ಸಾರಾಂಶ
ವಿಶ್ವ ಒಕ್ಕಲಿಗ ಮಹಾ ಸಂಸ್ಥಾನ ಮಠದ ನೂತನ ಪಟ್ಟಾಧಿಕಾರ ಮಹೋತ್ಸವ ಡಿ.೧೪ ಮತ್ತು ೧೫ರಂದು ಬೆಂಗಳೂರಿನ ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಶ್ರೀಗುರುಜ್ಞಾನ ಕೇಂದ್ರ ಟ್ರಸ್ಟ್‌ನಲ್ಲಿ ಹಮ್ಮಿಕೊಳ್ಳಲಾಗಿದೆ. ಶ್ರೀಕುಮಾರ ಚಂದ್ರಶೇಖರನಾಥ ಮಹಾಸ್ವಾಮಿ ನೂತನ ಉತ್ತರಾಧಿಕಾರಿ ಶ್ರೀನಿಶ್ಚಲಾನಂದನಾಥ ಸ್ವಾಮೀಜಿ (ಡಾ.ಎಚ್.ಎಲ್.ನಾಗರಾಜು) ಅವರಿಗೆ ನೆರವೇರಿಸುವರು.
ಕನ್ನಡಪ್ರಭ ವಾರ್ತೆ ಮಂಡ್ಯ
ವಿಶ್ವ ಒಕ್ಕಲಿಗ ಮಹಾ ಸಂಸ್ಥಾನ ಮಠದ ನೂತನ ಪಟ್ಟಾಧಿಕಾರ ಮಹೋತ್ಸವ ಡಿ.೧೪ ಮತ್ತು ೧೫ರಂದು ಬೆಂಗಳೂರಿನ ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಶ್ರೀಗುರುಜ್ಞಾನ ಕೇಂದ್ರ ಟ್ರಸ್ಟ್‌ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ನೆಲದನಿ ಬಳಗದ ಅಧ್ಯಕ್ಷ ಲಂಕೇಶ್ ಮಂಗಲ ತಿಳಿಸಿದರು.ಕಾರ್ಯಕ್ರಮದ ಧಾರ್ಮಿಕ ವಿಧಿಗಳನ್ನು ಶ್ರೀಕುಮಾರ ಚಂದ್ರಶೇಖರನಾಥ ಮಹಾಸ್ವಾಮಿ ನೂತನ ಉತ್ತರಾಧಿಕಾರಿ ಶ್ರೀನಿಶ್ಚಲಾನಂದನಾಥ ಸ್ವಾಮೀಜಿ (ಡಾ.ಎಚ್.ಎಲ್.ನಾಗರಾಜು) ಅವರಿಗೆ ನೆರವೇರಿಸುವರು. ಡಿ.೧೪ರ ಸಂಜೆ ೬ ಗಂಟೆಯಿಂದ ಗಂಗೆಪೂಜೆ, ಶಿವಪಾರ್ವತಿಯರ ಪೂಜೆ, ಗಣಪತಿ ಪೂಜೆ, ಸ್ವಸ್ತಿ ಪುಣ್ಯಾಹ ವಾಚನ, ನಾಂದಿ ಸಮಾರಾಧನ, ರಕ್ಷಾ ಬಂಧನ, ವಾಪನ, ಸ್ನಪನ, ಪೋಲಷಕರಿಂದ ರಕ್ತ ಸಂಬಂಧದ ತ್ಯಾಗ ಮತ್ತು ಸಮಾಜಕ್ಕೆ ಉತ್ತರಾಧಿಕಾರಿಯ ಸಮರ್ಪಣೆ ಕಾರ್ಯಗಳು ನಡೆಯಲಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಡಿ.೧೫ರ ಬೆಳಗ್ಗೆ ೬ರಿಂದ ನಡೆಯಲಿರುವ ಪಟ್ಟಾಧಿಕಾರ ಮಹೋತ್ಸವ ಕಾರ್ಯಕ್ರಮದ ದಿವ್ಯಸಾನ್ನಿಧ್ಯವನ್ನು ಗೂಳೂರು ಮಹಾ ಸಂಸ್ಥಾನ ಮಠದ ಶ್ರೀವೀರಭದ್ರ ಚನ್ನಮಲ್ಲ ದೇಶಿಕೇಂದ್ರ ಮಹಾಸ್ವಾಮಿ ವಹಿಸಲಿದ್ದು, ಅಧ್ಯಕ್ಷತೆಯನ್ನು ತರಳಬಾಳು ಜಗದ್ಬುರು ಶಾಖಾಮಠದ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿ, ಬೇಲಿಮಠ ಸಂಸ್ಥಾನದ ಶಿವಾನುಭವ ಚರಮೂರ್ತಿ ಶಿವರುದ್ರ ಮಹಾಸ್ವಾಮಿಸದಾಶಯನುಡಿಗಳಣ್ನಾಡುವುರು ಎಂದರು.ಈ ವೇಳೆ ಕ್ಷೇತ್ರದೈವ ಮಹಾಮೇರು ಪಂಚಮುಖಿಗಣಪತಿಗೆ ರುದ್ರಾಭಿಷೇಕ, ನವದೇವತಾ ಪೂಜೆ, ಏಕಾದಶರುದ್ರ ಕಲಶ ಪೂಜೆ, ಅಷ್ಟಭೈರವ ಕಲಶಪೂಜೆ, ಸಭಾಪೂಜೆ ನಂತರ ವಿವಿಧ ಸ್ವಾಮೀಜಿಗಳಿಂದ ಹನ್ನೊಂದು ನದಿಗಳ ಜಲದ ಅಭಿಷೇಕವನ್ನು ಉತ್ತರಾಧಿಕಾರಿಗಳಿಗೆ ನೀಡುವರು ಎಂದು ಹೇಳಿದರು.
ಡಿ.೧೫ರ ಬೆಳಿಗ್ಗೆ ೧೦.೩೦ಕ್ಕೆ ನೂತನ ಪೀಠಾಧ್ಯಕ್ಷರಿಗೆ ಶುಭಹಾರೈಕೆಯ ಸಮಾರಂಭ ನಡೆಯಲಿದ್ದು. ರಾಜ್ಯದ ಮಹಾಸಂಸ್ಥಾನ ಮಠಗಳು, ಪೀಠಗಳ ಪೀಠಾಧಿಕಪತಿಗಳು ಹಾಗೂ ಸ್ವಾಮೀಜಿಗಳು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಮಾಜಿ ಪ್ರಧಾನಮಂತ್ರಿ ಎಚ್.ಡಿ.ದೇವೇಗೌಡ ಅವರು ಘನ ಉಪಸ್ಥಿತಿ ವಹಿಸಲಿದ್ದು, ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು.ಗೋಷ್ಠಿಯಲ್ಲಿ ಕಸಾಪ ನಗರ ಅಧ್ಯಕ್ಷ ಸುಜಾತ ಕೃಷ್ಣ, ನೆಲದನಿ ಬಳಗದ ಸದಸ್ಯರಾದ ಕುಮಾರ್‌ಗೌಡ, ರಕ್ಷಿತ್, ಪ್ರಭುಸ್ವಾಮಿ ಇದ್ದರು.