
ನಾಗಮಂಗಲ ತಾಲೂಕಿನಲ್ಲಿ ೪೩,೮೫೫ ಎಕರೆ ಅರಣ್ಯ ಇಲಾಖೆಗೆ ಸೇರಿದ ಜಮೀನು, ೨೯,೨೩೦ ಎಕರೆ ಗೋಮಾಳ, ೧೦೦.೩೭ ಎಕರೆ ಗುಂಡುತೋಪು ಜಮೀನು ಇದೆ. ಅರಣ್ಯ ಮತ್ತು ಕಂದಾಯ ಇಲಾಖೆಗೆ ಸೇರಿದ ಸಾವಿರಾರು ಕೋಟಿ ರು. ಬೆಲೆ ಬಾಳುವ ಸಾವಿರಾರು ಎಕರೆ ಜಮೀನನ್ನು ನಕಲಿ ದಾಖಲೆ ಸೃಷ್ಟಿಸಿಕೊಂಡು ಪ್ರಭಾವಶಾಲಿಗಳು, ಖಾಸಗಿ ವ್ಯಕ್ತಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು, ನೌಕರರು ಅಧಿಕಾರ ದುರುಪಯೋಗಪಡಿಸಿಕೊಂಡು ಅಕ್ರಮವೆಸಗಿರುವುದು ತನಿಖೆಯಿಂದ ದೃಢಪಟ್ಟಿರುವುದಾಗಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಲೋಕಾಯುಕ್ತ ಪೊಲೀಸರು ಈ ಬಗ್ಗೆ ನಾಗಮಂಗಲ ಪೊಲೀಸ್ ಠಾಣೆಯಲ್ಲಿ ೧೧ ಜನ ಸರ್ಕಾರಿ ನೌಕರರು, ಖಾಸಗಿ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿ ಏಳು ಜನರನ್ನು ಬಂಧಿಸಿ, ಮೂವರು ನಾಪತ್ತೆಯಾಗಿ ಹೈಕೋರ್ಟ್‌ನಿಂದ ಜಾಮೀನು ಪಡೆದುಕೊಂಡಿದ್ದಾರೆ. ಜಿಲ್ಲೆಯ ಪೊಲೀಸ್ ಅಧೀಕ್ಷಕರು ಈ ಪ್ರಕರಣಗಳನ್ನು ಸಿಐಡಿಗೆ ವರ್ಗಾಯಿಸುಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಪ್ಸ್ತಾವನೆ ಸಲ್ಲಿಸಿದ್ದು, ಪೊಲೀಸ್ ಮಹಾನಿರ್ದೇಶಕರು ಮಂಡ್ಯ ಜಿಲ್ಲಾ ಪೊಲೀಸರೇ ತನಿಖೆ ನಡೆಸುವಂತೆ ವಾಪಸ್ ಕಳುಹಿಸಿದ್ದಾರೆ. ಇದೀಗ ಪ್ರಕರಣಗಳ ತನಿಖೆ ನಡೆಸುತ್ತಿದ್ದ ಅಪರ ಪೊಲೀಸ್ ಅಧೀಕ್ಷಕರು ಅನಾರೋಗ್ಯದಿಂದ ಮೃತಪಟ್ಟಿದ್ದು ತನಿಖೆ ವಿಳಂಬವಾಗುತ್ತಿದೆ. ಅಪರಾಧಿಗಳು ಕಾನೂನಿನ ಚೌಕಟ್ಟಿನಿಂದ ತಪ್ಪಿಸಿಕೊಳ್ಳಲು ಹುನ್ನಾರ ನಡೆಸುತ್ತಿದ್ದಾರೆ. ಆದ ಕಾರಣ ಕೂಡಲೇ ಎಲ್ಲಾ ಪ್ರಕರಣಗಳನ್ನು ಎಸ್‌ಐಟಿಗೆ ವಹಿಸುವಂತೆ ರಾಜ್ಯ ಸರ್ಕಾರವನ್ನು ಆಗ್ರಹಪಡಿಸಿದರು.
ನಾಗಮಂಗಲ ತಾಲೂಕಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸಾವಿರಾರು ಎಕರೆ ಸರ್ಕಾರಿ ಜಮೀನನ್ನು ಭೂ ಕಬಳಿಕೆ ಮಾಡಿ ಸರ್ಕಾರಕ್ಕೆ ಸಾವಿರಾರು ಕೋಟಿ ರು. ಆರ್ಥಿಕ ನಷ್ಟ ಉಂಟುಮಾಡಿರುವ ಕುರಿತು ಎಲ್ಲಾ ಪ್ರಕರಣಗಳನ್ನು ಲೋಕಾಯುಕ್ತ ಪೊಲೀಸ್ ಅಥವಾ ಸಿಬಿಐಗೆ ವಹಿಸುವಂತೆ ಕಳೆದ ಜನವರಿ ೨೧ರಂದೇ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರೂ ಈವರೆಗೂ ಕ್ರಮ ಆಗಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.ನಾಗಮಂಗಲ ತಾಲೂಕು ಬಗರ್‌ಹುಕುಂ ಸಕ್ರಮೀಕರಣ ಸಮಿತಿಯಲ್ಲಿ ೧.೧.೨೦೨೨ರಿಂದ ೩೦.೬.೨೦೨೩ರ ಅವಧಿಯಲ್ಲಿ ನಿಯಮಗಳನ್ನು ಉಲ್ಲಂಘಿಸಿ ಜಮೀನು ಮಂಜೂರಾತಿ ಮಾಡಿ ಸಾಗುವಳಿ ಚೀಟಿ ನೀಡಿರುವ ಬಗ್ಗೆ ಅಂದಿನ ತಹಸೀಲ್ದಾರ್ ಎಲ್.ಎಂ.ನಂದೀಶ್ ಹಾಗೂ ಇತರರ ವಿರುದ್ಧ ಸೂಕ್ತ ಶಿಸ್ತು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸಿದ್ದು ಜಂಟಿ ವಿಚಾರಣೆಗೆ ಆದೇಶಿಸಿದ್ದಾರೆ. ಇದನ್ನೂ ವಿಶೇಷ ತನಿಖಾ ತಂಡಕ್ಕೆ ವಹಿಸುವಂತೆ ಒತ್ತಾಯಿಸಿದರು.
