ಸಾರಾಂಶ
ಕ್ಷೇತ್ರದಲ್ಲಿ ನಾಡಿನ ಗಮನ ಸೆಳೆದಿರುವ ಜಾನಪದ ಲೋಕದ ತವರು ನೆಲದಲ್ಲಿ 16ನೇ ವರ್ಷದ ನಾಗರಂಗ ನಾಟಕೋತ್ಸವ ಆಯೋಜಿಸುವ ಮೂಲಕ ನ.25ರಿಂದ ಏಳು ದಿನಗಳ ಕಾಲ ರಂಗಾಸಕ್ತರಿಗೆ ನಾಟಕಗಳ ರಸದೌತಣ ನೀಡಲು ನಾಗಮಂಗಲ ಪಟ್ಟಣದ ಕನ್ನಡ ಸಂಘವು ಸಕಲ ರೀತಿಯಲ್ಲೂ ಸಜ್ಜಾಗುತ್ತಿದೆ.
ಕರಡಹಳ್ಳಿ ಸೀತಾರಾಮು
ಕನ್ನಡಪ್ರಭ ವಾರ್ತೆ ನಾಗಮಂಗಲಕ್ಷೇತ್ರದಲ್ಲಿ ನಾಡಿನ ಗಮನ ಸೆಳೆದಿರುವ ಜಾನಪದ ಲೋಕದ ತವರು ನೆಲದಲ್ಲಿ 16ನೇ ವರ್ಷದ ನಾಗರಂಗ ನಾಟಕೋತ್ಸವ ಆಯೋಜಿಸುವ ಮೂಲಕ ನ.25ರಿಂದ ಏಳು ದಿನಗಳ ಕಾಲ ರಂಗಾಸಕ್ತರಿಗೆ ನಾಟಕಗಳ ರಸದೌತಣ ನೀಡಲು ನಾಗಮಂಗಲ ಪಟ್ಟಣದ ಕನ್ನಡ ಸಂಘವು ಸಕಲ ರೀತಿಯಲ್ಲೂ ಸಜ್ಜಾಗುತ್ತಿದೆ.
ಕಳೆದ 15 ವರ್ಷಗಳಿಂದ ನಿರಂತರವಾಗಿ ಏಳು ದಿನಗಳ ಕಾಲ ನಡೆಸುವ ರಾಜ್ಯಮಟ್ಟದ ನಾಗರಂಗ ನಾಟಕೋತ್ಸವದಲ್ಲಿ ನಾಡಿನ ಪ್ರತಿಷ್ಠಿತ ತಂಡಗಳ ನಾಟಕಗಳನ್ನು ಪ್ರದರ್ಶಿಸಿ, ನಾಡಿನ ರಂಗಾಸಕ್ತರಿಗೆ ರಂಗಕಲೆಯ ರಸದೌತಣ ಉಣಬಡಿಸುತ್ತಿದೆ.ಲೀಲಾವತಿ ವೇದಿಕೆಯಲ್ಲಿ ನಾಟಕಗಳ ಕಲರವ:
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ 16ನೇ ವರ್ಷದ ನಾಗರಂಗ ನಾಟಕೋತ್ಸವ ನಡೆಯಲಿದೆ. ಹಿರಿಯ ಚಿತ್ರನಟಿ, ಕಲಾ ಶಾರದೆ ಲೀಲಾವತಿ ಅವರ ಹೆಸರಿನ ವೇದಿಕೆಯಲ್ಲಿ ಏಳು ದಿನಗಳ ಕಾಲ ನಾಟಕಗಳ ಕಲರವ ಮೇಳೈಸಲಿದೆ.25ರಂದು ಉದ್ಘಾಟನೆ:
ನ.25ರ ಸೋಮವಾರ ಸಂಜೆ 6.30 ಗಂಟೆಗೆ ನಾಟಕೋತ್ಸವಕ್ಕೆ ಚಾಲನೆ ಸಿಗಲಿದೆ. ಪಟ್ಟಣದ ಮಾದರಿ ಉನ್ನತ ಪ್ರಾಥಮಿಕ ಶಾಲೆಯ ಮಕ್ಕಳು ಹಚ್ಚೇವು ಕನ್ನಡದ ದೀಪ ಗೀತೆಗೆ ನೃತ್ಯ ಪ್ರದರ್ಶನ ಮಾಡುವರು. ಕನ್ನಡ ಕಾದಂಬರಿಕಾರ ಕುಂ.ವೀರಭದ್ರಪ್ಪ ಅವರಿಗೆ ನುಡಿಗೌರವ ಹಾಗೂ ಹಿರಿಯ ನಟ, ರಂಗಕರ್ಮಿ ದೊಡ್ಡಣ್ಣ ಅವರಿಗೆ ರಂಗಗೌರವ ಸಲ್ಲಿಸಲಾಗುವುದು. ಸಂಘದ ಅಧ್ಯಕ್ಷ ಅಲಮೇಲು ಅಧ್ಯಕ್ಷತೆ ವಹಿಸುವರು. ಮೊದಲ ದಿನ ಮೈಸೂರಿನ ಮೈಮ್ ಟೀಮ್ ಪ್ರಸ್ತುತಪಡಿಸುವ ವಿನಾಯಕ ಭಟ್ ಹಾಸಣಗಿ ನಿರ್ದೇಶನದ ‘ನನಗ್ಯಾಕೋ ಡೌಟು’ ನಾಟಕ ಪ್ರದರ್ಶನಗೊಳ್ಳಲಿದೆ.ಡಿ.1ರಂದು ಸಮಾರೋಪ:
ಡಿ.1ರ ಭಾನುವಾರ ಸಂಜೆ 6.30ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ನಟ ಹಾಗೂ ರಂಗಕರ್ಮಿಗಳಾದ ಡಾ.ಎಂ.ಕೆ.ಸುಂದರರಾಜ್ ಮತ್ತು ಸುಂದರ್ ಭಾಗಿಯಾಗುವರು. ಬಳಿಕ ಬೆಂಗಳೂರಿನ ರಂಗಾಸ್ಥೆ ತಂಡ ಪ್ರಸ್ತುತ ಪಡಿಸುವ ಗಣೇಶ್ ಮಂದಾರ್ತಿ ನಿರ್ದೇಶನದ ‘ದ್ರೋಪತಿ ಹೇಳ್ತವ್ಳೆ’ ನಾಟಕ ಪ್ರದರ್ಶನದ ಮೂಲಕ ಏಳು ದಿನಗಳ ನಾಗರಂಗ ನಾಟಕೋತ್ಸವಕ್ಕೆ ತೆರೆಬೀಳಲಿದೆ.ಏಳು ದಿನಗಳ ಕಾಲ ನಡೆಯುವ ಈ ರಂಗ ಸಪ್ತಾಹದಲ್ಲಿ ಪುಸ್ತಕ ಮಳಿಗೆ ಸೇರಿದಂತೆ ಉತ್ತರ ಕರ್ನಾಟಕ ಶೈಲಿಯ ತಿಂಡಿ, ತಿನಿಸುಗಳು, ಅಪ್ಪಟ ಖಾದಿಯ ಸಿದ್ಧ ಉಡುಪುಗಳು, ಗೃಹೋಪಯೋಗಿ ಕರಕುಶಲ ಪದಾರ್ಥಗಳ ಹತ್ತಾರು ಮಳಿಗೆಗಳು ತೆರೆಯಲಿವೆ.