ಸಾರಾಂಶ
ಕೊಳ್ಳೇಗಾಲ: ತಾಲೂಕಿನ ಹರಳೆ ಗ್ರಾಪಂಗೆ ನೂತನ ಅಧ್ಯಕ್ಷರಾಗಿ ನಾಗರಾಜು ಹಾಗೂ ಉಪಾಧ್ಯಕ್ಷರಾಗಿ ನಾಗಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಸ್ಥಾನ ಪರಿಷ್ಟ ಜಾತಿಗೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಹರಳೆ ಗ್ರಾಪಂಯಲ್ಲಿ ತಲಾ 15 ತಿಂಗಳಂತೆ 2 ಅವಧಿಗೆ ಅಧಿಕಾರ ಹಂಚಿಕೆಯಾಗಿತ್ತು. ಹಿಂದಿನ ಅಧ್ಯಕ್ಷ ರಂಗಸ್ವಾಮಿ ಅವರು ತಮ್ಮ 15 ತಿಂಗಳ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಉಳಿದ 15 ತಿಂಗಳ ಅವಧಿಗೆ ಅಧ್ಯಕ್ಷರಾಗಿ ನಾಗರಾಜು ಹಾಗೂ ಉಪಾಧ್ಯಕ್ಷರಾಗಿ ನಾಗಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಹರಳೆ ಗ್ರಾಪಂಯಲ್ಲಿ 17 ಸದಸ್ಯರ ಬಲವಿದ್ದು 13 ಸದಸ್ಯರು ಗುರುವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ಕೊರಳಿ ಗ್ರಾಪಂ ಕಚೇರಿಯಲ್ಲಿ ನಡೆದ ಚುನಾವಣೆಗೆ ಈ ಇಬ್ಬರು ಹೊರತುಪಡಿಸಿ ಬೇರೆ ಯಾರು ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಚುನಾವಣಾ ಅಧಿಕಾರಿ ನಾಗೇಂದ್ರ ಅವರು ಆಯ್ಕೆಯಾಗಿರುವವರನ್ನು ಘೋಷಿಸಿದರು.
ಮಾಜಿ ತಾಪಂ ಉಪಾಧ್ಯಕ್ಷ ಹಂಪಾಪುರ ಬಿ.ಬಸವಣ್ಣ ಮಾತನಾಡಿ, 15 ತಿಂಗಳ ಒಪ್ಪಂದದ ಪ್ರಕಾರ ನಾಗರಾಜು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈ ಚುನಾವಣೆ ಒಂದು ತಿಂಗಳ ಹಿಂದೆಯೇ ನಡೆಯಬೇಕಿತ್ತು. ಆದರೆ ನನಗೆ ಅಧಿಕಾರ ಬೇಡ ಸದಸ್ಯನಾಗಿರುತ್ತೇನೆ ಎಂದು ನಾಗರಾಜು ಅಧ್ಯಕ್ಷ ಸ್ಥಾನವನ್ನು ನಿರಾಕರಿಸಿದ್ದರು. ಅಧಿಕಾರವನ್ನು ಬೇಡ ಎಂದು ಹೇಳಿದ ಏಕೈಕ ವ್ಯಕ್ತಿ ಇವರೆ ಇರಬೇಕು ಎಂದು ನೂತನ ಅಧ್ಯಕ್ಷರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಶಾಸಕ ಕೃಷ್ಣಮೂರ್ತಿ ಅವರ ನೇತೃತ್ವದಲ್ಲಿ ಈ ಚುನಾವಣೆ ನಡೆದಿದೆ. 15 ತಿಂಗಳ ನಂತರ ಮತ್ತೆ ಗ್ರಾಪಂ ಚುನಾವಣೆ ನಡೆಯಲಿದೆ. ರಾಜ್ಯದಲ್ಲಿ ನಮ್ಮ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ. ಇಂದಿನ ಪಂಚಾಯಿತಿ ಪ್ರತಿನಿಧಿಗಳು ಯಾವುದೇ ಭಿನ್ನಾಭಿಪ್ರಾಯವಿಲ್ಲವೇ ಪಂಚಾಯಿತಿ ಅಭಿವೃದ್ಧಿಗೆ ಶ್ರಮಿಸಿ ಎಂದು ಈ ಸಂದರ್ಭದಲ್ಲಿ ಬಸವಣ್ಣ ಕರೆ ನೀಡಿದರು.
ನೂತನ ಅಧ್ಯಕ್ಷ ನಾಗರಾಜ ಮಾತನಾಡಿ, ನನಗೆ ಸಿಕ್ಕಿರುವ ಅಲ್ಪ ಅವಧಿಯಲ್ಲಿ ಪಂಚಾಯಿತಿಯನ್ನು ಉತ್ತಮವಾಗಿ ಅಭಿವೃದ್ಧಿ ಪಡಿಸುವ ಆಶಾಭಾವನೆಯಿಂದ ಬಂದಿದ್ದೇನೆ ಎಂದರು.ಈ ಸಂದರ್ಭದಲ್ಲಿ ತಾಪಂ ಉಪಾಧ್ಯಕ್ಷ ಬಸವಣ್ಣ ನಾಯಕ, ಮಾಜಿ ಅಧ್ಯಕ್ಷರಾದ ಲೋಕೇಶ್, ರಂಗಸ್ವಾಮಿ ಸದಸ್ಯರಾದ ಲೀಲಾ, ಮಹಾದೇವ, ಮೀನಾ ಲೋಕೇಶ್ ಮಾಜಿ ಸದಸ್ಯರಾದ ಕಾಂತರಾಜು ಗ್ರಾಪಂ ಅಭಿವೃದ್ಧಿ ಅಧಿಕಾರಿ ರಾಜಮ್ಮಣಿ ಇದ್ದರು.