ಸಮಾಜ ಸೇವೆ ಸ್ಫೂರ್ತಿಯಾಗಿದ್ದ ನಾಗಮ್ಮ ಕೇಶವಮೂರ್ತಿ

| Published : Jul 02 2024, 01:34 AM IST

ಸಾರಾಂಶ

ನಾಗಮ್ಮ ಕೇಶವ ಮೂರ್ತಿ ಅವರ ಸಂಪರ್ಕಕ್ಕೆ ಬಂದವರಿಗೆಲ್ಲ ನಾವು ಸಮಾಜಕ್ಕೆ ಏನಾದರೂ ಒಳಿತು ಮಾಡಬೇಕೆನ್ನುವ ತುಡಿತ ಬರುತಿತ್ತು. ಅವರು ಅಂಥ ಚಿರಂತನ ಸ್ಫೂರ್ತಿಯಾಗಿದ್ದರು ಎಂದು ನಗರದ ಸಾಧನಾಶ್ರಮದ ಮಾತಾಜಿ ಯೋಗಾನಂದಮಯಿ ನುಡಿದರು.

- "ನಾಗಮ್ಮ ಆಂಟಿ -90- ಒಂದು ನೆನಪು " ಕಾರ್ಯಕ್ರಮದಲ್ಲಿ ಮಾತಾಜಿ ಯೋಗಾನಂದಮಯಿ ಸ್ಮರಣೆ - - - ಕನ್ನಡಪ್ರಭ ವಾರ್ತೆ ದಾವಣಗೆರೆ

ನಾಗಮ್ಮ ಕೇಶವ ಮೂರ್ತಿ ಅವರ ಸಂಪರ್ಕಕ್ಕೆ ಬಂದವರಿಗೆಲ್ಲ ನಾವು ಸಮಾಜಕ್ಕೆ ಏನಾದರೂ ಒಳಿತು ಮಾಡಬೇಕೆನ್ನುವ ತುಡಿತ ಬರುತಿತ್ತು. ಅವರು ಅಂಥ ಚಿರಂತನ ಸ್ಫೂರ್ತಿಯಾಗಿದ್ದರು ಎಂದು ನಗರದ ಸಾಧನಾಶ್ರಮದ ಮಾತಾಜಿ ಯೋಗಾನಂದಮಯಿ ನುಡಿದರು.

ನಗರದ ವನಿತಾ ಸಮಾಜ ಮತ್ತು ಈಶ್ವರಮ್ಮ ಟ್ರಸ್ಟ್ ಸಹಯೋಗದಲ್ಲಿ ಭಾನುವಾರ ಸಂಜೆ ನಗರದ ವನಿತ ಸಮಾಜದ ಆವರಣದ ಸತ್ಯಸಾಯಿ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ "ನಾಗಮ್ಮ ಆಂಟಿ -90- ಒಂದು ನೆನಪು " ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು. ಸಾವಿರಾರು ಜನರಿಂದ ಆಂಟಿ ಎಂದು ಕರೆಯಿಸಿಕೊಂಡಿದ್ದ ಮಹಿಳೆ ಇದ್ದರೆ ಅದು ನಾಗಮ್ಮ ಅವರು ಮಾತ್ರ. ಈಗ ಅವರು ಇಲ್ಲ ಎನ್ನಲು ಆಗುವುದಿಲ್ಲ ಎಂದು ಅಭಿಪ್ರಾಯಿಸಿದರು.

