ಸಾರಾಂಶ
ಹುಬ್ಬಳ್ಳಿ:
ನಗರದಾದ್ಯಂತ ಶುಕ್ರವಾರವೂ ನಾಗರ ಪಂಚಮಿ ಹಬ್ಬದ ಸಂಭ್ರಮ ಕಳೆಕಟ್ಟಿತು. ಹಬ್ಬದ ಹಿನ್ನೆಲೆಯಲ್ಲಿ ಮನೆ ಹಾಗೂ ದೇವಸ್ಥಾನಗಳಲ್ಲಿ ಮಹಿಳೆಯರು ಕುಟುಂಬಸಮೇತರಾಗಿ ಆಗಮಿಸಿ ನಾಗದೇವರಿಗೆ ಹಾಲಿನ ಅಭಿಷೇಕ, ವಿಶೇಷ ಪೂಜೆ ಸಲ್ಲಿಸಿದರು. ಇನ್ನು ವಿಶ್ವೇಶ್ವರ ನಗರದಲ್ಲಿರುವ ಪರಿವಾರ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಲೋಕಕಲ್ಯಾಣಾರ್ಥವಾಗಿ ಸರ್ಪದೋಷ ಪರಿಹಾರ ಶಾಂತಿ ಹಾಗೂ ಆಶ್ಲೇಷಾ ಬಲಿ ಪೂಜೆ ಹಮ್ಮಿಕೊಳ್ಳಲಾಯಿತು.ನಗರದ ಅಶೋಕ ನಗರದ ಬ್ರೀಡ್ಜ್ ಬಳಿಯ ಗಣಪತಿ ದೇವಸ್ಥಾನ, ಹಳೇ ಹುಬ್ಬಳ್ಳಿಯ ಧರ್ಮಸ್ಥಳ ಮಂಜುನಾಥ ದೇವಸ್ಥಾನ, ಇಂಡಿ ಪಂಪ್ ಹತ್ತಿರದ ಪರಮೇಶ್ವರ ದೇವಸ್ಥಾನ, ಚನ್ನಪೇಟೆಯ ಬನ್ನಿ ಮಹಾಂಕಾಳಿ ದೇವಸ್ಥಾನ, ಸ್ಟೇಶನ್ ರಸ್ತೆಯ ಶಿವಾಲಯ, ವಿಶ್ವೇಶ್ವರ ನಗರದ ವಿಶ್ವನಾಥ ದೇವಸ್ಥಾನ, ಶಿರೂರ ಪಾರ್ಕ್ ಅಯ್ಯಪ್ಪಸ್ವಾಮಿ ದೇವಸ್ಥಾನ, ದೇಶಪಾಂಡೆ ನಗರದ ನಾಗಪ್ಪನ ದೇವಸ್ಥಾನ, ಈಶ್ವರ ನಗರದ ಈಶ್ವರ ದೇವಸ್ಥಾನ, ಗೋಕುಲ ರಸ್ತೆ ರಾಜಧಾನಿ ಕಾಲನಿಯ ಗಣೇಶ ದೇವಸ್ಥಾನ ಸೇರಿದಂತೆ ಅನೇಕ ದೇವಸ್ಥಾನಗಳಲ್ಲಿ ನಾಗದೇವರ ಮೂರ್ತಿಗೆ ಹಾಲಿನ ಅಭಿಷೇಕ ಮಾಡಲಾಯಿತು. ಎಪಿಎಂಸಿಯಲ್ಲಿರುವ ನಾಗದೇವತೆ ದೇವಸ್ಥಾನದಲ್ಲಿ ನವಗ್ರಹ ಪೂಜೆ, ವಿಶೇಷ ಅಭಿಷೇಕ, ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಯಿತು.
ಬೆಳಗ್ಗೆಯಿಂದ ಸಂಜೆಯ ವರೆಗೆ ಕುಟುಂಬ ಸಮೇತರಾಗಿ ದೇವಸ್ಥಾನಕ್ಕೆ ಆಗಮಿಸಿದ ನೂರಾರು ಜನರು ಶ್ರದ್ಧಾ-ಭಕ್ತಿಯಿಂದ ಹಾಲೆರೆಯುವ ಮೂಲಕ ಭಕ್ತಿ ಸಮರ್ಪಿಸಿದರು. ಉಳಿದಂತೆ ನಗರದ ಭಾಗಶಃ ಜನರು ಶುಕ್ರವಾರ ತಮ್ಮ ಮನೆಯಲ್ಲಿಯೂ ನಾಗದೇವರ ಮೂರ್ತಿಗೆ ಹಾಲೆರೆಯುತ್ತಿದ್ದ ದೃಶ್ಯಗಳು ಅಲ್ಲಲ್ಲಿ ಕಂಡು ಬಂದವು.ಮಹಿಳೆಯರು ಪಂಚಮಿ ಹಬ್ಬಕೆಂದು ಮನೆಯಲ್ಲಿ ತಯಾರಿಸಿದ ಉಂಡಿ, ಕರ್ಚಿಕಾಯಿ ಸೇರಿದಂತೆ ವಿವಿಧ ಬಗೆಯ ಖಾದ್ಯಗಳನ್ನು ತಮ್ಮ ಬಂಧು-ಬಳಗದವರಿಗೆ ಹಾಗೂ ಸ್ನೇಹಿತರಿಗೆ ಪರಸ್ಪರ ವಿನಿಮಯ ಮಾಡಿಕೊಳ್ಳುವ ಮೂಲಕ ಸಂಭ್ರಮಿಸಿದರು. ನಗರದ ಉಣಕಲ್ಲ, ಎಪಿಎಂಸಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣ ಸೇರಿದಂತೆ ಕೆಲವು ಪ್ರದೇಶದಲ್ಲಿ ಮರಕ್ಕೆ ಕಟ್ಟಿದ ಜೋಕಾಲಿಯಲ್ಲಿ ಮಕ್ಕಳು, ಯುವಕ-ಯುವತಿಯರು ಆಟವಾಡುವ ಮೂಲಕ ಸಂಭ್ರಮಿಸಿದರು. ಲೋಕಕಲ್ಯಾಣಾರ್ಥ ಅಶ್ಲೇಷಾ ಬಲಿ ಪೂಜೆ
ವಿಶ್ವೇಶ್ವರ ನಗರದಲ್ಲಿರುವ ಪರಿವಾರ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶುಕ್ರವಾರ ಲೋಕಕಲ್ಯಾಣಾರ್ಥವಾಗಿ ಸರ್ಪದೋಷ ಪರಿಹಾರ ಶಾಂತಿ ಹಾಗೂ ಆಶ್ಲೇಷಾ ಬಲಿ ಮತ್ತು ಸುಭ್ರಹ್ಮಣ್ಯದೇವರಿಗೆ ಕಾರ್ತಿಕೋತ್ಸವ ಹಮ್ಮಿಕೊಳ್ಳಲಾಯಿತು. ಈ ವೇಳೆ ನೂರಾರು ಜನತೆ ಮಹಾಪೂಜೆ, ಕಲ್ಪೋಕ್ತ ನಾಗಪೂಜೆ, ಪುಷ್ಪಾಲಂಕಾರ, ಅಷ್ಟೋತ್ತರ ಸಹಿತ ಶೇಷಸೇವೆ, ಸುಬ್ರಹ್ಮಣ್ಯ ರಕ್ಷಾಕವಚ, ಕಾರ್ತಿಕೋತ್ಸವ ಸೇವೆ ಸಲ್ಲಿಸಿದರು.