ನಾಲ್ವಡಿ ಕೃಷ್ಣರಾಜ ಒಡೆಯರು ಮೈಸೂರು ಸಂಸ್ಥಾನದ ಇತಿಹಾಸದಲ್ಲಿ ಅಪ್ರತಿಮ ಆಡಳಿತಗಾರರಾಗಿ ಗುರುತಿಸಿಕೊಂಡಿದ್ದಾರೆ.
ಕಂಪ್ಲಿ: ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಗುರುವಾರ ನಾಲ್ವಡಿ ಕೃಷ್ಣರಾಜ ಒಡೆಯರ ಜಯಂತ್ಯುತ್ಸವವನ್ನು ಸರಳವಾಗಿ ಹಾಗೂ ಗೌರವಪೂರ್ವಕವಾಗಿ ಆಚರಿಸಲಾಯಿತು.
ತಹಸೀಲ್ದಾರ್ ಜೂಗಲ ಮಂಜುನಾಯಕ ಮಾತನಾಡಿ, ನಾಲ್ವಡಿ ಕೃಷ್ಣರಾಜ ಒಡೆಯರು ಮೈಸೂರು ಸಂಸ್ಥಾನದ ಇತಿಹಾಸದಲ್ಲಿ ಅಪ್ರತಿಮ ಆಡಳಿತಗಾರರಾಗಿ ಗುರುತಿಸಿಕೊಂಡಿದ್ದಾರೆ. ಅವರ ಆಡಳಿತ ಜನಪರ, ಅಭಿವೃದ್ಧಿ ಪರ ಹಾಗೂ ದೂರದೃಷ್ಟಿಯ ಚಿಂತನೆಯಿಂದ ಕೂಡಿದ್ದು, ಇಂದಿನ ಆಡಳಿತ ವ್ಯವಸ್ಥೆಗೂ ಮಾರ್ಗದರ್ಶಕವಾಗಿದೆ. ರಾಜ್ಯದ ಸಮಗ್ರ ಅಭಿವೃದ್ಧಿಗೆ ಅವರು ನೀಡಿದ ಕೊಡುಗೆ ಅಪಾರವಾಗಿದೆ. ಶಿಕ್ಷಣ, ಆರೋಗ್ಯ, ಕೃಷಿ, ಕೈಗಾರಿಕೆ, ನೀರಾವರಿ ಹಾಗೂ ಸಾಮಾಜಿಕ ಸುಧಾರಣೆಯಂತಹ ಕ್ಷೇತ್ರಗಳಲ್ಲಿ ಅವರು ಕೈಗೊಂಡ ದೂರದೃಷ್ಟಿಯ ಯೋಜನೆಗಳು ಮೈಸೂರು ಸಂಸ್ಥಾನವನ್ನು ದೇಶದ ಅತ್ಯಂತ ಪ್ರಗತಿಪರ ರಾಜ್ಯಗಳಲ್ಲಿ ಒಂದಾಗಿ ರೂಪಿಸಿವೆ. ಜನರ ಕಲ್ಯಾಣವೇ ಆಡಳಿತದ ಮೂಲ ಉದ್ದೇಶವಾಗಿರಬೇಕು ಎಂಬ ಧೋರಣೆಯನ್ನು ಅವರು ತಮ್ಮ ಆಡಳಿತದಲ್ಲಿ ಅಳವಡಿಸಿಕೊಂಡಿದ್ದರು ಎಂದು ತಿಳಿಸಿದರು.ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಿದ ನಾಲ್ವಡಿ ಕೃಷ್ಣರಾಜ ಒಡೆಯರು ಶಾಲೆಗಳು, ಕಾಲೇಜುಗಳು ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳ ಸ್ಥಾಪನೆಗೆ ಉತ್ತೇಜನ ನೀಡಿದರು. ಮಹಿಳಾ ಶಿಕ್ಷಣ, ಹಿಂದುಳಿದ ವರ್ಗಗಳ ಶೈಕ್ಷಣಿಕ ಪ್ರಗತಿ ಹಾಗೂ ಸಾಮಾಜಿಕ ಸಮಾನತೆಗೆ ಅವರು ಮಹತ್ವದ ಕೊಡುಗೆ ನೀಡಿದ್ದು, ಸಮಾಜ ಸುಧಾರಣೆಯಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದರು.ಕೈಗಾರಿಕಾ ಮತ್ತು ಆರ್ಥಿಕ ಕ್ಷೇತ್ರಗಳ ಅಭಿವೃದ್ಧಿಗೆ ಅವರ ಆಡಳಿತದಲ್ಲಿ ಹಲವು ಮಹತ್ವದ ಯೋಜನೆಗಳು ಜಾರಿಗೆ ಬಂದವು. ಕೃಷ್ಣರಾಜ ಸಾಗರ ಅಣೆಕಟ್ಟು ಸೇರಿದಂತೆ ಅನೇಕ ಅಭಿವೃದ್ಧಿ ಕಾಮಗಾರಿಗಳು ರಾಜ್ಯದ ಆರ್ಥಿಕ ಪ್ರಗತಿಗೆ ಭದ್ರ ಅಡಿಪಾಯ ಹಾಕಿದವು. ಈ ಕಾರಣದಿಂದಲೇ ಅವರನ್ನು “ಆಧುನಿಕ ಮೈಸೂರಿನ ಶಿಲ್ಪಿ” ಎಂದು ಕರೆಯಲಾಗುತ್ತದೆ ಎಂದು ಹೇಳಿದರು.
ಪ್ರಜಾಪ್ರಭುತ್ವ ಮೌಲ್ಯಗಳು, ಜನಪರ ಆಡಳಿತ ಹಾಗೂ ಅಭಿವೃದ್ಧಿ ಚಿಂತನೆಗಳ ಮೂಲಕ ನಾಲ್ವಡಿ ಕೃಷ್ಣರಾಜ ಒಡೆಯರು ಸಮಾಜಕ್ಕೆ ನೀಡಿದ ಸಂದೇಶ ಇಂದಿನ ಪೀಳಿಗೆಗೆ ಪ್ರೇರಣೆಯಾಗಿದೆ. ಯುವಕರು ಅವರ ಜೀವನ ಮತ್ತು ಸಾಧನೆಗಳಿಂದ ಸ್ಫೂರ್ತಿ ಪಡೆದು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.ಕಾರ್ಯಕ್ರಮದಲ್ಲಿ ಕಂದಾಯ ನಿರೀಕ್ಷಕ ವೈ.ಎಂ. ಜಗದೀಶ, ಶಿರಸ್ತೇದಾರ ಜಿ.ಪಂಪಾಪತಿ ಹಾಗೂ ಎಸ್.ಡಿ. ರಮೇಶ್, ಸಿಬ್ಬಂದಿ ಮಾಲತೇಶ ದೇಶಪಾಂಡೆ, ರಾಧಾ, ವಿಜಯಲಕ್ಷ್ಮಿ, ಶಾಂತಾ, ರೂಪಿಣಿ, ಚಂದ್ರಪ್ಪ, ನೀಲಕಂಠ ಇದ್ದರು.