ನಾಗಮಂಗಲ: ಶ್ರೀರಾಮನವಮಿ ಸಡಗರ, ಸಂಭ್ರಮ, ಶ್ರದ್ಧಾಭಕ್ತಿಯಿಂದ ಆಚರಣೆ

| Published : Apr 07 2025, 12:33 AM IST

ನಾಗಮಂಗಲ: ಶ್ರೀರಾಮನವಮಿ ಸಡಗರ, ಸಂಭ್ರಮ, ಶ್ರದ್ಧಾಭಕ್ತಿಯಿಂದ ಆಚರಣೆ
Share this Article
  • FB
  • TW
  • Linkdin
  • Email

ಸಾರಾಂಶ

ನಾಗಮಂಗಲ ಪಟ್ಟಣದ ಮಂಡ್ಯ ವೃತ್ತದ ಶ್ರೀಆಂಜನೇಯಸ್ವಾಮಿ ದೇವಸ್ಥಾನ, ಪಡುವಲಪಟ್ಟಣ ರಸ್ತೆ ಬೆಟ್ಟದ ಆಂಜನೇಯಸ್ವಾಮಿ ದೇಗುಲ, ಹುಲ್ಲೆಸಳೆ ಆಂಜನೇಯಸ್ವಾಮಿ ದೇವಾಲಯ ಸೇರಿದಂತೆ ತಾಲೂಕಿನ ಇತಿಹಾಸ ಪ್ರಸಿದ್ಧ ದೇವಸ್ಥಾನಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು.

ಕನ್ನಡಪ್ರಭ ವಾರ್ತೆ ನಾಗಮಂಗಲ

ನಾಗಮಂಗಲ ಮತ್ತು ಬೆಳ್ಳೂರು ಪಟ್ಟಣ ಸೇರಿದಂತೆ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಭಾನುವಾರ ಶ್ರೀರಾಮನವಮಿಯನ್ನು ಸಂಭ್ರಮ ಸಡಗರ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ಪಟ್ಟಣದ ಟಿ.ಮರಿಯಪ್ಪ ವೃತ್ತದಲ್ಲಿ ಆಟೋ ಚಾಲಕರು ಮತ್ತು ರಸ್ತೆ ಬದಿಯ ವ್ಯಾಪಾರಿಗಳು ಶ್ರೀರಾಮನವಮಿ ಅಂಗವಾಗಿ ಶ್ರೀರಾಮನ ಬೃಹತ್ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸಾರ್ವಜನಿಕರಿಗೆ ಮೊಸರನ್ನ, ಬಾತ್, ಪಾನಕ, ಮಜ್ಜಿಗೆ, ಕೋಸಂಬರಿ ವಿತರಿಸಿದರು.

ಈ ಬಾರಿ ಉತ್ತಮ ಮಳೆಯಾಗಿ ಎಲ್ಲಾ ಕೆರೆ ಕಟ್ಟೆಗಳು ಭರ್ತಿಯಾಗಲಿ, ದೇಶಕ್ಕೆ ಅನ್ನ ನೀಡುವ ರೈತರು ಸಮೃದ್ಧವಾಗಿ ಬೆಳೆ ಬೆಳೆದು, ಜನರು ಆರೋಗ್ಯವಂತ ಜೀವನ ನಡೆಸುವಂತಾಗಲೆಂದು ರಾಮಭಕ್ತರು ಪ್ರಾರ್ಥಿಸಿದರು.

ಪಟ್ಟಣದ ಮಂಡ್ಯ ವೃತ್ತದ ಶ್ರೀಆಂಜನೇಯಸ್ವಾಮಿ ದೇವಸ್ಥಾನ, ಪಡುವಲಪಟ್ಟಣ ರಸ್ತೆ ಬೆಟ್ಟದ ಆಂಜನೇಯಸ್ವಾಮಿ ದೇಗುಲ, ಹುಲ್ಲೆಸಳೆ ಆಂಜನೇಯಸ್ವಾಮಿ ದೇವಾಲಯ ಸೇರಿದಂತೆ ತಾಲೂಕಿನ ಇತಿಹಾಸ ಪ್ರಸಿದ್ಧ ಕಂಬದಹಳ್ಳಿ ಶ್ರೀ ಆಂಜನೇಯಸ್ವಾಮಿ, ಹದ್ದಿನಕಲ್ಲು ಶ್ರೀ ಹನುಮಂತರಾಯಸ್ವಾಮಿ, ದೇವಲಾಪುರದ ಶ್ರೀ ರಾಮಮಂದಿರ, ಶ್ರೀ ಆಂಜನೇಯಸ್ವಾಮಿ, ಸಖಧರೆ ಶ್ರೀ ಆಂಜನೇಯಸ್ವಾಮಿ ಸೇರಿದಂತೆ ಎಲ್ಲಾ ಶ್ರೀರಾಮಾಂಜನೇಯ ದೇವಸ್ಥಾನಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು.

ಪಟ್ಟಣದ ಬಬ್ರುವಾಹನ ಸರ್ಕಲ್‌ನಲ್ಲಿ ಶ್ರೀರಾಮನ ಬೃಹತ್ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಶ್ರೀರಾಮನಾಮ ಸ್ಮರಣೆ ಮಾಡಲಾಯಿತು. ಶ್ರೀರಾಮನವಮಿ ಆಚರಿಸಿದ ಎಲ್ಲಾ ದೇವಾಲಯಗಳಲ್ಲಿ ಸಾರ್ವಜನಿಕರಿಗೆ ಪ್ರಸಾದದ ರೂಪದಲ್ಲಿ ಪಾನಕ, ಮಜ್ಜಿಗೆ, ಕೋಸಂಬರಿ ವಿತರಿಸಲಾಯಿತು.

ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಮರ್ಯಾದಾ ಪುರುಷೋತ್ತಮ ಶ್ರೀರಾಮನ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ರಾಮನವಮಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಪಾಲ್ಗೊಂಡಿದ್ದ ಭಕ್ತರಿಗೆ ಮಜ್ಜಿಗೆ, ಪಾನಕ ಹಾಗೂ ಕೋಸಂಬರಿಯನ್ನು ಪ್ರಸಾದದ ರೂಪದಲ್ಲಿ ವಿತರಿಸಲಾಯಿತು. ಹಲವು ಗ್ರಾಮಗಳಲ್ಲಿ ಭಾನುವಾರ ರಾತ್ರಿ ಶ್ರೀರಾಮನ ಉತ್ಸವ, ಮೆರವಣಿಗೆ ಕಾರ್ಯಕ್ರಮಗಳು ಜರುಗಿದವು.

ಆದಿಚುಂಚನಗಿರಿ:ತಾಲೂಕಿನ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿಯೂ ಶ್ರೀರಾಮನವಮಿಯನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು. ಮಠದ ಪ್ರಧಾನಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ ಸಾನಿಧ್ಯದಲ್ಲಿ ಕ್ಷೇತ್ರಾಧಿದೇವತೆಗಳಿಗೆ ವಿಶೇಷ ಪೂಜಾ ಕೈಂಕರ್ಯ ಜರುಗಿದವು. ಸಾವಿರಾರು ಭಕ್ತರು ಹಾಜರಿದ್ದರು.