ಸಾರಾಂಶ
ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮದು ಬಡವರ ಪರ ಸರಕಾರ ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ ಬಡವರಿಗೆ ಇರುವಂತಹ ಬಿಪಿಎಲ್ ಕಾರ್ಡುಗಳನ್ನು ರದ್ದು ಮಾಡುತ್ತಿರುವುದು ಏಕೆ?
ವಿಜಯಪುರ: ರಾಜ್ಯ ಸರಕಾರ ಕೃಷಿ ಕೂಲಿ ಕಾರ್ಮಿಕರ, ರೈತರ, ಬಡವರ ಬಿಪಿಎಲ್ ಕಾರ್ಡ್ ಗಳನ್ನು ರದ್ಧತಿ ಮಾಡಿ, ಬಡವರ ಅನ್ನ ಮತ್ತು ಆರೋಗ್ಯ ಸೌಲಭ್ಯಗಳನ್ನು ಕಸಿದುಕೊಳ್ಳುತ್ತಿವೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎಚ್ ಎಂ. ರವಿಕುಮಾರ್ ದೂರಿದರು. ವಿಜಯಪುರ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕೇಂದ್ರ ಸರ್ಕಾರ ನೀಡುತ್ತಿರುವ ಅಕ್ಕಿಯನ್ನು ರಾಜ್ಯ ಸರ್ಕಾರ ಸರಿಯಾಗಿ ನೀಡದೆ ಬಡವರನ್ನು ಬೀದಿಗೆ ತರಲು ಯತ್ನಿಸುತ್ತಿದೆ. ಬಡವರಿಗೆ ಇರುವ ಕಾರ್ಡನ್ನು ರದ್ದುಗೊಳಿಸಿ ಅನ್ಯಾಯ ಮಾಡುತ್ತಿದೆ. ಇಂತಹ ಅವೈಜ್ಞಾನಿಕ ಮತ್ತು ಅಸಂವಿಧಾನಿಕ ನಿರ್ಧಾರಗಳಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿರುವ ಸುಮಾರು ನಾಲ್ಕು ಸಾವಿರಕ್ಕೂ ಹೆಚ್ಚು ಬಿಪಿಎಲ್ ಕಾರ್ಡ್ ರದ್ದುಗೊಂಡು ಬಡವರನ್ನು ಬೀದಿಗೆ ತರುವ ಕೆಲಸವನ್ನು ಸರಕಾರ ಮಾಡುತ್ತಿದೆ. ಕೂಡಲೇ ಇಂತಹ ನಿರ್ಧಾರಗಳನ್ನು ಕೈಬಿಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಬೃಹತ್ ಪ್ರತಿಭಟನೆ ನಡೆಸಿ ರಾಜ್ಯ ಸರಕಾರಕ್ಕೆ ಬಿಸಿ ಮುಟ್ಟಿಸಬೇಕಾಗುತ್ತದೆ ಎಂದರು.
ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮದು ಬಡವರ ಪರ ಸರಕಾರ ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ ಬಡವರಿಗೆ ಇರುವಂತಹ ಬಿಪಿಎಲ್ ಕಾರ್ಡುಗಳನ್ನು ರದ್ದು ಮಾಡುತ್ತಿರುವುದು ಏಕೆ? ನೀವು ನಿಜವಾಗಿ ಬಡವರ ಪರ ಕಾಳಜಿ ಇದ್ದರೆ ಕೇಂದ್ರ ಸರಕಾರಕ್ಕೆ ಸೆಡ್ಡು ಹೊಡೆದು ಮತ್ತಷ್ಟು ಬಡವರಿಗೆ ಕಾರ್ಡುಗಳನ್ನು ವಿತರಿಸಲು ಕ್ರಮ ಕೈಗೊಳ್ಳಬೇಕು. ನೀವು ಶ್ರೀಮಂತರ ಕಾರ್ಡ್ ರದ್ದು ಮಾಡುತ್ತಿರುವುದಾಗಿ ಉತ್ತರಿಸುತ್ತೀರಿ. ಹಾಗಾದರೆ ಬಡವರ ಕಾರ್ಡುಗಳನ್ನು ಶ್ರೀಮಂತರಿಗೆ ಏಕೆ ಕೊಟ್ಟಿದ್ದೀರಿ? ಇಂತಹ ಕೃತ್ಯವೆಸಗಿದವರ ವಿರುದ್ಧ ನಿಮ್ಮ ಕ್ರಮವೇನು ಎಂದು ಮುಖ್ಯಮಂತ್ರಿಯವರನ್ನು ಪ್ರಶ್ನಿಸಿದರು.