ಸಾರಾಂಶ
ಕನ್ನಡಪ್ರಭ ವಾರ್ತೆ ನಾಗಮಂಗಲ
ತಾಲೂಕಿನ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಶುಕ್ರವಾರ ನಾಗರ ಪಂಚಮಿ ಪ್ರಯುಕ್ತ ಹೋಮ, ಅಭಿಷೇಕ ಸೇರಿ ವಿಶೇಷ ಪೂಜಾ ಕೈಂಕರ್ಯಗಳು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನೆರವೇರಿದವು.ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಶ್ರೀಗಳ ಸಾನಿಧ್ಯದಲ್ಲಿ ನಡೆದ ನಾಗರ ಪಂಚಮಿ ಪೂಜೆಯಲ್ಲಿ ಕ್ಷೇತ್ರದ ನಾಗರ ವಿಗ್ರಹಗಳಿಗೆ ಹೋಮ, ಅಭಿಷೇಕ, ಕುಂಕುಮ, ಅರಿಶಿಣಾರ್ಚನೆಯೊಂದಿಗೆ, ಫಲಪುಷ್ಪ ಯಾಗಾದಿಗಳೊಂದಿಗೆ ವಿಶೇಷ ಪೂಜಾ ಕೈಂಕೈರ್ಯಗಳನ್ನು ಶ್ರೀಗಳು ನೆರವೇರಿಸಿದರು.
ಶ್ರೀ ಮಠದಲ್ಲಿರುವ 25 ಅಡಿಗೂ ಹೆಚ್ಚು ಎತ್ತರವಿರುವ ನಾಗರ ವಿಗ್ರಹ ಮತ್ತು ಚಿಕ್ಕ ನಾಗರವಿಗ್ರಹಗಳಿಗೆ ಶ್ರೀಗಳು ಅಭಿಷೇಕ, ನೆರವೇರಿಸಿ, ಪೂಜೆ ಸಮರ್ಪಿಸಿದರು. ಹಾಜರಿದ್ದ ಭಕ್ತರು ಪೂಜೆಯಲ್ಲಿ ಪಾಲ್ಗೊಂಡು ಧನ್ಯರಾದರು. ಅಲ್ಲದೇ ತೀರ್ಥ ಪ್ರಸಾದ ಸವಿದರು. ನಾಗರಕಲ್ಲಿಗೆ ಪ್ರದಕ್ಷಣೆ ಹಾಕುವ ಮೂಲಕ ಭಕ್ತಿಭಾವ ಸಮರ್ಪಿಸಿದರು. ನಂತರ ಹಾಜರಿದ್ದ ಭಕ್ತಾದಿಗಳಿಗೆ ಪ್ರಸಾದ ವಿತರಣೆಯಾಯಿತು.ನಾಗರ ಪಂಚಮಿ ಪ್ರಯುಕ್ತ ಶ್ರೀ ಮಠದಲ್ಲಿ ನಾಗರ ವಿಗ್ರಹಕ್ಕೆ ತಳಿರು- ತೋರಣ ಹಾಗೂ ಹೂವಿನಿಂದ ಶೃಂಗಾರ ಮಾಡಲಾಗಿತ್ತು. ನಾಗರ ಪಂಚಮಿ ದಿನದಂದು ನಾಗರ ವಿಗ್ರಹಕ್ಕೆ ಹಾಲಿನ ಅಭಿಷೇಕವನ್ನು ಕೂಡ ನೆರವೇರಿಸಲಾಯಿತು. ನಂತರ ಮಠದ ಬೆಟ್ಟದ ತಪ್ಪಲಿನಲ್ಲಿ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅವರು ಅರಳಿ ಗಿಡವನ್ನು ನೆಟ್ಟು ನೀರೆರೆದರು. ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ, ಚೈತನ್ಯನಾಥ ಸ್ವಾಮೀಜಿ ಸೇರಿದಂತೆ ಭಕ್ತಾದಿಗಳು, ಸಾಧು-ಸಂತರು ಇದ್ದರು.
ಹಲವೆಡೆ ಪೂಜೆ:ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀ ಸೌಮ್ಯಕೇಶವಸ್ವಾಮಿ ದೇವಸ್ಥಾನ ಹಾಗೂ ಶ್ರೀ ಯೋಗನರಸಿಂಹ ಸ್ವಾಮಿ ದೇವಸ್ಥಾನ ಸೇರಿ ತಾಲೂಕಿನ ಹಲವೆಡೆ ನಾಗರ ಪಂಚಮಿ ಪ್ರಯುಕ್ತ ವಿಶೇಷ ಪೂಜೆಗಳು ನೆರವೇರಿದವು.