ಕನ್ನಡ ನಾಡು ಹಲವು ಪ್ರಾಂತ್ಯಗಳಲ್ಲಿ ಹರಿದು ಹಂಚಿಹೋಗಿದ್ದಾಗ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೈಸೂರು ಸಂಸ್ಥಾನವನ್ನು ಆಳುತ್ತಿದ್ದ ಕಾಲದಲ್ಲಿ ಸರ್.ಎಂ.ವಿಶ್ವೇಶ್ವರಯ್ಯ ಅವರು ಸ್ಥಾಪಿಸಿದ್ದ ‘ಮೈಸೂರು ಸಂಪದಭ್ಯುದಯ ಸಮಾಜ’ವು ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಒಂದು ಸಂಸ್ಥೆಯ ಅಗತ್ಯವಿದೆ ಎಂದು ಅರಿತು 1915 ರ ಮೇ 5 ರಂದು ವಾರ್ಷಿಕ ಸಭೆಯಲ್ಲಿ ‘ಕರ್ನಾಟಕ ಸಾಹಿತ್ಯ ಪರಿಷತ್ತು’ ಉದಯವಾಯಿತು.
ಕನ್ನಡಪ್ರಭ ವಾರ್ತೆ, ಚಿಕ್ಕಬಳ್ಳಾಪುರ:
ಕನ್ನಡ ಭಾಷೆ, ಅಭಿವೃದ್ಧಿ ಮತ್ತು ಬೆಳವಣಿಗೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕೊಡುಗೆ ಅಪಾರ. ಕನ್ನಡ ಸಾಹಿತ್ಯ ಪರಿಷತ್ತು, ಮೈಸೂರು ವಿಶ್ವವಿದ್ಯಾನಿಲಯ, ಕೆಆರ್ ಎಸ್, ಭದ್ರಾವತಿ ಕಾಗದ ಕಾರ್ಖಾನೆ, ಮೈಸೂರು ಬ್ಯಾಂಕ್, ಮಂಡ್ಯದಲ್ಲಿ ಸಕ್ಕರೆ ಕಾರ್ಖಾನೆ ಹೀಗೆ ಹತ್ತು, ಹಲವಾರು ಸಾಮಾಜಿಕ, ಶೈಕ್ಷಣಿಕ ಹಾಗೂ ಕೈಗಾರಿಕಾ ಬೆಳವಣಿಗೆಗೆ ಕೊಡುಗೆ ನೀಡಿದ್ದಾರೆ ಎಂದು ಬೆಂಗಳೂರು ಉತ್ತರ ವಿವಿ ಕುಲಪತಿ ಪ್ರೊ.ಬಿ.ಕೆ. ರವಿ ಸ್ಮರಿಸಿದರು. ನಗರದ ಶಾಂತಿನಿಕೇತನ್ಸ್ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು, ಚಿಕ್ಕಬಳ್ಳಾಪುರ ಜಿಲ್ಲೆ ಹಾಗೂ ತಾಲೂಕು ಸಹಯೋಗದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ 112ನೇ ಸಂಸ್ಥಾಪನಾ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ವಯಸ್ಕರಿಗೆ ಶಿಕ್ಷಣ, ಮೀಸಲಾತಿ ಹೀಗೆ ಹಲವಾರು ಜನಪರ ಕಾರ್ಯಗಳ ಮೂಲಕ ಸಮಾಜದ ಅಭಿವೃದ್ಧಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಕಾರಣಕರ್ತರಾಗಿದ್ದಾರೆ ಎಂದರು.ಕನ್ನಡ ನಾಡು ಹಲವು ಪ್ರಾಂತ್ಯಗಳಲ್ಲಿ ಹರಿದು ಹಂಚಿಹೋಗಿದ್ದಾಗ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೈಸೂರು ಸಂಸ್ಥಾನವನ್ನು ಆಳುತ್ತಿದ್ದ ಕಾಲದಲ್ಲಿ ಸರ್.