ನಕಲಿ ಅಂಗವಿಕಲ ಪ್ರಮಾಣಪತ್ರ ನೀಡಿ ಕಂದಾಯ ಇಲಾಖೆಗೆ ಆಯ್ಕೆಯಾಗಿದ್ದ ೮ ಮಂದಿ ಗ್ರಾಮ ಆಡಳಿತಾಧಿಕಾರಿಗಳ ಮೇಲಿನ ಆರೋಪ ದೃಢಪಟ್ಟು ಸೇವೆಯಿಂದ ವಜಾಗೊಳಿಸಿ, ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣಗಳನ್ನು ಹೆಚ್ಚಿನ ವಿಚಾರಣೆಗೆ ವಿಶೇಷ ತನಿಖಾ ತಂಡಕ್ಕೆ ವಹಿಸುವಂತೆ ಆಗ್ರಹಿಸಿದರು.ನಾಗಮಂಗಲ ತಾಲೂಕಿನಲ್ಲಿ ಪ್ರಕೃತಿ ವಿಕೋಪ ಮತ್ತು ಕೋವಿಡ್-೧೯ಗೆ ಸಂಬಂಧಿಸಿದಂತೆ ೩ ಕೋಟಿ ರು.ಗೂ ಅಧಿಕ ಹಣ ದುರುಪಯೋಗವಾಗಿರುವ ಬಗ್ಗೆ ಜಿಲ್ಲಾಧಿಕಾರಿಗಳು ತನಿಖಾ ತಂಡವನ್ನು ರಚಿಸಿದ್ದಾರೆ. ತನಿಖಾ ತಂಡ ನೀಡಿರುವ ವರದಿಯಂತೆ ಹಣ ದುರುಪಯೋಗವಾಗಿರುವುದು ಕಂಡುಬಂದಿರುವುದರಿಂದ ಹಿಂದಿನ ತಹಸೀಲ್ದಾರ ಕುಂ.ಞ.ಅಹಮದ್, ಹಿಂದಿನ ಶಿರಸ್ತೇದಾರ್ ಪ್ರಕಾಶ್, ತಾಲೂಕು ಕಚೇರಿ ಶಿರಸ್ತೇದಾರ್ ಹರ್ಷ, ಹಿಂದಿನ ದ್ವಿತೀಯ ದರ್ಜೆ ಸಹಾಯಕಿ ಉಮಾ ವಿರುದ್ಧ ದೋಷಾರೋಪಣಾ ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಇದನ್ನೂ ವಿಶೇಷ ತನಿಖಾ ತಂಡಕ್ಕೆ ಒಪ್ಪಿಸುವಂತೆ ಒತ್ತಾಯಿಸಿದರು.
೨೦೨೩ರ ಜನವರಿ ೧ರಂದು ನಡೆದ ಬಗರ್‌ಹುಕುಂ ಸಾಗುವಳಿ ಮಂಜೂರಾತಿ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಹಾಗೂ ಶಾಸಕ ಕೆ.ಸುರೇಶ್‌ಗೌಡ ಮತ್ತಿತರರು ಬಗರ್‌ಹುಕುಂ ಸಾಗುವಳಿ ಮಂಜೂರಾತಿ ಪತ್ರ ವಿತರಣೆ ಮಾಡಿದ್ದರು. ಒಂದೇ ದಿನ ನೂರಾರು ಬಗರ್‌ಹುಕುಂ ಸಾಗುವಳಿ ಮಂಜೂರು ಪತ್ರ ವಿತರಣೆ ಮಾಡಿದ್ದರು. ಬಗರ್‌ಹುಕುಂ ಸಕ್ರಮೀಕರಣ ಸಮಿತಿಯಲ್ಲಿದ್ದವರೂ ಕೂಡ ಅಕ್ರಮವಾಗಿ ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಜಮೀನನ್ನು ಮಂಜೂರು ಮಾಡಿಸಿಕೊಂಡಿದ್ದಾರೆ. ಈ ಪ್ರಕರಣವನ್ನೂ ಎಸ್‌ಐಟಿ ತನಿಖೆಗೆ ವಹಿಸುವಂತೆ ಆಗ್ರಹಪಡಿಸಿದರು.