ನಾಗಸಂದ್ರ-ಮಾದಾವರ ಶೀಘ್ರ ಮೆಟ್ರೋ ಟ್ರಯಲ್‌ ರನ್‌

| Published : Jul 10 2024, 12:44 AM IST

ನಾಗಸಂದ್ರ-ಮಾದಾವರ ಶೀಘ್ರ ಮೆಟ್ರೋ ಟ್ರಯಲ್‌ ರನ್‌
Share this Article
  • FB
  • TW
  • Linkdin
  • Email

ಸಾರಾಂಶ

ನಮ್ಮ ಮೆಟ್ರೋ ಹಸಿರು ಕಾರಿಡಾರ್‌ನ ನಾಗಸಂದ್ರ ಹಾಗೂ ಮಾದಾವರದ ನಡುವಿನ ವಿಸ್ತರಿತ 3.7 ಕಿಮೀ ಮಾರ್ಗದಲ್ಲಿ ಶೀಘ್ರವೇ ರೈಲಿನ ಪ್ರಾಯೋಗಿಕ ಸಂಚಾರ ನಡೆಸಲು ಬೆಂಗಳೂರು ಮೆಟ್ರೋ ರೈಲು ನಿಗಮ ಮುಂದಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಮ್ಮ ಮೆಟ್ರೋ ಹಸಿರು ಕಾರಿಡಾರ್‌ನ ನಾಗಸಂದ್ರ ಹಾಗೂ ಮಾದಾವರದ ನಡುವಿನ ವಿಸ್ತರಿತ 3.7 ಕಿಮೀ ಮಾರ್ಗದಲ್ಲಿ ಶೀಘ್ರವೇ ರೈಲಿನ ಪ್ರಾಯೋಗಿಕ ಸಂಚಾರ ನಡೆಸಲು ಬೆಂಗಳೂರು ಮೆಟ್ರೋ ರೈಲು ನಿಗಮ ಮುಂದಾಗಿದೆ.

ವಾಣಿಜ್ಯ ಸಂಚಾರ ಆರಂಭಕ್ಕೂ ಮುನ್ನ ಮೆಟ್ರೋ ರೈಲು ಸುರಕ್ಷತಾ ಆಯುಕ್ತರ (ಸಿಎಂಆರ್‌ಸಿ) ಅಂತಿಮ ತಪಾಸಣೆ ನಡೆದು ಒಪ್ಪಿಗೆ ಸಿಗಬೇಕು. ಅಂತಿಮ ತಪಾಸಣೆಗೆ ಸಿಎಂಆರ್‌ಸಿನಿಂದ ಪತ್ರ ಬಂದಿದೆ. ಅದಕ್ಕೂ ಮುನ್ನ ಪ್ರಾಯೋಗಿಕ ಸಂಚಾರ ನಡೆಸಲಿದ್ದೇವೆ. ಬೆಳಗಿನ ವೇಳೆ ಈ ಮಾರ್ಗದಲ್ಲಿ ಕಾರ್ಯಾಚರಣೆ ಇರುವುದರಿಂದ ರಾತ್ರಿ ವೇಳೆ ರೈಲುಗಳ ಪ್ರಾಯೋಗಕ ಸಂಚಾರ ನಡೆಸುವ ಬಗ್ಗೆ ಚಿಂತನೆ ನಡೆದಿದೆ. ತಂತ್ರಜ್ಞರೊಂದಿಗೆ ಸಮಾಲೋಚಿಸಿ ಮುಂದಿನ ವಾರವೇ ಸಂಚಾರ ನಡೆಸಲು ಸಾಧ್ಯವೇ ಎಂಬುದನ್ನು ತೀರ್ಮಾನಿಸಲಾಗುವುದು .ಸಿಗ್ನಲಿಂಗ್‌, ಎಲೆಕ್ಟ್ರಿಫಿಕೇಶನ್‌, ತಿರುವಿನಲ್ಲಿ ರೈಲಿನ ವೇಗದಲ್ಲಿನ ವ್ಯತ್ಯಾಸ, ಬ್ರೇಕ್‌ ವ್ಯವಸ್ಥೆ ಸೇರಿ ಇನ್ನಿತರ ತಪಾಸಣೆಗಳು ನಡೆಯಲಿದೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ತಿಳಿಸಿದರು.

