ಈ ಆಟ ಸುಮಾರು ಒಂದು ವಾರಗಳ ಕಾಲ ನಿರಂತರ । ಬಾಜಿ ಕಟ್ಟುವವರ ಸಂಖ್ಯೆ ಸಾಕಷ್ಟು
ಸಂತೋಷ ದೈವಜ್ಞ
ಕನ್ನಡಪ್ರಭ ವಾರ್ತೆ ಮುಂಡಗೋಡನಾಗರಪಂಚಮಿ ಹಬ್ಬ ಸಮೀಪಿಸುತ್ತಿದ್ದಂತೆ ಇಲ್ಲಿ ಈಗ ನಿಂಬೆಹಣ್ಣಿನ ಆಟದ ಭರಾಟೆ ಜೋರಾಗಿದೆ.
ಪ್ರತಿ ವರ್ಷ ನಾಗರ ಪಂಚಮಿ ಸಮೀಪಿಸುತ್ತಲೆ, ತಾಲೂಕಿನಾದ್ಯಂತ ನಿಂಬೆಹಣ್ಣು ಎಸೆಯುವ ಆಟ ಪ್ರಾರಂಭವಾಗುತ್ತದೆ. ಈ ಭಾಗದಲ್ಲಿ ನಿಂಬೆ ಹಣ್ಣಿನ ಆಟ ಅತಿ ಪ್ರಾಮುಖ್ಯತೆ ಪಡೆದಿದೆ. ಗ್ರಾಮೀಣ ಭಾಗದಲ್ಲಂತೂ ಈ ವೇಳೆಯಲ್ಲಿ ಎಲ್ಲೆಂದರಲ್ಲಿ ನಿಂಬೆಹಣ್ಣಿನ ಆಟದ್ದೇ ಕಾರುಬಾರು. ಉದ್ದದ ಕಂಬ ಅಥವಾ ವಸ್ತುಗಳಿಗೆ ಇಷ್ಟು ಬಲಗೈ ಹಾಗೂ ಒಂದು ಎಡಗೈ ಎಸೆತದಲ್ಲಿ ಹೊಡೆಯುವುದು ಅಥವಾ ಅದರ ಗಡಿ ದಾಟಿಸಬೇಕು ಎಂದು ಬಾಜಿ ಕಟ್ಟಲಾಗುತ್ತದೆ. ಬಾಜಿಯಲ್ಲಿ ಹೊಡೆಯುವವರು ಒಬ್ಬರಾದರೆ ಬಾಜಿ ಕಟ್ಟುವವರ ಸಂಖ್ಯೆ ಸಾಕಷ್ಟಿರುತ್ತದೆ. ನಾಗರ ಪಂಚಮಿ ಸಮೀಪಿಸುತ್ತಿದ್ದಂತೆ ಪ್ರಾರಂಭವಾಗುವ ಈ ನಿಂಬೆ ಹಣ್ಣಿನ ಆಟ ಸುಮಾರು ಒಂದು ವಾರಗಳ ಕಾಲ ನಿರಂತರವಾಗಿರುತ್ತದೆ. ಆಡುವವರೊಂದಿಗೆ ನೋಡುಗರಿಗೂ ಈ ಆಟ ಅಷ್ಟೇ ಮದ ನೀಡುತ್ತದೆ.