ಎಂ.ವಿಶ್ವೇಶ್ವರಯ್ಯ ಅವರು ಸ್ಥಾಪಿಸಿದ್ದ ‘ಮೈಸೂರು ಸಂಪದಭ್ಯುದಯ ಸಮಾಜ’ವು ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಒಂದು ಸಂಸ್ಥೆಯ ಅಗತ್ಯವಿದೆ ಎಂದು ಅರಿತು 1915 ರ ಮೇ 5 ರಂದು ಲ್ಲಿ ಬೆಂಗಳೂರಿನ ಸರ್ಕಾರಿ ಹೈಸ್ಕೂಲ್‍ನಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ ‘ಕರ್ನಾಟಕ ಸಾಹಿತ್ಯ ಪರಿಷತ್ತು’ ಉದಯವಾಯಿತು. ಕರ್ನಾಟಕ ಸಾಹಿತ್ಯ ಪರಿಷತ್ತು ರೂಪುಗೊಳ್ಳಲು ದಿವಾನರಾಗಿದ್ದ ಸರ್.ಎಂ. ವಿಶ್ವೇಶ್ವರಯ್ಯ, ಸರದಾರ್ ಎಂ.ಕಾಂತರಾಜೇ ಅರಸ್, ಎಚ್.ವಿ. ನಂಜುಂಡಯ್ಯ, ಎಂ. ಶ್ಯಾಮರಾವ್, ಎಂ.ಎಸ್. ಕುಟ್ಟಣ್ಣ, ಎಂ.ಕೆ. ವೆಂಕಟಕೃಷ್ಣಯ್ಯ, ಎಚ್. ಲಿಂಗರಾಜೇ ಅರಸ್, ಕರ್ಪೂರ ಶ್ರೀನಿವಾಸ ರಾವ್, ಬಿ. ಕೃಷ್ಣಪ್ಪ, ಕವಿ ತಿಲಕಶಾಸ್ತ್ರಿ, ಮುದವೀಡು ಕೃಷ್ಣರಾಯರು, ವಾಸುದೇವಾಚಾರ್, ಆಲೂರು ವೆಂಕಟರಾಯರು ಹೀಗೆ ಹಲವರು ಕಾರಣರಾಗಿದ್ದಾರೆ ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎಸ್. ಎಸ್. ಮಹೇಶ್ ಕುಮಾರ್, ಕಸಾಪ ಜಿಲ್ಲಾಧ್ಯಕ್ಷ ಡಾ. ಕೋಡಿರಂಗಪ್ಪ ಮಾತನಾಡಿದರು.ಈ ವೇಳೆ ಕನ್ನಡದಲ್ಲಿ ಅತಿಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಮತ್ತು ಪ್ರಬಂಧ ರಚನೆ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಚಿಕ್ಕಬಳ್ಳಾಪುರ ವಿವಿ ಶಿಕ್ಷಣ ಕಾಲೇಜಿನ ಡೀನ್ ಮತ್ತು ಪ್ರಾಂಶುಪಾಲ ಡಾ. ಜಿ. ಪಿ. ಬಾಹುಬಲಿ , ಡಿಡಿಪಿಐ ರಮೇಶ್, ಜಿಲ್ಲಾ ಕ.ಸಾ.ಪ. ಗೌರವ ಕೋಶಾಧ್ಯಕ್ಷ ಎಂ. ಚನ್ನಮಲ್ಲಿಕಾರ್ಜುನಯ್ಯ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಕಾಗತಿ ನಾಗರಾಜಪ್ಪ, ಶಿಡ್ಲಘಟ್ಟ ತಾಲೂಕು ಕ.ಸಾ.ಪ. ಅಧ್ಯಕ್ಷ ಪಟೇಲ್ ನಾರಾಯಣಸ್ವಾಮಿ, ಮಂಚನಬಲೆ ಶ್ರೀನಿವಾಸ್ ಮತ್ತಿತರರು ಭಾಗವಹಿಸಿದ್ದರು.