ಸಾರಾಂಶ
ಶ್ರಾವಣ ಮಾಸದ ಮೊದಲ ಹಬ್ಬ ನಾಗರ ಪಂಚಮಿಯನ್ನು ಮಂಗಳವಾರ ಜಿಲ್ಲೆಯಾದ್ಯಂತ ಸಡಗರ, ಸಂಭ್ರಮದಿಂದ ಆಚರಿಸಲಾಯಿತು. ಮಹಿಳೆಯರು ಬೆಳಗಿನ ಜಾವದಿಂದಲೇ ಭಕ್ತರು ನಾಗ ಬನ ಹಾಗೂ ನಾಗ ದೇವಾಲಯಗಳಿಗೆ ತೆರಳಿ ನಾಗದೇವನಿಗೆ ಹಾಲೆರೆದು ಪೂಜೆ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಶ್ರಾವಣ ಮಾಸದ ಮೊದಲ ಹಬ್ಬ ನಾಗರ ಪಂಚಮಿಯನ್ನು ಮಂಗಳವಾರ ಜಿಲ್ಲೆಯಾದ್ಯಂತ ಸಡಗರ, ಸಂಭ್ರಮದಿಂದ ಆಚರಿಸಲಾಯಿತು. ಮಹಿಳೆಯರು ಬೆಳಗಿನ ಜಾವದಿಂದಲೇ ಭಕ್ತರು ನಾಗ ಬನ ಹಾಗೂ ನಾಗ ದೇವಾಲಯಗಳಿಗೆ ತೆರಳಿ ನಾಗದೇವನಿಗೆ ಹಾಲೆರೆದು ಪೂಜೆ ಸಲ್ಲಿಸಿದರು.ಭಕ್ತರು ನಾಗ ದೇವನ ಮೂರ್ತಿಯನ್ನು ಸ್ವಚ್ಚಗೊಳಿಸಿ, ಅರಿಶಿನ ಕುಂಕುಮ ಹಚ್ಚಿ, ಬಗೆ ಬಗೆಯ ಹೂವುಗಳಿಂದ ಅಲಂಕರಿಸಿ, ಬಳಿಕ ನಾಗಪ್ಪನಿಗೆ ವಿವಿಧ ಹಣ್ಣು, ಎಳ್ಳುಂಡೆ ಇಟ್ಟು ಪೂಜೆ ಸಲ್ಲಿಸಿ ನೈವೇದ್ಯ ಸಲ್ಲಿಸಿದರು. ನಂತರ ನಾಗಪ್ಪನಿಗೆ ಹಾಲನ್ನು ಸಮರ್ಪಿಸಿದರು. ಹಬ್ಬದ ಹಿನ್ನಲೆಯಲ್ಲಿ ವಿವಿಧ ನಾಗ ದೇವಾಲಯಗಳಲ್ಲಿ ವಿಶೇಷ ಪೂಜೆ ಏರ್ಪಡಿಸಲಾಗಿತ್ತು. ಹಾಲಿನ ಅಭಿಷೇಕ, ವೇದಪಾರಾಯಣ, ಪವಮಾನ ಅಭಿಷೇಕ, ಆಶ್ಲೇಷಬಲಿ, ಕಾಳಸರ್ಪಶಾಂತಿ, ಮಹಾಮಂಗಳಾರತಿ ನೆರವೇರಿದವು.
ಭಕ್ತರು ನಾಗರ ಕಲ್ಲಿಗೆ ಭಕ್ತಿ, ಭಾವದಿಂದ ವಿಶೇಷ ಪೂಜೆ ಸಲ್ಲಿಸಿದರು. ಶಿವಮೊಗ್ಗದ ಸ್ವಾಮಿ ವಿವೇಕಾನಂದ ಬಡಾವಣೆಯ ನಾಗಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಿತು. ಬಸವನಗುಡಿ, ಕೀರ್ತಿನಗರದ ನಾಗರಕಟ್ಟೆ, ಸೀಗೆಹಟ್ಟಿ, ಹೊಸಮನೆ ನಾಗದೇವಾಲಯ, ರವೀಂದ್ರನಗರ, ಗಾಂಧಿನಗರ, ವಿದ್ಯಾನಗರದ ಅರಳೀಕಟ್ಟೆ, ಬೊಮ್ಮನಕಟ್ಟೆ ಆಶ್ರಯ ಬಡಾವಣೆಯ ಗಣಪತಿ ದೇವಸ್ಥಾನದಲ್ಲಿನ ನಾಗರಕಲ್ಲಿಗೆ ಸಾರ್ವಜನಿಕರು ಹಣ್ಣು, ಕಾಯಿ ಅರ್ಪಿಸಿ, ಹಾಲಿನ ಅಭಿಷೇಕ ಮಾಡಿದರು.ಕೆಲವೆಡೆ ಹುತ್ತದ ಮಣ್ಣಿನಿಂದ ಮಾಡಿದ ಮಣ್ಣಿನ ನಾಗರಕ್ಕೆ ಹಾಲೆರೆದರೆ, ಇನ್ನು ಕೆಲ ಬಡಾವಣೆಗಳಲ್ಲಿ ಮಹಿಳೆಯರು ಭಕ್ತಿಯಿಂದ ಹುತ್ತಕ್ಕೆ ಹಾಲೆರೆದರು. ವಿವಿಧ ದೇವಾಲಯಗಳಲ್ಲಿ ಪಂಚಮಿ ಅಂಗವಾಗಿ ವಿಶೇಷ ಅಲಂಕಾರ ಮಾಡಲಾಗಿತ್ತು.
ಶ್ರಾವಣ ಮಾಸದ ಪ್ರಥಮ ಹಬ್ಬ ಇದಾಗಿದ್ದು, ನಾಗರ ಪಂಚಮಿಯೊಂದಿಗೆ ವಿವಿಧ ಹಬ್ಬಗಳಿಗೂ ಚಾಲನೆ ದೊರೆಯುತ್ತದೆ. ನಾಗಚೌತಿ ನಂತರ ಬರುವ ಪಂಚಮಿಯಂದು ಹಾಲೆರೆದರೆ ಒಳಿತಾಗುತ್ತದೆ ಎಂಬ ಭಾವನೆ ಜನರಲ್ಲಿದೆ. ನಾಗಾರಾಧನೆಗೆ ಹೆಚ್ಚು ಪ್ರಾಶಸ್ತ್ಯ ನೀಡುವುದರಿಂದ ನಾಗರಪಂಚಮಿ ಪ್ರಮುಖ ಹಬ್ಬವಾಗಿದೆ.