ನಾಗಮ್ಮ ಕೇಶವ ಮೂರ್ತಿ ಅವರಿಗೆ ಕುಟುಂಬಕ್ಕಿಂತ ಹೆಚ್ಚಾಗಿ ಸಮಾಜ ಸೇವೆ ವ್ಯಾಮೋಹ ಇತ್ತು. ಹತ್ತಾರು ಜನರಗೆ ಪ್ರೇರಣೆ ಆಗುವುದು ಸಾಮಾನ್ಯವಾದ ಸಾಧನೆಯಲ್ಲ. ಅಂತಹ ಅಸಾಧಾರಣ ಕೆಲಸವನ್ನು ನಾಗಮ್ಮ ಕೇಶವಮೂರ್ತಿ ಮಾಡಿದ್ದಾರೆ. ಎಲ್ಲ ಜನರನ್ನು ಅವರ ಸಾಮರ್ಥ್ಯಕ್ಕೆ ತಕ್ಕನಾಗಿ ದುಡಿಸಿಕೊಳ್ಳುತ್ತಿದ್ದರು. ಪ್ರೇರಣೆ ಎನ್ನುವುದು ನಮ್ಮೊಳಗೆ ಒಮ್ಮೆ ಬಂದರೆ ಅದು ನಿರಂತರವಾಗಿ ನಮ್ಮನ್ನು ಕೆಲಸ ಮಾಡಿಸುತ್ತದೆ. ನಾಗಮ್ಮ ಅಂಥ ಪ್ರೇರಣೆದಾಯಕ ಶಕ್ತಿಯಾಗಿದ್ದರು. ಅವರು ಇಲ್ಲ ಎನ್ನುವ ಕೊರಗು ಯಾರಿಗೂ ಬರಬಾರದು. ಅವರು ಕಟ್ಟಿದ ಈ ಸಂಸ್ಥೆಯ ಎಲ್ಲ ಕಾರ್ಯಗಳು ಯಾವುದೇ ಅಡೆತಡೆ ಇಲ್ಲದೇ ನಡೆದುಕೊಂಡು ಹೋಗುವಂತಾಗಬೇಕು ಎಂದು ಮಾತಾಜಿ ಮನವಿ ಮಾಡಿದರು.

ಮೌಲ್ಯಾಧಾರಿತ ರಾಜಕಾರಣಿ:

ಹಿರಿಯ ಪತ್ರಕರ್ತ ಬಿ.ಎನ್.ಮಲ್ಲೇಶ್ ಮಾತನಾಡಿ, ನಾಗಮ್ಮ ಗುಣಾಗ್ರಹಿ ಮತ್ತು ಸ್ತ್ರೀ ಪಕ್ಷಪಾತಿಯಾಗಿದ್ದರು. ವ್ಯಕ್ತಿಯ ಗುಣ, ಯೋಗ್ಯತೆ ಅರಿತು ಅವರಿಗೆ ಕೆಲಸ ನೀಡುತ್ತಿದ್ದರು. ಅವರು ಇಂದು ಇಲ್ಲ ಎಂದು ನೊಂದುಕೊಳ್ಳುವ ಅವಶ್ಯಕತೆ ಇಲ್ಲ. 90 ವರ್ಷದ ತುಂಬು ಜೀವನ ನಡೆಸಿ ನಾಗಮ್ಮ ಸಮಾಜಕ್ಕೆ ಅಗಾಧವಾದ ಕೊಡುಗೆ ನೀಡಿ ಹೋಗಿದ್ದಾರೆ. ಅವರು ಮೌಲ್ಯಾಧಾರಿತ ರಾಜಕಾರಣಿಯಾಗಿದ್ದರು. ಸಚಿವರಾಗಿದ್ದ ವೇಳೆ ಶಿಕ್ಷಕರ ನೇಮಕಾತಿ ವೇಳೆ ಶೇ.50 ರಷ್ಟು ಹುದ್ದೆಗಳನ್ನು ಮಹಿಳೆಯರಿಗೆ ಮೀಸಲಿಡಬೇಕೆಂದು ಸರ್ಕಾರದಿಂದ ಆದೇಶ ಮಾಡಿಸಿದ್ದರು. ಅಂದು ಆರಂಭಗೊಂಡು ಈ ಮೀಸಲಾತಿ ಪರಂಪರೆಯಿಂದ ಇಂದು ಸಾಕಷ್ಟು ಮಹಿಳೆಯರು ಜೀವನದಲ್ಲಿ ಮುಂದೆ ಬಂದಿದ್ದಾರೆ. ಸಂಗೀತ, ಸಾಹಿತ್ಯ, ಶಿಕ್ಷಣ, ಅಧ್ಯಾತ್ಮ, ಸಮಾಜ ಸೇವೆ, ರಾಜಕೀಯ ಹೀಗೆ ಎಲ್ಲ ಕ್ಷೇತ್ರಗಳಲ್ಲಿ ತಮ್ಮದೇ ಛಾಪು ಮೂಡಿಸಿದ್ದರು ಎಂದರು.

