ನಾಲಾ ಜಾಗ ಭೂ ಪರಿವರ್ತನೆ: ವಿಎ ಪ್ರಾಸಿಕ್ಯೂಷನ್‌ಗೆ ಜಿಲ್ಲಾಧಿಕಾರಿ ಅನುಮತಿ

| Published : Oct 24 2025, 01:00 AM IST

ನಾಲಾ ಜಾಗ ಭೂ ಪರಿವರ್ತನೆ: ವಿಎ ಪ್ರಾಸಿಕ್ಯೂಷನ್‌ಗೆ ಜಿಲ್ಲಾಧಿಕಾರಿ ಅನುಮತಿ
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀರಂಗಪಟ್ಟಣ ತಾಲೂಕಿನ ಬೆಳಗೊಳ ಗ್ರಾಮದ ಸರ್ವೇ ನಂ. ೪೪ರಲ್ಲಿ ೨.೧೩ ಎಕರೆ ವಿಸ್ತೀರ್ಣದ ಜಮೀನಿಗೆ ಸರ್ಕಾರಿ ನಾಲಾ ಜಾಗವನ್ನೂ ಸಹ ಸೇರಿಸಿ ವಸತಿ ಉದ್ದೇಶಕ್ಕೆ ಭೂಪರಿವರ್ತನೆ ಮಾಡಿದ್ದಾರೆನ್ನಲಾದ ರಾಜಸ್ವ ನಿರೀಕ್ಷಕ ಹಾಗೂ ಗ್ರಾಮ ಆಡಳಿತಾಧಿಕಾರಿ ಅವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಜಿಲ್ಲಾಧಿಕಾರಿ ಡಾ.ಕುಮಾರ ಅನುಮತಿ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಶ್ರೀರಂಗಪಟ್ಟಣ ತಾಲೂಕಿನ ಬೆಳಗೊಳ ಗ್ರಾಮದ ಸರ್ವೇ ನಂ. ೪೪ರಲ್ಲಿ ೨.೧೩ ಎಕರೆ ವಿಸ್ತೀರ್ಣದ ಜಮೀನಿಗೆ ಸರ್ಕಾರಿ ನಾಲಾ ಜಾಗವನ್ನೂ ಸಹ ಸೇರಿಸಿ ವಸತಿ ಉದ್ದೇಶಕ್ಕೆ ಭೂಪರಿವರ್ತನೆ ಮಾಡಿದ್ದಾರೆನ್ನಲಾದ ರಾಜಸ್ವ ನಿರೀಕ್ಷಕ ಹಾಗೂ ಗ್ರಾಮ ಆಡಳಿತಾಧಿಕಾರಿ ಅವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಜಿಲ್ಲಾಧಿಕಾರಿ ಡಾ.ಕುಮಾರ ಅನುಮತಿ ನೀಡಿದ್ದಾರೆ.

ಬೆಳಗೊಳದ ಹಿಂದಿನ ರಾಜಸ್ವ ನಿರೀಕ್ಷಕ ಜಯರಾಮಮೂರ್ತಿ ಹಾಗೂ ಹಿಂದಿನ ಗ್ರಾಮ ಆಡಳಿತ ಅಧಿಕಾರಿ ಪುಟ್ಟಸ್ವಾಮಿ ಅವರನ್ನು ಪ್ರಾಸಿಕ್ಯೂಷನ್‌ಗೆ ಒಳಪಡಿಸಲು ಅನುಮತಿ ನೀಡಿದೆ. ಆದರೆ, ಜಯರಾಮಮೂರ್ತಿ ಅವರ ನರರೋಗದಿಂದ ಬಳಲುತ್ತಿರುವುದರಿಂದ ಪ್ರಾಸಿಕ್ಯೂಷನ್ ಅನುಮತಿ ನೀಡಿದರೂ ವಿಚಾರಣೆಗೆ ಸಹಕರಿಸಲು ಸಾಧ್ಯವಿಲ್ಲದಿರುವುದರಿಂದ ಅವರನ್ನು ಪ್ರಾಸಿಕ್ಯೂಷನ್‌ಗೆ ಒಳಪಡಿಸುವುದರಿಂದ ಕೈಬಿಡಲಾಗಿದೆ.

