ನಾಗರ ಪಂಚಮಿ ಹೆಣ್ಣು ಮಕ್ಕಳ ದೊಡ್ಡ ಹಬ್ಬ: ರಂಭಾಪುರಿ ಶ್ರೀ

| Published : Aug 10 2024, 01:37 AM IST

ಸಾರಾಂಶ

ಬಾಳೆಹೊನ್ನೂರು,ಶ್ರಾವಣ ಹಿಂದೂಗಳಿಗೆ ಪವಿತ್ರವಾದ ಮಾಸ. ಶ್ರಾವಣದಿಂದ ಹಬ್ಬಗಳು ಸಾಲು ಸಾಲಾಗಿ ಬರುತ್ತವೆ. ನಾಗರ ಪಂಚಮಿ ಸಹೋದರ ಸಹೋದರಿಯರ ಬಾಂಧವ್ಯ ಬೆಸೆಯುವ ಹಬ್ಬ. ವರ್ಷ ಪೂರ್ತಿ ಸಂತೋಷ ತರುವ ನಾಗರ ಪಂಚಮಿ ಹೆಣ್ಣು ಮಕ್ಕಳಿಗೆ ಬಹು ದೊಡ್ಡ ಹಬ್ಬ ಎಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು ಹೇಳಿದರು.

ಪಂಚಮಿ ಅಂಗವಾಗಿ ನಾಗದೇವತೆಗೆ ಹಾಲೆರೆದ ಜಗದ್ಗುರುಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಶ್ರಾವಣ ಹಿಂದೂಗಳಿಗೆ ಪವಿತ್ರವಾದ ಮಾಸ. ಶ್ರಾವಣದಿಂದ ಹಬ್ಬಗಳು ಸಾಲು ಸಾಲಾಗಿ ಬರುತ್ತವೆ. ನಾಗರ ಪಂಚಮಿ ಸಹೋದರ ಸಹೋದರಿಯರ ಬಾಂಧವ್ಯ ಬೆಸೆಯುವ ಹಬ್ಬ. ವರ್ಷ ಪೂರ್ತಿ ಸಂತೋಷ ತರುವ ನಾಗರ ಪಂಚಮಿ ಹೆಣ್ಣು ಮಕ್ಕಳಿಗೆ ಬಹು ದೊಡ್ಡ ಹಬ್ಬ ಎಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು ಹೇಳಿದರು. ರಂಭಾಪುರಿ ಪೀಠದಲ್ಲಿ ನಾಗರ ಪಂಚಮಿ ಅಂಗವಾಗಿ ನಾಗರಕಟ್ಟೆಯ ನಾಗದೇವತೆಗೆ ಹಾಲೆರೆದು ಆಶೀರ್ವಚನ ನೀಡಿದರು. ನಾಗರ ಪಂಚಮಿಯಂದು ಮಣ್ಣಿನ ನಾಗಪ್ಪನನ್ನು ಮಾಡಿ ಮನೆ ಮಂದಿಯೆಲ್ಲ ಹಾಲೆರೆಯುವ ಹಬ್ಬ. ಹಾಲು ಎರೆಯುವಾಗ ಮನೆಯ ಎಲ್ಲ ಸದಸ್ಯರ ಹೆಸರು ಹೇಳಿ ಹಾಲೆರೆಯುತ್ತಾರೆ. ನಾಗರ ಪಂಚಮಿಯಂದು ನಾನಾ ತರದ ಉಂಡೆಗಳನ್ನು ಮಾಡಿ ನಾಗದೇವತೆಗೆ ನೈವೇದ್ಯ ಮಾಡಿ ಸೇವಿಸುತ್ತಾರೆ.

