ಸಾರಾಂಶ
ಕನ್ನಡಪ್ರಭ ವಾರ್ತೆ ನಾಗಮಂಗಲ
ತಾಲೂಕಿನ ಎ.ನಾಗತಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ೨೧ನೇ ನಾಗತಿಹಳ್ಳಿ ಸಂಸ್ಕೃತಿ ಹಬ್ಬ ಮಾ.೨೬ರಿಂದ ೩೦ರವರೆಗೆ ನಡೆಯಲಿದೆ.ಉಚಿತ ವೈದ್ಯಕೀಯ ಶಿಬಿರಗಳು, ಸಾಹಿತ್ಯ ಸಂವಾದ, ಕೃಷಿ ಚಿಂತನೆ, ನಾಟಕಗಳು, ಕೋಲಾಟ, ನೃತ್ಯ, ಸಂಗೀತ, ಸ್ಮರಣಸಂಚಿಕೆ ಬಿಡುಗಡೆ, ಮಕ್ಕಳಿಂದ ತಾರಾಲಯ ವೀಕ್ಷಣೆ, ಚಿತ್ರರಚನೆ ಹೀಗೆ ಬಹುಮುಖಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಮಾ.೨೬ರಂದು ನಾಗತಿಹಳ್ಳಿ ಸರ್ಕಾರಿ ಶಾಲೆಯ ಮಕ್ಕಳು ಬೆಂಗಳೂರಿನ ನೆಹರು ತಾರಾಲಯಕ್ಕೆ ಭೇಟಿ ನೀಡಿ ವೀಕ್ಷಿಸಿ ನಿರ್ದೇಶಕ ಬಿ.ಆರ್.ಗುರುಪ್ರಸಾದ್ ಮತ್ತು ವಿಜ್ಞಾನಿಗಳೊಂದಿಗೆ ಪ್ರಶ್ನೋತ್ತರ ನಡೆಸಲಿದ್ದಾರೆ.ಮಾ.೨೭ರಂದು ಬೆಂಗಳೂರು ಅಪೋಲೋ ಸ್ಪೆಷಾಲಿಟಿ ಆಸ್ಪತ್ರೆ, ಎಂಡೋಕ್ರೋನಾಲಜಿ ಮತ್ತು ಡಯಯಾಬಿಟಿಸ್ ಸಂಶೋಧನಾ ಕೇಂದ್ರ, ಮೈಸೂರಿನ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆ, ಬೆಂಗಳೂರಿನ ಮಿಂಟೋ ಆಸ್ಪತ್ರೆಯವರಿಂದ ಉಚಿತ ಆರೋಗ್ಯ ತಪಾಸಣೆ ನಡೆಯಲಿದೆ.
ಮಾ.೨೭ರಂದು ಸಂಜೆ ೭ಕ್ಕೆ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಖ್ಯಾತ ವಿಮರ್ಶಕ ನರಹಳ್ಳಿ ಬಾಲಸುಭ್ರಹ್ಮಣ್ಯ ವಹಿಸುವರು. ಸಂಘಟಕ ದೇವೇಗೌಡ, ಲೇಖಕ ದೊಡ್ಡೇಗೌಡ ಅತಿಥಿಗಳಾಗಿ ಆಗಮಿಸುವರು. ಸಂಜೆ ೮ಕ್ಕೆ ಯಶಸ್ವಿ ನಾಗತಿಹಳ್ಳಿ ನಿರ್ದೇಶನದ ಆತ್ಮಾವಲೋಕನ ನಾಟಕ ಪ್ರದರ್ಶನಗೊಳ್ಳಲಿದೆ.ಮಾ.೨೮ರಂದು ಬೆಳಗ್ಗೆ ೧೦ಕ್ಕೆ ಕಾವ್ಯ ರಸಗ್ರಹಣ ಶಿಬಿರದ ಉದ್ಘಾಟನೆಯನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪ್ರೊ.ಎಲ್.ಎನ್. ಮುಕುಂದರಾಜ್ ಉದ್ಘಾಟಿಸುವರು. ಸದಸ್ಯೆ ಎಚ್.ಆರ್.ಸುಜಾತ ಅತಿಥಿಗಳಾಗಿ ಭಾಗವಹಿಸುವರು. ಗೋಷ್ಠೀ-೧ರಲ್ಲಿ ನವೋದಯ ಮತ್ತು ನವ್ಯಕಾವ್ಯ ವಸ್ತು, ಸ್ವರೂಪ ಕುರಿತು ಡಾ.ಶಿಲ್ಪಶ್ರೀ, ದಲಿತ, ಬಂಡಾಯ ಕಾವ್ಯ, ಭಾಷಾ ಬಳಕೆ, ಆಶಯ ಕುರಿತು ಡಾ.ರವಿಕುಮಾರ, ಗೋಷ್ಠಿ-೨ರಲ್ಲಿ ಸಮಕಾಲೀನ ಕಾವ್ಯ ಸ್ತ್ರೀ ಸಂವೇದನೆ ಕುರಿತು ಎಚ್.ಆರ್.ಸುಜಾತ, ಕಾವ್ಯ ವಾಚಿಸುವ ಬಗೆ ಮತ್ತು ಇತ್ತೀಚಿನ ಕಾವ್ಯದ ವಿಭಿನ್ನ ನೆಲೆಗಳು ವಿಷಯದ ಬಗ್ಗೆ ಮಲ್ಲಿಕಾರ್ಜುನ ಮಹಾಮನೆ ವಿಚಾರ ಮಂಡಿಸುವರು.
