ಸಾರಾಂಶ
ಮಂಡ್ಯ ಮಂಜುನಾಥ
ಕನ್ನಡಪ್ರಭ ವಾರ್ತೆ, ಮಂಡ್ಯಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳು ಯಾವುದರಲ್ಲೂ ಹಿಂದುಳಿಯಬಾರದೆಂಬ ಮಹತ್ವಾಕಾಂಕ್ಷೆಯೊಂದಿಗೆ ಸಕಲ ಸೌಲಭ್ಯಗಳನ್ನೂ ದೊರಕಿಸಿಕೊಟ್ಟು ವಿದ್ಯಾರ್ಥಿಗಳ ಭವಿಷ್ಯವನ್ನು ಉಜ್ವಲಗೊಳಿಸಲು ಟೊಂಕಕಟ್ಟಿ ನಿಂತಿರುವ ಶಿಕ್ಷಕ ಮಂಡ್ಯ ತಾಲೂಕು ಉಮ್ಮಡಹಳ್ಳಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ನಾಗರಾಜು.
ಮೂಲತಃ ಮಂಡ್ಯ ಜಿಲ್ಲೆಯ ಎಂ.ಮಲ್ಲೀಗೆರೆಯವರಾದ ನಾಗರಾಜು ಬಿಎ, ಎಇಡಿ, ಎಂಎ, ಎಂಫಿಲ್ ಪದವೀಧರರು. ೨೦೧೨ರಲ್ಲಿ ಉತ್ತರ ಕರ್ನಾಟಕದ ಯಾದಗಿರಿಯಿಂದ ವೃತ್ತಿಜೀವನ ಆರಂಭಿಸಿದರು. ೬ ವರ್ಷಗಳ ಕಾಲ ಶಾಲಾ ಶಿಕ್ಷಣ ಇಲಾಖೆಯಲ್ಲಿ ಬಿಆರ್‌ಸಿ ಆಗಿ ಕಾರ್ಯನಿರ್ವಹಿಸಿದರು. ಒಟ್ಟು ೧೩ ವರ್ಷಗಳ ವೃತ್ತಿ ಜೀವನದೊಂದಿಗೆ ೨೦೨೨ರಿಂದ ಉಮ್ಮಡಹಳ್ಳಿ ಪ್ರೌಢಶಾಲೆ ಮುಖ್ಯ ಶಿಕ್ಷಕರಾಗಿ ಶಾಲೆಯ ಪ್ರಗತಿಗೆ ಅಹರ್ನಿಶಿ ಶ್ರಮಿಸುತ್ತಿದ್ದಾರೆ.ಉಮ್ಮಡಹಳ್ಳಿ ಪ್ರೌಢಶಾಲೆಗೆ ಮುಖ್ಯ ಶಿಕ್ಷಕರಾಗಿ ನಾಗರಾಜು ಬಂದಾಗ ಶಾಲೆಯಲ್ಲಿ ಮಕ್ಕಳ ದಾಖಲಾತಿ ಕೇವಲ ೫೬ ಇತ್ತು. ಈಗ ಶಾಲೆಯಲ್ಲಿ ಮಕ್ಕಳ ಸಂಖ್ಯೆ ೧೧೦ಕ್ಕೆ ಏರಿಕೆಯಾಗಿದೆ. ಕೇಂದ್ರ ಸರ್ಕಾರದ ಸ್ಕಾಲರ್‌ಶಿಪ್ ಪಡೆಯಲು ನಡೆಸುವ ಎನ್‌ಎಂಎಂಎಸ್ ಅರ್ಹತಾ ಪರೀಕ್ಷೆಗೆ ಈ ಶಾಲೆಯಿಂದ ಯಾವುದೇ ಮಕ್ಕಳು ಆಯ್ಕೆಯಾಗುತ್ತಿರಲಿಲ್ಲ. ನಾಗರಾಜು ಬಂದ ನಂತರ ಪರೀಕ್ಷೆಗೆ ಮಕ್ಕಳನ್ನು ತಯಾರುಗೊಳಿಸುವಲ್ಲಿ ಯಶಸ್ವಿಯಾದರು. ಪರಿಣಾಮ ಅತಿ ಹೆಚ್ಚು ಮಕ್ಕಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ವಿದ್ಯಾರ್ಥಿವೇತನ ಪಡೆಯುತ್ತಿದ್ದಾರೆ.