ಬೆಳಗೊಳ ಸರ್ವೇ ನಂ.೪೪ರಲ್ಲಿರುವ ೨.೧೩ ಎಕರೆ ವಿಸ್ತೀರ್ಣದ ಪೈಕಿ ೧೪ ಗುಂಟೆ ವಿಸ್ತೀರ್ಣ ಕಾವೇರಿ ನೀರಾವರಿ ನಿಗಮಕ್ಕೆ ನಾಲಾ ಜಾಗ ಎಂದು ಭೂಸ್ವಾಧೀನವಾಗಿದೆ. ಈ ಜಾಗವನ್ನೂ ಸಹ ಸೇರಿಸಿ ವಸತಿ ಉದ್ದೇಶಕ್ಕಾಗಿ ಅಕ್ರಮವಾಗಿ ಸರ್ಕಾರಕ್ಕೆ ತಪ್ಪು ಮಾಹಿತಿ, ಸುಳ್ಳು ದಾಖಲೆಗಳನ್ನು ನೀಡಿ ಶ್ರೀರಂಗಪಟ್ಟಣ ತಾಲೂಕಿನ ಹೊಸ ಆನಂದೂರು ಗ್ರಾಮದ ವೀರಭದ್ರಯ್ಯನವರಿಗೆ ಭೂಪರಿವರ್ತನೆ ಮಾಡಲಾಗಿದೆ. ಹಾಗಾಗಿ ಇವರ ವಿರುದ್ಧ ಭೂ ಕಂದಾಯ ಕಾಯಿದೆ ೧೯೬೪ರ ಕಲಂ ೧೯೨ ಎ ಮತ್ತು ೯೫ರಂತೆ ಪ್ರಕರಣ ದಾಖಲಿಸಿ ಕ್ರಮ ಜರುಗಿಸುವಂತೆ ಬೆಳಗೊಳ ರಾಜಸ್ವ ನಿರೀಕ್ಷಕ ಸಿ.ಬಸವರಾಜು ಕೆ ಆರ್ ಸಾಗರ ಪೊಲೀಸರಿಗೆ ದೂರು ನೀಡಿದ್ದರು.

ಈ ವಿಚಾರವಾಗಿ ನೌಕರರನ್ನು ವಿಚಾರಣೆಗೊಳಪಡಿಸಿದಾಗ ಪುಟ್ಟಸ್ವಾಮಿ ಅವರು ಭೂ ಪರಿವರ್ತನೆ ಸಂಬಂಧ ಅರ್ಜಿದಾರರ ಸಮಕ್ಷಮದಲ್ಲಿ ಮಹಜರ್ ಜರುಗಿಸಿ ತಾವು ಮಹಜರ್‌ಗೆ ಸಹಿ ಮಾಡಿರುವುದಾಗಿ ತಿಳಿಸಿದ್ದಾರೆ. ಆದರೆ, ಕಾವೇರಿ ನೀರಾವರಿ ನಿಗಮಕ್ಕೆ ೧೪ ಗುಂಟೆ ವಿಸ್ತೀರ್ಣ ಭೂ ಸ್ವಾಧೀನವಾಗಿದ್ದರೂ ನಮೂದಿಸದಿರುವುದು ಕರ್ತವ್ಯಲೋಪಕ್ಕೆ ಸಾಕ್ಷಿಯಾಗಿದೆ. ಹಾಗಾಗಿ ಹಿಂದಿನ ರಾಜಸ್ವ ನಿರೀಕ್ಷಕ ಹಾಗೂ ಗ್ರಾಮ ಲೆಕ್ಕಿಗ ಪುಟ್ಟಸ್ವಾಮಿ ಅವರನ್ನು ಅಭಿಯೋಜನೆ (ಪ್ರಾಸಿಕ್ಯೂಷನ್)ಗೆ ಒಳಪಡಿಸಲು ಅನುಮತಿ ನೀಡುವಂತೆ ಕೆ ಆರ್ ಸಾಗರ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಅವರು ದಾಖಲೆಗಳನ್ನು ಜಿಲ್ಲಾಧಿಕಾರಿಗಳಿಗೆ ಒದಗಿಸಿದ್ದರು.