ಗೋಷ್ಠಿ-೩ರಲ್ಲಿ ಕವಿ-ಭಾವಗೀತೆ-ಚಲನಚಿತ್ರಗೀತೆ ಇವುಗಳ ಭಾವ ಸಂಬಂಧವನ್ನು ಕುರಿತು ಕವಿ ವಿಮರ್ಶಕರೊಂದಿಗೆ ಶಿಬಿರಾರ್ಥಿಗಳು ಚರ್ಚಿಸುವರು.ಸಂಜೆ ೭ ಗಂಟೆಗೆ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಟ ಪ್ರಕಾಶ್‌ರಾಜ್ ವಹಿಸುವರು. ಅತಿಥಿಗಳಾಗಿ ಬೆಂಗಳೂರು ಗಾಂಧಿ ಭವನ ಅಧ್ಯಕ್ಷ ವೂಡೇ ಪಿ.ಕೃಷ್ಣ, ಮಂಗಳೂರು ಎಂಆರ್‌ಪಿಎಲ್ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಸುದರ್ಶನ್, ಜಿಲ್ಲಾ ಆರಕ್ಷಕ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ, ರಂಗಭೂಮಿ ಕಲಾವಿದ ಮಂಡ್ಯ ರಮೇಶ್ ಭಾಗವಹಿಸುವರು. ರಾತ್ರಿ ೮ಕ್ಕೆ ನಟನ ರಂಗಶಾಲೆ ಮಕ್ಕಳಿಂದ ಮಕ್ಕಳ ಮಹಾ ಭಾರತ ನಾಟಕ ಪ್ರದರ್ಶನಗೊಳ್ಳಲಿದೆ.
ಮಾ.೨೯ರಂದು ಬೆಳಗ್ಗೆ ೧೦ ಗಂಟೆಗೆ ರೈತರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಲಿದೆ. ಸಹಜ ಕೃಷಿಯಲ್ಲಿ ಇಂಚಿಂಚು ನೆಲದ ಬಳಕೆ ಕುರಿತು ಸಹಜ ಕೃಷಿ ತಜ್ಞ ಶಿವನಂಜಯ್ಯ ಬಾಳೆಕಾಯಿ, ಕೃಷಿಕರು ಕಷ್ಟಪಟ್ಟು ದುಡಿದರೂ ಬಡವರಾಗುತ್ತಿರುವುದೇಕೆ? ಕುರಿತು ಕೃಷಿ ಬರಹಗಾರ ಕೃಷ್ಣಮೂರ್ತಿ ಬಿಳಿಗೆರೆ, ತೋಟಗಾರಿಕೆಯಲ್ಲಿ ಮಣ್ಣು, ನೀರು ಗೊಬ್ಬರಗಳನ್ನು ಜಾಣತನದಿಂದ ಬಳಸುವ ವಿಧಾನಗಳು ಕುರಿತು ಕಾಡು ಕೃಷಿ ಪಾಲಕ ಅರುಣ್ ಶೆಟ್ಟಿಕೆರೆ, ಮನೆಯಂಗಳದಲ್ಲಿ ಕೈತೋಟದ ಆಟ, ತೋಟದಂಗಳದಲ್ಲಿ ಹಸುಗಳ ಓಡಾಟ ಕುರಿತು ಪಶುಪಾಲನ ಪಂಡಿತ ಶಿವಪ್ರಸನ್ನ, ಕೃಷಿ ಮತ್ತು ಜೀವನೋಪಾಯ ಕ್ಷೇತ್ರದಲ್ಲಿ ಸೌರಶಕ್ತಿಯ ಬಳಕೆ ಬಗ್ಗೆ ಸೆಲ್ಕೋ ಇಂಡಿಯಾ ಸಂಸ್ಥೆ ಪ್ರತಿನಿಧಿಗಳು ಭಾಗವಹಿಸುವರು.