ನಾಗರಾಜು ಜಿಲ್ಲಾಡಳಿತದ ಗಮನಸೆಳೆದು ಸಿಎಸ್‌ಆರ್ ಅನುದಾನ ೧೦ ಲಕ್ಷ ರು. ಹಣದಲ್ಲಿ ವಿಜ್ಞಾನ ಪಾರ್ಕ್‌ನ್ನು ತೆರೆದಿದ್ದಾರೆ. ನ್ಯೂಟನ್ ಥರ್ಡ್ ಲಾ, ಕ್ಲೆರೋಸ್ಕೋಪ್, ಪೆರಿಸ್ಕೋಪ್, ಪ್ಲಾಂಗ್ ಕ್ಲಾ, ಮ್ಯೂಸಿಕಲ್ ಟ್ಯೂಬ್, ನಿಮ್ನ ಮಸೂರ, ಪೀನಮಸೂರ ಸೇರಿದಂತೆ ೧೬ ಮಾದರಿಗಳನ್ನು ಇಡಲಾಗಿದೆ. ಬಿಇಡಿ ವಿದ್ಯಾರ್ಥಿಗಳು ಪಾರ್ಕ್ ವೀಕ್ಷಣೆಗೆ ಆಗಮಿಸುತ್ತಿರುವುದು ಗಮನಾರ್ಹ ಸಂಗತಿಯಾಗಿದೆ.ವಿದ್ಯಾರ್ಥಿಗಳ ಓದಿಗೆ ವಿಶೇಷ ಮಹತ್ವವನ್ನು ನೀಡಿರುವ ನಾಗರಾಜು ಪ್ರತಿ ವರ್ಷ ವಿಶೇಷ ತರಗತಿಗಳನ್ನು ನಡೆಸುವ ಮೂಲಕ ಫಲಿತಾಂಶ ಹೆಚ್ಚಿಸಲು ಕ್ರಮ ವಹಿಸಿದ್ದಾರೆ. ಗ್ರಾಮ ಪಂಚಾಯಿತಿಯ ಗ್ರಂಥಾಲಯ ರಾತ್ರಿ ೮ ಗಂಟೆಯವರೆಗೂ ತೆರೆದಿರುತ್ತದೆ. ಆ ಸಮಯದವರೆಗೂ ಊರಿನ ವಿದ್ಯಾರ್ಥಿಗಳು ಗ್ರಂಥಾಲಯದಲ್ಲಿ ಓದುವುದರಲ್ಲಿ ತೊಡಗಿರುತ್ತಾರೆ. ನಾಗರಾಜು ಪರಿಶ್ರಮಕ್ಕೆ ಶಿಕ್ಷಕರೂ ಉತ್ತಮವಾಗಿ ಸ್ಪಂದಿಸುತ್ತಿರುವುದರಿಂದ ಕಳೆದ ಮೂರು ವರ್ಷಗಳಿಂದ ಉಮ್ಮಡಹಳ್ಳಿ ಶಾಲೆ ಶೇ.೧೦೦ರಷ್ಟು ಫಲಿತಾಂಶ ಪಡೆಯುತ್ತಾ ಬಂದಿದೆ. ಹಿಂದಿನ ವರ್ಷ ಶೇ. ೯೯ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು.