ಬೆಳಗೊಳ ಗ್ರಾಮದ ಸ.ನಂ. ೪೪ರಲ್ಲಿನ ೧೪ ಗುಂಟೆ ಜಮೀನು ವರುಣಾನಾಲಾ ನಿರ್ಮಾಣಕ್ಕಾಗಿ ೨೮.೮.೧೯೯೩ರಂತೆ ಅಧಿಸೂಚನೆಯಾಗಿ ಭೂ ಸ್ವಾಧೀನಪ್ರಕ್ರಿಯೆಗೆ ಒಳಪಟ್ಟಿದೆ. ವರುಣಾ ನಾಲೆಗೆಂದು ಭೂಸ್ವಾಧೀನವಾದ ಜಮೀನಿಗೆ ಭೂ ಪರಿಹಾರವಾಗಿ ೨೯,೧೯೯ ರು.ಗಳನ್ನು ವೆಂಕಟಲಕ್ಷ್ಮಮ್ಮ ಅವರು ಪಡೆದುಕೊಂಡಿರುವುದು ದಾಖಲೆಗಳಿಂದ ಕಂಡುಬಂದಿದೆ. ಕಂದಾಯ ದಾಖಲೆಗಳಲ್ಲಿ ಇಂಡೀಕರಣವಾದ ಸನ್ನಿವೇಶವನ್ನು ದುರ್ಬಳಕೆ ಮಾಡಿಕೊಂಡು ೨೦೧೩ರ ವೇಳೆ ಜಮೀನಿನ ಮಾಲೀಕತ್ವ ಹೊಂದಿದ್ದ ಬಸವರಾಜು ೧೦.೧.೨೦೧೩ರಲ್ಲಿ ೧೪ ಗುಂಟೆಯನ್ನು ಒಳಗೊಂಡಂತೆ ಪೂರ್ಣ ೨.೧೩ ಗುಂಟೆ ಜಮೀನನ್ನು ವೀರಭದ್ರಯ್ಯನವರಿಗೆ ಮಾರಾಟ ಮಾಡಿರುವುದು ಕಂಡುಬಂದಿರುತ್ತದೆ.

ಜಮೀನಿನ ಸ್ಥಳ ತನಿಖೆ ನಡೆಸಿ ವಸ್ತುಸ್ಥಿತಿಯ ಬಗ್ಗೆ ಮಾಹಿತಿಯನ್ನು ಪಡೆದು ಭೂ ಪರಿವರ್ತನೆಗೆ ಶಿಫಾರಸು ಮಾಡದೆ ಪೂರ್ತಿ ೨.೧೩ ಎಕರೆ ಜಮೀನಿಗೆ ಭೂ ಪರಿವರ್ತನೆ ಮಾಡಲು ರಾಜಸ್ವ ನಿರೀಕ್ಷಕರಾಗಿದ್ದ ಜಯರಾಮಮೂರ್ತಿ ಹಾಗೂ ಗ್ರಾಮಲೆಕ್ಕಿಗ ಪುಟ್ಟಸ್ವಾಮಿ ಸಲ್ಲಿಸಿ ಕರ್ತವ್ಯಲೋಪವೆಸಗಿರುವುದು ಸ್ಪಷ್ಟವಾಗಿದೆ ಎಂದು ತಿಳಿಸಲಾಗಿದೆ.

ಕಾನೂನುಬಾಹಿರ ಪ್ರಕ್ರಿಯೆಯಲ್ಲಿ ಭಾಗಿಯಾಗಿರುವ ಇಬ್ಬರು ನೌಕರರ ಪೈಕಿ ಜಯರಾಮಮೂರ್ತಿ ನರರೋಗದಿಂದ ಬಳಲುತ್ತಿರುವುದು ವೈದ್ಯಕೀಯ ವರದಿಗಳಿಂದ ದೃಢಪಟ್ಟಿದೆ. ಅವರು ವಿಚಾರಣೆಗೆ ಸಹಕರಿಸಲು ಸಾಧ್ಯವಿಲ್ಲದೇ ಇರುವುದರಿಂದ ಪ್ರಾಸಿಕ್ಯೂಷನ್‌ನಿಂದ ಅವರನ್ನು ಕೈಬಿಡಲಾಗಿದೆ. ಮತ್ತೊಬ್ಬ ನೌಕರ ಪುಟ್ಟಸ್ವಾಮಿ ಅವರನ್ನು ಪ್ರಾಸಿಕ್ಯೂಷನ್‌ಗೆ ಒಳಪಡಿಸುವಂತೆ ಜಿಲ್ಲಾಧಿಕಾರಿ ಅವರು ಆದೇಶ ಹೊರಡಿಸಿದ್ದಾರೆ.