ರಸ್ತೆಯಲ್ಲಿ ನಮಾಜ್‌ ಘಟನೆ ಗಂಭೀರ ಪರಿಗಣಿಸಿ: ಸರ್ಕಾರಕ್ಕೆ ಸಂಸದ ನಳಿನ್‌ ಕುಮಾರ್‌

| Published : Jun 02 2024, 01:45 AM IST

ರಸ್ತೆಯಲ್ಲಿ ನಮಾಜ್‌ ಘಟನೆ ಗಂಭೀರ ಪರಿಗಣಿಸಿ: ಸರ್ಕಾರಕ್ಕೆ ಸಂಸದ ನಳಿನ್‌ ಕುಮಾರ್‌
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ ಗೂಂಡಾ ರಾಜಕಾರಣ ನಡೆಯುತ್ತಿದ್ದು, ಕೋಮುಭಾವನೆ ಕೆರಳಿಸುವ ಮೂಲಕ ಭಯೋತ್ಪಾದನೆ ಸೃಷ್ಟಿಗೆ ಯತ್ನ ನಡೆಯುತ್ತಿದೆ ಎಂದು ಸಂಸದ ನಳಿನ್‌ ಕುಮಾರ್‌ ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ರಸ್ತೆಯಲ್ಲಿ ನಮಾಜ್‌ನಂತಹ ಘಟನೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಇಲ್ಲದಿದ್ದರೆ ಮುಂದೆ ಸರ್ಕಾರ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾದೀತು ಎಂದು ದ.ಕ. ಸಂಸದ ನಳಿನ್‌ ಕುಮಾರ್‌ ಕಟೀಲ್‌ ಹೇಳಿದ್ದಾರೆ.

ಮಂಗಳೂರಿನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಸ್ತೆಯಲ್ಲಿ ನಮಾಜ್‌ ಮಾಡಿದವರ ಮೇಲೆ ಸ್ವಯಂ ದೂರು ದಾಖಲಿಸಿದ ಪೊಲೀಸರ ಮೇಲೆಯೇ ಶಿಸ್ತು ಕ್ರಮ ಕೈಗೊಳ್ಳಲಾಗುತ್ತಿದೆ. ಹಾಗಾದರೆ ಸ್ವಯಂ ಕೇಸು ದಾಖಲಿಸಿದ್ದು ಯಾಕೆ, ಮತ್ತೆ ವಾಪಸ್‌ ಪಡೆದಿರುವುದು ಯಾಕೆ ಎಂದು ಪ್ರಶ್ನಿಸಿದರು.

ಶರಣ್‌ ಕೇಸ್‌ ವಾಪಸ್‌ಗೆ ಆಗ್ರಹ: ರಸ್ತೆ ನಮಾಜ್‌ ವಿರುದ್ಧ ಹೇಳಿಕೆ ನೀಡಿದ ವಿಹಿಂಪ ಮುಖಂಡ ಶರಣ್‌ ಪಂಪ್‌ವೆಲ್‌ ಮೇಲೂ ಕೇಸು ದಾಖಲಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದಲ್ಲಿ ಇಂತಹ ಘಟನೆಗಳು ಆರಂಭದಿಂದಲೂ ನಡೆಯುತ್ತಿದ್ದು, ಶರಣ್‌ ಪಂಪ್‌ವೆಲ್‌ ವಿರುದ್ಧದ ಕೇಸನ್ನು ಕೂಡಲೇ ವಾಪಸ್‌ ಪಡೆಯಬೇಕು ಎಂದು ಸಂಸದ ನಳಿನ್‌ ಕುಮಾರ್‌ ಕಟೀಲ್ ಆಗ್ರಹಿಸಿದರು.

ರಾಜ್ಯದಲ್ಲಿ ಗೂಂಡಾ ರಾಜಕಾರಣ ನಡೆಯುತ್ತಿದ್ದು, ಕೋಮುಭಾವನೆ ಕೆರಳಿಸುವ ಮೂಲಕ ಭಯೋತ್ಪಾದನೆ ಸೃಷ್ಟಿಗೆ ಯತ್ನ ನಡೆಯುತ್ತಿದೆ ಎಂದು ಸಂಸದ ನಳಿನ್‌ ಕುಮಾರ್‌ ಆರೋಪಿಸಿದರು.

ಬಂಡಾಯ ಸಾಮಾನ್ಯ: ಚುನಾವಣೆಯಿಂದ ಚುನಾವಣೆಗೆ ಬಂಡಾಯ ಸಾಮಾನ್ಯ. ಜನತೆ ಬಂಡಾಯಕ್ಕೆ ಹೆಚ್ಚು ಒತ್ತು ನೀಡುವುದಿಲ್ಲ. ಬಿಜೆಪಿಗೆ ಬೆಂಬಲ ನೀಡುತ್ತಾರೆ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲ್‌ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ನೈಋತ್ಯ ಪದವೀಧರ ಕ್ಷೇತ್ರದಲ್ಲಿ ಮಾಜಿ ಶಾಸಕ ರಘುಪತಿ ಭಟ್‌ ಬಂಡಾಯ ಸ್ಪರ್ಧೆ ಕುರಿತಂತೆ ಉತ್ತರಿಸಿದ ನಳಿನ್‌ ಕುಮಾರ್‌, ಬಿಜೆಪಿ ಅಭ್ಯರ್ಥಿ ಡಾ.ಧನಂಜಯ ಸರ್ಜಿ ಅವರು ನಿರಂತರ ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸಿದ್ದವರು. ಪಕ್ಷ ನಾಯಕರು ಎಲ್ಲ ಯೋಚನೆ ಮಾಡಿಯೇ ಡಾ.ಸರ್ಜಿ ಅವರನ್ನು ಕಣಕ್ಕೆ ಇಳಿಸಿದ್ದಾರೆ ಎಂದರು.

ಶಾಸಕರಾದ ಡಾ.ಭರತ್‌ ಶೆಟ್ಟಿ, ಹರೀಶ್‌ ಪೂಂಜಾ, ವಿಧಾನ ಪರಿಷತ್‌ ಸದಸ್ಯ ಪ್ರತಾಪ್‌ಸಿಂಹ ನಾಯಕ್‌, ಮಾಜಿ ಸದಸ್ಯ ಕ್ಯಾ.ಗಣೇಶ್‌ ಕಾರ್ಣಿಕ್‌, ಮೇಯರ್‌ ಸುಧೀರ್‌ ಶೆಟ್ಟಿ ಕಣ್ಣೂರು, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್‌ ಕುಂಪಲ, ಮುಖಂಡರಾದ ಹರಿಕೃಷ್ಣ ಬಂಟ್ವಾಳ್, ಸತೀಶ್‌ ಆರ್ವಾರ್‌, ವಿಕಾಸ್‌ ಪಿ., ಮಂಜುಳಾ ರಾವ್‌, ಪೂಜಾ ಪೈ ಇದ್ದರು.