ಸಂಜೆ ೫ ಗಂಟೆಗೆ ರಾಮಚಂದ್ರ ಹಡಪದ್ ತಂಡದಿಂದ ಸಂಗೀತ ಸಂಜೆ ಕಾರ್ಯಕ್ರಮ ನಡೆಯಲಿದೆ. ಸಂಜೆ ೭ ಗಂಟೆಗೆ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ವಹಿಸುವರು. ಮುಖ್ಯ ಅತಿಥಿಗಳಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಾಲ್ಗೊಳ್ಳುವರು. ರಾತ್ರಿ ೮ಕ್ಕೆ ಯಶಸ್ವಿ ನಾಗತಿಹಳ್ಳಿ ಪ್ರಸ್ತುತಪಡಿಸುವ ಗಾಯ ನಾಟಕ ಪ್ರದರ್ಶನಗೊಳ್ಳಲಿದೆ.ಮಾ.೩೦ರಂದು ಬೆಳಗ್ಗೆ ೧೦ಕ್ಕೆ ಕರ್ನಾಟಕ ಜನಪದ ಅಕಾಡೆಮಿ ಸಹಯೋಗದಲ್ಲಿ ಬೆಳಗ್ಗೆ ೧೦ಕ್ಕೆ ಜನಪದ ಗೀತೆಗಳು ಮತ್ತು ನೃತ್ಯ ಪ್ರದರ್ಶನಗಳು ನಡೆಯಲಿವೆ. ಸಂಜೆ ೪ ಗಂಟೆಗೆ ಲಿಂಗರಾಜು ಕದಬಹಳ್ಳಿ ಸಂಪಾದಿಸಿರುವ ನನ್ನ ಶಾಲೆ-ನನ್ನ ತಾಯಿ ಸ್ಮರಣ ಸಂಚಿಕೆಯನ್ನು ವಿಶ್ರಾಂತ ಉಪ ನಿರ್ದೇಶಕ ಎನ್.ಎಲ್.ಗಂಗಾಧರಗೌಡ ಬಿಡುಗಡೆ ಮಾಡುವರು. ಸ್ಮರಣ ಫಲಕವನ್ನು ಅನಿವಾಸಿ ಭಾರತೀಯ ಡಾ.ನಾಗರಾಜು ನಾಗತಿಹಳ್ಳಿ ಬಿಡುಗಡೆ ಮಾಡುವರು. ಸಂಜೆ ೬ಕ್ಕೆ ಅಭಿವ್ಯಕ್ತಿ ಮಹಿಳಾ ಸಂಘದ ಕಲಾವಿದೆಯರಿಂದ ಕೋಲಾಟ ಪ್ರದರ್ಶನ, ಸಂಜೆ ೭ಕ್ಕೆ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾಧಿಕಾರಿ ಡಾ.ಕುಮಾರ, ನಟ ಕಿಶೋರ್ ವಹಿಸುವರು. ಮೂಡಬಿದರೆ ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷ ಡಾ.ಮೋಹನ್ ಆಳ್ವ ಅಭಿನಂದನಾ ನುಡಿಗಳನ್ನಾಡುವರು. ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಎಂ.ಕೃಷ್ಣೇಗೌಡ ಸಮಾರೋಪ ಭಾಷಣ ಮಾಡುವರು. ರಾತ್ರಿ ೮ಕ್ಕೆ ಆಳ್ವಾಸ್ ಸಾಂಸ್ಕೃತಿಕ ವೈಭವ ನಡೆಯಲಿದೆ.