ಸಾಮಾಜಿಕ ನ್ಯಾಯ ಎಂಬುದು ಕೇವಲ ಪರಿಕಲ್ಪನೆಯಲ್ಲ, ಸಮಾಜದ ಪ್ರತಿಯೊಬ್ಬರಿಗೂ ಸಮಾನ ಅವಕಾಶಗಳು ದೊರೆಯುವಂತೆ ಮಾಡುವ ಮಹತ್ವದ ಆಶಯೆ. ಎಲ್ಲರಿಗೂ ನ್ಯಾಯ ದೊರೆಯಬೇಕು ಮತ್ತು ಸಮಾಜದ ಹಿಂದುಳಿದ ವರ್ಗಗಳಿಗೂ ಶಿಕ್ಷಣ, ಉದ್ಯೋಗ ಹಾಗೂ ಸಾಮಾಜಿಕವಾಗಿ ಮುನ್ನಡೆಯಲು ಅವಕಾಶ ಸಿಗಬೇಕು ಎಂಬ ಉದ್ದೇಶದಿಂದ ನಾವು ನ್ಯಾಯಾಂಗ ವೃತ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದೇವೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಸಾಮಾಜಿಕ ನ್ಯಾಯದ ಪರಿಕಲ್ಪನೆಯಡಿ ಎಲ್ಲರಿಗೂ ಸಮಾನ ಅವಕಾಶ ಹಾಗೂ ನ್ಯಾಯ ದೊರೆಯಬೇಕು ಎಂಬುದು ನಮ್ಮ ಧ್ಯೇಯವಾಗಿದೆ. ಈ ಆಶಯವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಕೈಗೊಂಡ ಸುಧಾರಣೆಗಳು ಇಂದಿಗೂ ಸ್ಮರಣೀಯ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಸಿ.ಚಂದ್ರಶೇಖರ್ ಹೇಳಿದರು.ನಗರದ ವಕೀಲರ ಸಂಘದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಜಿಲ್ಲಾ ವಕೀಲರ ಸಂಘದಿಂದ ಆಯೋಜಿಸಿದ್ದ ‘ನವರಾತ್ರಿ ಸಂಭ್ರಮ-ರಾಜರ್ಷಿ ನಾಲ್ವಡಿಗೆ ನಮನ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಾಮಾಜಿಕ ನ್ಯಾಯ ಎಂಬುದು ಕೇವಲ ಪರಿಕಲ್ಪನೆಯಲ್ಲ, ಸಮಾಜದ ಪ್ರತಿಯೊಬ್ಬರಿಗೂ ಸಮಾನ ಅವಕಾಶಗಳು ದೊರೆಯುವಂತೆ ಮಾಡುವ ಮಹತ್ವದ ಆಶಯೆ. ಎಲ್ಲರಿಗೂ ನ್ಯಾಯ ದೊರೆಯಬೇಕು ಮತ್ತು ಸಮಾಜದ ಹಿಂದುಳಿದ ವರ್ಗಗಳಿಗೂ ಶಿಕ್ಷಣ, ಉದ್ಯೋಗ ಹಾಗೂ ಸಾಮಾಜಿಕವಾಗಿ ಮುನ್ನಡೆಯಲು ಅವಕಾಶ ಸಿಗಬೇಕು ಎಂಬ ಉದ್ದೇಶದಿಂದ ನಾವು ನ್ಯಾಯಾಂಗ ವೃತ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದೇವೆ ಎಂದರು.ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಜನಸಾಮಾನ್ಯರ ಏಳಿಗೆಗಾಗಿ ಹಲವು ಮಹತ್ವದ ಸುಧಾರಣೆಗಳನ್ನು ಜಾರಿಗೆ ತಂದಿದ್ದರು. ಹಿಂದುಳಿದ ವರ್ಗಗಳಿಗೆ ಆಡಳಿತದಲ್ಲಿ ಸೂಕ್ತ ಪ್ರಾತಿನಿಧ್ಯ ದೊರೆಯಬೇಕು ಎಂಬ ಉದ್ದೇಶದಿಂದ ಪ್ರಜಾಮಿತ್ರ ಮಂಡಳಿಯ ಸ್ಥಾಪನೆ ಹಾಗೂ ಮಿಲ್ಲರ್ ಸಮಿತಿಯ ಶಿಫಾರಸುಗಳ ಅನುಷ್ಠಾನವು ಸಾಮಾಜಿಕ ನ್ಯಾಯದ ಇತಿಹಾಸದಲ್ಲಿ ಮಹತ್ವದ ಸ್ಥಾನ ಪಡೆದಿವೆ. ವಿವಿಧ ಸಮುದಾಯಗಳಿಗೆ ಅವಕಾಶ ಕಲ್ಪಿಸುವ ವಿಚಾರದಲ್ಲಿ ಎದುರಾದ ವಿರೋಧಗಳ ನಡುವೆಯೂ ಮಹಾರಾಜರು ಸಾಮಾಜಿಕ ನ್ಯಾಯದ ಪರವಾಗಿ ನಿಂತಿದ್ದು, ಅವರ ದೂರದೃಷ್ಟಿಗೆ ಸಾಕ್ಷಿಯಾಗಿದೆ ಎಂದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಟಿ.ಎಸ್.ಸತ್ಯಾನಂದ ಮಾತನಾಡಿ, ಜಿಲ್ಲೆಯ ಅಭ್ಯುದಯವನ್ನು ಆಶಯವಾಗಿಟ್ಟುಕೊಂಡು ಅಭಿವೃದ್ಧಿಗೆ ಅಡಿಗಲ್ಲು ಹಾಕಿದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕೊಡುಗೆ ಅಪಾರ. ಅಂದಿನಿಂದ ಇಂದಿನವರೆಗೂ ಮಂಡ್ಯ ಜಿಲ್ಲೆ ಕರ್ನಾಟಕದಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನವನ್ನು ಉಳಿಸಿಕೊಂಡಿದೆ. ರಾಜಕೀಯ, ಸಾಮಾಜಿಕ, ಆರ್ಥಿಕ ಹಾಗೂ ಕಾನೂನು ಕ್ಷೇತ್ರಗಳಲ್ಲಿ ಅನೇಕ ಪ್ರಮುಖ ವ್ಯಕ್ತಿಗಳನ್ನು ನೀಡಿದ ಈ ಜಿಲ್ಲೆಯ ಬೆಳವಣಿಗೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಟಿ ಪ್ರಮುಖ ಕಾರಣವಾಗಿದೆ ಎಂದರು.ವಿಶ್ರಾಂತ ಪ್ರಾಧ್ಯಾಪಕ ಡಾ.ಮ.ರಾಮಕೃಷ್ಣ ಮಾತನಾಡಿ, ರಾಜರ್ಷಿ ಅವರು ಒಂದು ಶತಮಾನದ ಹಿಂದೆಯೇ ಕೈಗೊಂಡಿದ್ದ ಅಭಿವೃದ್ಧಿ ಕಾರ್ಯಗಳು, ದೂರದೃಷ್ಟಿ ಹಾಗೂ ನಾಡಿನ ಪ್ರಗತಿಗೆ ನೀಡಿದ ಕೊಡುಗೆಗಳನ್ನು ಇಂದಿನ ಪೀಳಿಗೆ ಅರಿತುಕೊಳ್ಳಬೇಕು. ನಮ್ಮ ಸುತ್ತಮುತ್ತಲಿರುವ ಐತಿಹಾಸಿಕ ಕಟ್ಟಡಗಳು ಮತ್ತು ಸ್ಮಾರಕಗಳನ್ನು ವೀಕ್ಷಿಸಿ ಅವುಗಳ ಮಹತ್ವವನ್ನು ತಿಳಿದುಕೊಳ್ಳಬೇಕು ಎಂದರು.
ಒಡೆಯರ್ ಅವರ ಸಾಧನೆಗಳನ್ನು ಸ್ಮರಿಸುವ ಕಾರ್ಯಕ್ರಮಗಳು ಅವರ ಕೊಡುಗೆಗಳನ್ನು ಜನರಿಗೆ ಪರಿಚಯಿಸುವುದರ ಜತೆಗೆ, ಐತಿಹಾಸಿಕ ಪರಂಪರೆಯನ್ನು ಸಂರಕ್ಷಿಸುವ ಜವಾಬ್ದಾರಿಯನ್ನೂ ನೆನಪಿಸಬೇಕು.ಯುವಜನರು ನಮ್ಮ ನಾಡಿನ ಇತಿಹಾಸವನ್ನು ತಿಳಿದುಕೊಂಡು ಅದರ ಬಗ್ಗೆ ಗೌರವ ಮತ್ತು ಅಭಿಮಾನ ಬೆಳೆಸಿಕೊಳ್ಳ ಬೇಕು ಎಂದರು.ಕಾರ್ಯಕ್ರಮದಲ್ಲಿ ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಸತೀಶ್ ಭಾಗವಹಿಸಿದ್ದರು.