ಮುಖ್ಯ ಶಿಕ್ಷಕರಾಗಿ ಬಂದ ನಂತರ ನಾಗರಾಜು ಶಾಲೆಯ ಶಿಕ್ಷಕರಿಗೆ ಬಯೋಮೆಟ್ರಿಕ್ ವ್ಯವಸ್ಥೆ, ವಿದ್ಯಾರ್ಥಿಗಳ ಚಟುವಟಿಕೆಗಳ ಮೇಲೆ ಕಣ್ಣಿಡಲು ೧೬ ಸೀಸಿ ಕ್ಯಾಮೆರಾ, ಬಯಲು ರಂಗಮಂದಿರ, ಆಡಿಟೋರಿಯಂ, ಡಿಜಿಟಲ್ ಸ್ಮಾರ್ಟ್‌ಬೋರ್ಡ್, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ಯುಪಿಎಸ್ ಸೌಲಭ್ಯದ ಜೊತೆಗೆ ಶಾಲೆಯಲ್ಲೇ ಬಿಸಿಯೂಟಕ್ಕೆ ಅಗತ್ಯವಿರುವ ತರಕಾರಿಗಳನ್ನು ವಿದ್ಯಾರ್ಥಿಗಳೇ ಬೆಳೆಯುವಂತೆ ವ್ಯವಸ್ಥೆ ಮಾಡಿದ್ದಾರೆ. ಶಾಲೆಗೆ ಸುತ್ತಮುತ್ತಲ ಊರುಗಳಿಂದ ಮಕ್ಕಳನ್ನು ಕರೆತರುವುದಕ್ಕೆ ಎರಡು ವಿಶೇಷ ವಾಹನಗಳ ವ್ಯವಸ್ಥೆ ಮಾಡಿದ್ದಾರೆ.ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ಸಕಲ ರೀತಿಯಲ್ಲೂ ನೆರವಾಗಿರುವ ಉಮ್ಮಡಹಳ್ಳಿ ಪ್ರೌಢಶಾಲೆಗೆ ರಾಜ್ಯಮಟ್ಟದ ಹೆಚ್.ಜಿ.ಗೋವಿಂದೇಗೌಡ ಉತ್ತಮ ಪ್ರೌಢಶಾಲಾ ಪ್ರಶಸ್ತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಕಳೆದ ವರ್ಷ ಪ್ರದಾನ ಮಾಡಿದ್ದಾರೆ. ಈ ಪ್ರಶಸ್ತಿ ೨.೭೫ ಲಕ್ಷ ನಗದು ಮತ್ತು ಪಾರಿತೋಷಕವನ್ನು ಒಳಗೊಂಡಿತ್ತು. ಇದಲ್ಲದೆ ರಾಜ್ಯಮಟ್ಟದ ಹೆಚ್.ಡಿ.ಚೌಡಯ್ಯ ಗ್ರಾಮೀಣಾಭಿವೃದ್ಧಿ ಪ್ರಶಸ್ತಿ, ೧ ಲಕ್ಷ ರು. ನಗದು ಬಹುಮಾನವನ್ನೊಳಗೊಂಡ ರಾಜ್ಯಮಟ್ಟದ ಉತ್ತಮ ಎಸ್‌ಡಿಎಂಸಿ ಪ್ರಶಸ್ತಿ ಕೂಡ ಶಾಲೆಗೆ ಲಭಿಸಿದೆ. ಹಲವು ಸರ್ಕಾರಿ ನೌಕರರು ತಮ್ಮ ಮಕ್ಕಳನ್ನು ಉಮ್ಮಡಹಳ್ಳಿ ಶಾಲೆಯಲ್ಲಿ ಓದಿಸುತ್ತಿರುವುದು ಗಮನಾರ್ಹ ಸಂಗತಿಯಾಗಿದೆ.
ಶಾಲೆಯ ಈ ಎಲ್ಲಾ ಬೆಳವಣಿಗೆಯ ಹಿಂದೆ ಮುಖ್ಯ ಶಿಕ್ಷಕ ನಾಗರಾಜು ಪರಿಶ್ರಮವಿದೆ. ಅವರ ದೂರದೃಷ್ಟಿತ್ವ, ವಿದ್ಯಾರ್ಥಿಗಳ ಬಗೆಗಿನ ಕಾಳಜಿಯಿಂದ ಉಮ್ಮಡಹಳ್ಳಿ ಪ್ರೌಢಶಾಲೆ ರಾಜ್ಯಮಟ್ಟದಲ್ಲಿ ಗಮನಸೆಳೆದಿದೆ.