ಹಬ್ಬಕ್ಕೆ ಭರದ ಸಿದ್ಧತೆ:
ತಾಲೂಕಿನ ಎಲ್ಲೆಡೆ ಹಬ್ಬದ ತಯಾರಿ ಕೂಡ ಜೋರಾಗಿಯೇ ನಡೆದಿದೆ. ನಾಗರ ಮೂರ್ತಿಗೆ ಹಾಲೆರೆದು ಭಕ್ತಿ ಸಮರ್ಪಿಸುವುದು ಈ ಹಬ್ಬದ ವಿಶೇಷ. ಇದರಿಂದ ಪಟ್ಟಣ ಸೇರಿದಂತೆ ತಾಲೂಕಿನಲ್ಲಿರುವ ಎಲ್ಲ ನಾಗದೇವತಾ ಗುಡಿಗಳು ಸುಣ್ಣ ಬಣ್ಣ ಹಚ್ಚಿಕೊಂಡು ಸಿಂಗಾರಗೊಳ್ಳುತ್ತಿವೆ. ಅಲ್ಲದೆ ಶೇಂಗಾ, ಪುಟಾಣಿ, ಕಡಲೆ, ಎಳ್ಳು, ರವೆ ಉಂಡೆ (ಲಡ್ಡು) ಸೇರಿದಂತೆ ಬಗೆ ಬಗೆಯ ಸಿಹಿ ತಿಂಡಿಗಳು ಹಬ್ಬಕ್ಕಾಗಿ ತಯಾರಾಗುತ್ತಿವೆ. ಗ್ರಾಮೀಣ ಭಾಗದಲ್ಲಂತೂ ಈ ಹಬ್ಬದ ಗಮ್ಮತ್ತೇ ಬೇರೆ. ಶ್ರಾವಣ ಮಾಸದ ಪ್ರಾಂರಭದೊಂದಿಗೆ ಪಂಚಮಿ ಹಬ್ಬ ಕೂಡ ಬಂದಿರುವುದರಿಂದ ಹಬ್ಬಕ್ಕೆ ಇನ್ನಷ್ಟು ಮೆರುಗು ಬರುತ್ತಿದೆ. ಅಲ್ಲದೆ ಯುಗಾದಿ ಬಳಿಕ ಸುದೀರ್ಘ ದಿನಗಳ ಆನಂತರ ಈ ಹಬ್ಬ ಬರುತ್ತಿರುವುದರಿಂದ ಜನರು ಈ ಹಬ್ಬವನ್ನು ಅತಿ ವಿಜೃಂಭಣೆಯಿಂದ ಆಚರಿಸುವ ತವಕದಲ್ಲಿದ್ದಾರೆ.ಜನರು ಈಗ ಬೆಳ್ಳಿ ಬಂಗಾರ ನಾಗರಮೂರ್ತಿ ಖರೀದಿಯಲ್ಲಿ ತೊಡಗಿದ್ದು, ಬಹುತೇಕ ಚಿನ್ನ-ಬೆಳ್ಳಿ ಅಂಗಡಿಗಳಲ್ಲಿ ಬೆಳ್ಳಿ ನಾಗರ ಮೂರ್ತಿಗಳಿಗೆ ಬೇಡಿಕೆ ಬಂದಿದ್ದು, ಮಾರಾಟ ಕೂಡ ಜೋರಾಗಿದೆ. ಇದು ವೈಯಕ್ತಿಕ ಮನೆಗಳಲ್ಲಿ ನಡೆಯುವ ಪೂಜೆಯಾದರೆ, ಸಾಮೂಹಿಕವಾಗಿಯು ಕೂಡ ಇಲ್ಲಿಯ ಹಲವು ನಾಗರ ದೇವಾಲಯಗಳಲ್ಲಿ ದಿನವಿಡೀ ಪೂಜೆ ಪುನಸ್ಕಾರಗಳು ನಡೆಯುತ್ತವೆ. ಬಹುತೇಕ ಕಡೆಗಳಲ್ಲಿ ಹುತ್ತಗಳಿಗೆ ಪೂಜೆ ಸಲ್ಲಿಸಲಾಗುತ್ತದೆ.
ನಶಿಸಿದ ಜೋಕಾಲಿ ಆಟ:ಈ ಹಿಂದೆ ವಿವಿಧ ಬಡಾವಣೆಯ ಗಿಡ ಹಾಗೂ ಮನೆಗಳ ಮಾಳಿಗೆ ಸೇರಿದಂತೆ ಎಲ್ಲೆಂದರಲ್ಲಿ ಜೋಕಾಲಿ ಕಟ್ಟಿ ಚಿಕ್ಕ ಮಕ್ಕಳು, ಹೆಣ್ಣು ಮಕ್ಕಳು, ಪುರುಷರು ಎನ್ನದೇ ಯಾವುದೇ ಬೇಧ-ಭಾವವಿಲ್ಲದೆ ಜೋಕಾಲಿ ಜೀಕುವ ದೃಶ್ಯಗಳು ಕಾಣಸಿಗುತ್ತಿದ್ದವು. ಇತ್ತೀಚಿನ ದಿನಗಳಲ್ಲಿ ಆಧುನಿಕತೆಯ ಭರಾಟೆಗೆ ಅದು ನಶಿಸುತ್ತ ಹೋಗಿದ್ದು, ಕೆಲವೇ ಕೆಲವೆಡೆ ಮಾತ್ರ ಜೋಕಾಲಿಗಳು ಕಾಣಸಿಗುತ್ತಿರುವುದು ವಿಪರ್ಯಾಸವೇ ಸರಿ.