ವನಿತಾ ಸಮಾಜದ ಅಧ್ಯಕ್ಷೆ ಪದ್ಮಾ ಪ್ರಕಾಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಈಶ್ವರಮ್ಮ ಟ್ರಸ್ಟ್ ಅಧ್ಯಕ್ಷೆ ಉಷಾ ರಂಗನಾಥ್ ಸ್ವಾಗತಿಸಿದರು. ಸಂಗೀತ ರಾಘವೇಂದ್ರ, ವಿದ್ಯಾ ಹೆಗಡೆ ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು. ಅನುರಾಧ ಬಕ್ಕಪ್ಪ ಕಾರ್ಯಕ್ರಮ ನಿರೂಪಿಸಿ, ನಳಿನಿ ಅಚ್ಯುತ ವಂದಿಸಿದರು. ಸುಷ್ಮಾ ಮೋಹನ್, ಸವಿತಾ ಪ್ರಶಾಂತ್, ಇತರರು ಉಪಸ್ಥಿತರಿದ್ದರು.

- - -

ಬಾಕ್ಸ್ ನಾಗಮ್ಮ ಅವರಲ್ಲಿ ಅಗಾಧ ದೂರದೃಷ್ಟಿ ಶೈಕ್ಷಣಿಕ ಸಲಹೆಗಾರ ಜಗನ್ನಾಥ ನಾಡಿಗೇರ್ ಮಾತನಾಡಿ, ಅಭಾವ ನೀಗಿಸುವವರು, ಪ್ರಭಾವ ಬೀರುವವರು ಮತ್ತು ಸ್ವಭಾವ ಬದಲಾಯಿಸುವವರು ಮಾತ್ರ ಜನರ ಮನಸಿನಲ್ಲಿ ಸದಾ ನೆಲೆಸಿರುತ್ತಾರೆ. ಈ ಮೂರು ಗುಣಗಳನ್ನು ಹೊಂದಿದ್ದ ನಾಗಮ್ಮ ಕೇಶವಮೂರ್ತಿ ಅವರಲ್ಲಿದ್ದ ದೂರದೃಷ್ಟಿ ಅಗಾಧವಾಗಿತ್ತು. ಅವರ ದೂರದೃಷ್ಟಿಯ ಚಿಂತನೆಗಳನ್ನು ಭವಿಷ್ಯದ ಪೀಳಿಗೆಗೆ ಕೊಂಡೊಯ್ಯುವ ಜವಾಬ್ದಾರಿ ಎಲ್ಲರ ಮೇಲಿದೆ. ಹಾಗಾಗಿ, ನಾಗಮ್ಮ ಅವರ ಸಾಧನೆ ಪಿಎಚ್‌.ಡಿ ಅಧ್ಯಯನ ಮಾಡುವವರಿಗೆ ವಸ್ತುವಾಗಿದೆ. ಈ ಪುಸ್ತಕ ಭವಿಷ್ಯದ ಯುವಜನಾಂಗಕ್ಕೆ ಆಕ್ಷರ ಗ್ರಂಥವಾಗಬಹುದು ಎಂದರು.

- - - -30ಕೆಡಿವಿಜಿ39ಃ:

ದಾವಣಗೆರೆಯಲ್ಲಿ ವನಿತಾ ಸಮಾಜ ಹಾಗೂ ಈಶ್ವರಮ್ಮ ಟ್ರಸ್ಟ್‌ ವತಿಯಿಂದ ನಾಗಮ್ಮ ಆಂಟಿ- 90- ಒಂದು ನೆನಪು ಕಾರ್ಯಕ್ರಮ ನಡೆಯಿತು.