ಕಳೆದ ಐದು ವರ್ಷಗಳಿಂದ ನಾಗಸಂದ್ರ - ಮಾದಾವರ ನಡುವಿನ ಮೆಟ್ರೋ ಕಾಮಗಾರಿ ನಡೆಯುತ್ತಲೇ ಇದೆ. 2020ರಲ್ಲೇ ಪೂರ್ಣಗೊಳ್ಳಬೇಕಿದ್ದರೂ ಭೂಸ್ವಾಧೀನ, ಕೋವಿಡ್‌, ವಿಳಂಬ ಕಾಮಗಾರಿಯಿಂದ ಒಟ್ಟಾರೆ ಮಾರ್ಗದ ಕೆಲಸ ಆಮೆಗತಿಯಲ್ಲಿ ಸಾಗಿತ್ತು.

ಈ ವಿಸ್ತರಿತ ಮಾರ್ಗದಲ್ಲಿ ಮಂಜುನಾಥ್ ನಗರ, ಚಿಕ್ಕಬಿದರಕಲ್ಲು (ಹಿಂದಿನ ಜಿಂದಾಲ್ ನಗರ) ಮತ್ತು ಮಾದಾವರ (ಬಿಐಇಸಿ) ಮೆಟ್ರೋ ನಿಲ್ದಾಣಗಳಿದ್ದು, ತಲಾ ₹298 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ವಿಸ್ತರಿತ ಮಾರ್ಗದಲ್ಲಿ ಅಂಚೆಪಾಳ್ಯ ಗ್ರಾಮ ಮತ್ತು ಇತರೆ ಹಳ್ಳಿಗಳಿಗೆ ಪ್ರವೇಶವನ್ನು ಒದಗಿಸಲು ಬಿಎಂಆರ್‌ಸಿಎಲ್‌ 3 ಕಿ.ಮೀ. ರಸ್ತೆ ನಿರ್ಮಿಸಿದೆ.

==

ಜುಲೈ/ಆಗಸ್ಟ್‌ನಲ್ಲಿ ಆರಂಭ

ವಿಸ್ತರಿತ ಮಾರ್ಗದಲ್ಲಿ ವಾಣಿಜ್ಯ ಸೇವೆ ಜುಲೈ ಅಂತ್ಯ ಅಥವಾ ಆಗಸ್ಟ್‌ನಲ್ಲಿ ಆರಂಭವಾಗುವ ಸಾಧ್ಯತೆ ಇದೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ಹೇಳಿದ್ದಾರೆ. ವಿಸ್ತರಿತ ಮಾರ್ಗದಿಂದ ಒಟ್ಟಾರೆ ಹಸಿರು ಕಾರಿಡಾರ್ 33 ಕಿಮೀ ಹಾಗೂ ಬೆಂಗಳೂರು ಮೆಟ್ರೋ ಜಾಲ ಸುಮಾರು 77 ಕಿಮೀಗೆ ವಿಸ್ತರಣೆ ಆಗಲಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರಕ್ಕೆ (ಬಿಐಇಸಿ) ಭೇಟಿ ನೀಡುವ ಸಾವಿರಾರು ಜನರಿಗೆ ಅನುಕೂಲವಾಗಲಿದೆ. ಅದಲ್ಲದೇ, ಮಾದನಾಯಕನಹಳ್ಳಿ ಮತ್ತು ಮಾಕಳಿ ಗ್ರಾಮಗಳ ನಿವಾಸಿಗಳಿಗೆ ಈ ಮೆಟ್ರೋ ಹತ್ತಿರವಾಗಲಿದ್ದು, ನೆಲಮಂಗಲದ ನಿವಾಸಿಗಳಿಗೆ ಕೊನೆಯ ಮೆಟ್ರೋ ನಿಲ್ದಾಣ ಕೇವಲ 6 ಕಿ.ಮೀ. ದೂರದಲ್ಲಿದೆ.