ಪಂಚಮಿ ಹಬ್ಬ ಬಂತು ಕರಿಯಾಕ ಅಣ್ಣ ಬರಲಿಲ್ಲ. ಯಾಕೋ ಕರಿಯಾಕ ಎಂದು ಗಂಡನ ಮನೆಯಲ್ಲಿರುವ ಹೆಣ್ಣು ಮಕ್ಕಳು ತವರು ಮನೆಯನ್ನು ನೆನಪಿಸಿಕೊಳ್ಳುವ ಹಬ್ಬ. ಸಹೋದರ ಸಹೋದರಿಯರ ಬಾಂಧವ್ಯದ ಬೆಸುಗೆಗೆ ನಾಗರ ಪಂಚಮಿ ಸಾಕ್ಷಿಯಾಗಿದೆ. ರೈತರಿಗೆ ಕಾಟ ಕೊಡದೇ ಕೀಟಗಳನ್ನು ತಿಂದು ಉತ್ತಮ ಫಸಲು ಬರಲಿ ಎಂಬ ಕಾರಣಕ್ಕೆ ನಾಗರ ಹುತ್ತಕ್ಕೆ ಹಾಲೆರೆಯುತ್ತಾ ಬಂದ ಸಂಪ್ರದಾಯವಿದೆ. ಉತ್ತರ ಕರ್ನಾಟಕದಲ್ಲಿ ದೊಡ್ಡ ಮರಕ್ಕೆ ಜೋಕಾಲಿ ಕಟ್ಟಿ ಮನೆ ಮಂದಿ ಸ್ನೇಹಿತೆಯರೆಲ್ಲರೂ ಅಲ್ಲದೇ ವಿಶೇಷವಾಗಿ ಹೆಣ್ಣು ಮಕ್ಕಳು ಜೋಕಾಲಿ ಜೀಕಿ ಸಂತೋಷ ಪಡುವ ಹಬ್ಬ. ನಾಗ ಮಹಿಮೆಯನ್ನು ಸಾರುವ ಅನೇಕ ಚಲನ ಚಿತ್ರಗಳು ಪ್ರಸಾರ ಗೊಂಡಿರುವುದು ಈ ಹಬ್ಬದ ವೈಶಿಷ್ಠ್ಯತೆ ಮಹತ್ವವನ್ನು ಅರಿಯಬಹುದು ಎಂದರು. ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು ನಾಗಪ್ಪನಿಗೆ ಮೊದಲು ಹಾಲೆರೆದ ನಂತರ ಸುತ್ತಮುತ್ತಲಿನಿಂದ ಆಗಮಿಸಿದ ಹೆಣ್ಣು ಮಕ್ಕಳು ಸರದಿಯಲ್ಲಿ ಹಾಲೆರೆದು ನಾಗಪ್ಪನಿಗೆ ಪೂಜಿಸುವ ದೃಶ್ಯ ಅಪೂರ್ವವಾಗಿತ್ತು. ಈ ಸಂದರ್ಭದಲ್ಲಿ ಹುಡುಗಿ ಹಿರೇಮಠದ ವಿರೂಪಾಕ್ಷಲಿಂಗ ಶಿವಾಚಾರ್ಯ ಸ್ವಾಮಿ, ಜಿಪಂ ಮಾಜಿ ಉಪಾಧ್ಯಕ್ಷ ಎಂ.ಎಸ್. ಚನ್ನಕೇಶವ, ಶಿವಶರಣಪ್ಪ ಸೀರಿ, ಪ್ರಕಾಶ ಶಾಸ್ತ್ರಿ, ರುದ್ರೇಶ ಜಗದೀಶ ಮತ್ತು ಶ್ರೀ ಪೀಠದ ಗುರುಕುಲ ಸಾಧಕರು ಹಾಗೂ ಭಕ್ತರು ಪಾಲ್ಗೊಂಡಿದ್ದರು. ೦೯ಬಿಹೆಚ್‌ಆರ್ ೫:

ಬಾಳೆಹೊನ್ನೂರು ರಂಭಾಪುರಿ ಪೀಠದಲ್ಲಿ ನಾಗರ ಪಂಚಮಿ ಅಂಗವಾಗಿ ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ನಾಗರಕಟ್ಟೆಯಲ್ಲಿರುವ ನಾಗದೇವತೆಗೆ ಹಾಲೆರೆದು ಪೂಜಿಸಿದರು.