ಸಾರಾಂಶ
- ಸಾಲಗಾರರ ಕ್ಷೇತ್ರದಲ್ಲಿ ಶೇ.93, ಸಾಲಗಾರರಲ್ಲದ ಕ್ಷೇತ್ರದಲ್ಲಿ ಶೇ.98 ಮತದಾನ - - - ಕನ್ನಡಪ್ರಭ ವಾರ್ತೆ ಚನ್ನಗಿರಿ
ತಾಲೂಕಿನ ನಲ್ಲೂರು ಗ್ರಾಮದಲ್ಲಿರುವ ಕೃಷಿ ಪತ್ತಿನ ಸಹಕಾರ ಸಂಘ ಚುನಾವಣೆ ಮತದಾನ ಭಾನುವಾರ ಬೆಳಗ್ಗೆ 9 ಗಂಟೆಯಿಂದ ಆರಂಭಗೊಂಡು ಸಂಜೆ 4 ಗಂಟೆಯವರೆಗೆ ಶಾಂತಿಯುತವಾಗಿ ನಡೆಯಿತು.ಸಾಲಗಾರರ ಕ್ಷೇತ್ರದಲ್ಲಿ 11 ನಿರ್ದೇಶಕರು ಮತ್ತು ಸಾಲಗಾರರಲ್ಲದ ಕ್ಷೇತ್ರದಿಂದ 1 ನಿರ್ದೇಶಕರ ಆಯ್ಕೆಯಾಗಬೇಕಾಗಿದೆ. ಸಾಲಗಾರರ ಮತ್ತು ಸಾಲಗಾರರಲ್ಲದ ಕ್ಷೇತ್ರಗಳಿಂದ ಒಟ್ಟು 1558 ಜನ ಸಂಘದ ಮತದಾರ ಸದಸ್ಯರಿದ್ದಾರೆ. ಸಾಲಗಾರರ ಕ್ಷೇತ್ರದಲ್ಲಿ 1459 ಜನ ಸಂಘದ ಮತದಾರ ಸದಸ್ಯರು ಇದ್ದಾರೆ. ಇವರಲ್ಲಿ 1387 ಜನ ತಮ್ಮ ಮತಗಳನ್ನು ಚಲಾವಣೆ ಮಾಡಿದ್ದು, ಶೇ.93ರಷ್ಟು ಮತದಾನವಾಗಿದೆ. ಸಾಲಗಾರರಲ್ಲದ ಕ್ಷೇತ್ರದಲ್ಲಿ 99 ಜನ ಮತದಾರರು ಇದ್ದು, ಇವರಲ್ಲಿ 97 ಮತಗಳು ಚಲಾವಣೆಗೊಂಡು ಶೇ.98ರಷ್ಟು ಮತದಾನವಾಗಿದೆ ಎಂದು ಚುನಾವಣಾಧಿಕಾರಿ ಸತೀಶ್ ನಾಯ್ಕ್ ತಿಳಿಸಿದ್ದಾರೆ.
ಚುನಾವಣೆ ಮುಗಿದ ನಂತರ ಮತಗಳ ಎಣಿಕೆ ಕಾರ್ಯ ನಡೆಯಲಿದ್ದು, ಮತಗಳ ಎಣಿಕೆ ಸಂದರ್ಭದಲ್ಲಿ ಒಂದೊಂದು ಗುಂಪಿನಿಂದ 2 ಜನರಂತೆ 4 ಜನ ಏಜೆಂಟರು ಹಾಜರಿರುತ್ತಾರೆ. ಮತ ಎಣಿಕೆ ನಂತರ ನ್ಯಾಯಾಲಯ ಆದೇಶ ಹಿನ್ನೆಲೆ ಫಲಿತಾಂಶವನ್ನು ಘೋಷಣೆ ಮಾಡುವುದಿಲ್ಲ. ಮತ ಎಣಿಕೆಯಾದ ಮತಪತ್ರಗಳನ್ನು ಜಿಲ್ಲಾ ಸಹಕಾರ ಸಂಘದ ಕಚೇರಿಯಲ್ಲಿ ಭದ್ರವಾಗಿ ಇಡಲಾಗುವುದು ಎಂದು ತಿಳಿಸಿದ್ದಾರೆ.- - - ಬಾಕ್ಸ್ ಕೆಲವು ದಿನಗಳಿಂದ ನಲ್ಲೂರು ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಗೆ ಸಂಬಂಧಪಟ್ಟಂತೆ ಕೆಲವು ವಿವಾದಗಳು ಉಂಟಾಗಿದ್ದವು. ಪರಿಣಾಮ ಚುನಾವಣೆ ದಿನಾಂಕವನ್ನು ಮುಂದೂಡಲಾಗಿತ್ತು. ಈ ವಿಚಾರವಾಗಿ ಸಂಘದ ಕೆಲ ಸದಸ್ಯರು ನ್ಯಾಯಾಲಯದ ಮೆಟ್ಟಿಲೇರಿ ವಿವಾದಕ್ಕೆ ಕಾರಣ ಎನ್ನಲಾದ ಎಲ್ಲ ವಿಷಯಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಇದನ್ನು ಪರಿಶೀಲನೆ ನಡೆಸಿದ ನ್ಯಾಯಾಲಯ ಮೊದಲೇ ನಿಗದಿಪಡಿಸಿದ ದಿನಾಂಕವಾದ ಜ.12ರ ಭಾನುವಾರದಂದೇ ಚುನಾವಣೆ ನಡೆಸಲು ಆದೇಶ ನೀಡಿತು. ಕೋರ್ಟ್ ಆದೇಶ ಮೇರೆಗೆ ಭಾನುವಾರ ಚುನಾವಣೆ ನಡೆದಿದೆ.
ಈ ಸಹಕಾರ ಸಂಘಕ್ಕೆ 12 ನಿರ್ದೇಶಕರು ಚುನಾಯಿತರಾಗಬೇಕಾಗಿದೆ. ಸಾಲಗಾರರ ಕ್ಷೇತ್ರದಿಂದ 25 ಜನ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದು, 12 ಅಭ್ಯರ್ಥಿಗಳಂತೆ 2 ಗುಂಪುಗಳನ್ನಾಗಿ ಮಾಡಿಕೊಂಡಿದ್ದು, ಗುಂಪನ್ನು ಹೊರತುಪಡಿಸಿ ಒಬ್ಬ ಅಭ್ಯರ್ಥಿ ಕಣದಲ್ಲಿದ್ದಾರೆ. ಸಾಲಗಾರರಲ್ಲದ ಕ್ಷೇತ್ರದಿಂದ 3 ಜನ ಅಭ್ಯರ್ಥಿಗಳು ಕಣದಲ್ಲಿದ್ದಾರೆ.- - - -12ಕೆಸಿಎನ್‌ಜಿ2.ಜೆಪಿಜಿ:
ಚನ್ನಗಿರಿ ತಾಲೂಕಿನ ನಲ್ಲೂರು ಗ್ರಾಮದಲ್ಲಿ ಕೃಷಿ ಪತ್ತಿನ ಸಹಕಾರ ಸಂಘ ಚುನಾವಣೆಯಲ್ಲಿ ಮತದಾರರು ಸರತಿ ಸಾಲಿನಲ್ಲಿ ನಿಂತು ಮತಹಕ್ಕು ಚಲಾಯಿಸಿದರು.