ಭೋವಿ ಜನಾಂಗದ ಅಭಿವೃದ್ಧಿಗೆ ಶ್ರಮಿಶಬೇಕಿದೆ

| Published : Feb 09 2024, 01:48 AM IST

ಭೋವಿ ಜನಾಂಗದ ಅಭಿವೃದ್ಧಿಗೆ ಶ್ರಮಿಶಬೇಕಿದೆ
Share this Article
  • FB
  • TW
  • Linkdin
  • Email

ಸಾರಾಂಶ

ಸಿದ್ದರಾಮೇಶ್ವರರು ತಮ್ಮ ವಚನಗಳ ಮೂಲಕ ಸಮಾಜದಲ್ಲಿನ ಅಂಕು-ಡೊಂಕುಗಳನ್ನು ತಿದ್ದುವ ಕಾರ್ಯ ಮಾಡಿದ್ದಾರೆ. ಹೀಗಾಗಿಯೇ ಶ್ರೀಗಳ ವಚನಗಳು ಇಂದಿಗೂ ಪ್ರಸ್ತುತವಾಗಿವೆ

- ಇಮ್ಮಡಿ ಸಿದ್ದರಾಮೇಶ್ವರಸ್ವಾಮಿ ಸಲಹೆ

- ಸರಗೂರಿನಲ್ಲಿ ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ಸ್ವಾಮಿಯ 852ನೇ ಜಯಂತ್ಯುತ್ಸವ

--------

ಕನ್ನಡಪ್ರಭ ವಾರ್ತೆ ಸರಗೂರು

ನಾವೆಲ್ಲರೂ ಸಂಘಟಿತರಾಗುವ ಮೂಲಕ ಆರ್ಥಿಕವಾಗಿ ಹಿಂದುಳಿದಿರುವ ಭೋವಿ ಜನಾಂಗದ ಅಭಿವೃದ್ಧಿಗೆ ಶ್ರಮಿಶಬೇಕಿದೆ ಎಂದು ಚಿತ್ರದುರ್ಗ, ಬಾಗಲಕೋಟೆ ಮಹಾ ಸಂಸ್ಥಾನ ಭೋವಿ ಗುರುಪೀಠ ಇಮ್ಮಡಿ ಸಿದ್ದರಾಮೇಶ್ವರಸ್ವಾಮಿ ಸಲಹೆ ನೀಡಿದರು.

ಪಟ್ಟಣದ ನಾಮಧಾರಿಗೌಡ ಸಮುದಾಯ ಭವನದಲ್ಲಿ ಶಿವಯೋಗಿ ಸಿದ್ಧರಾಮೇಶ್ವರ ಭೋವಿ ಸಮಾಜ ಸೇವೆ ಸಮಿತಿ ವತಿಯಿಂದ ನಡೆದ ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ಸ್ವಾಮಿಯ 852ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ಸ್ವಾಮಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು.

ಸಿದ್ದರಾಮೇಶ್ವರರು ತಮ್ಮ ವಚನಗಳ ಮೂಲಕ ಸಮಾಜದಲ್ಲಿನ ಅಂಕು-ಡೊಂಕುಗಳನ್ನು ತಿದ್ದುವ ಕಾರ್ಯ ಮಾಡಿದ್ದಾರೆ. ಹೀಗಾಗಿಯೇ ಶ್ರೀಗಳ ವಚನಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಅವರು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕರು, ಜಂಗಲ್ ಲಾಡ್ಜ್ ಹಾಗೂ ರೆಸಾರ್ಟ್ ನಿಗಮದ ಅಧ್ಯಕ್ಷ ಅನಿಲ್ ಚಿಕ್ಕಮಾದು ಮಾತನಾಡಿ, ನದಿ, ಕೆರೆ ಕಟ್ಟೆಗಳನ್ನು ನಿರ್ಮಿಸಿ ಶ್ರಮಿಕ ವರ್ಗದ ಆರಾಧ್ಯ ದೈವರಾಗಿ ಗುರುತಿಸಿಕೊಂಡಿರುವ ಶಿವಯೋಗಿ ಸಿದ್ಧರಾಮೇಶ್ವರರು ವಚನದ ಮೂಲಕ ನಾಡಿಗೆ ನೀಡಿದ ಸಂದೇಶ ಅನುಕರಣೀಯವಾದದ್ದು, ಸಮಾಜದ ಒಳಿತಿಗಾಗಿ ಬದುಕಿದ ನಿಜವಾದ ಕಾಯಕತತ್ವ ಅಳವಡಿಸಿಕೊಂಡಿದ್ದರು. ಜಾತಿ, ಮತ, ಪಂಥಗಳೆನ್ನದೆ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿಯನ್ನು ಎಲ್ಲರೂ ಆಚರಿಸಬೇಕು. ಎಲ್ಲರೂ ಶ್ರೀಗಳ ಆದರ್ಶ ಅವಳಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಬಿಡುಗಲು ಪಡುವಲು ವಿರಕ್ತ ಮಠದ ಮಹದೇವಸ್ವಾಮೀಜಿ, ದಡದಹಳ್ಳಿ ಮಠದ ಡಾ. ಷಡಕ್ಷರಿ ಸ್ವಾಮೀಜಿ, ಭೋವಿ ನಿಗಮದ ಮಾಜಿ ಅಧ್ಯಕ್ಷ ಜಿ.ವಿ. ಸೀತಾರಾಂ ಮಾತನಾಡಿದರು.

ಜಿಪಂ ಮಾಜಿ ಸದಸ್ಯರಾದ ಎಂ.ಪಿ. ನಾಗರಾಜು, ಚಿಕ್ಕವೀರನಾಯಕ, ಪಪಂ ಸದಸ್ಯೆ ಹೇಮಾವತಿ ರಮೇಶ್, ಶಿವಯೋಗಿ ಸಿದ್ದರಾಮೇಶ್ವರ ಭೋವಿ ಸಮಾಜ ಸೇವೆ ಸಮಿತಿ ಅಧ್ಯಕ್ಷ, ಪುರಸಭೆ ಸದಸ್ಯ ವೆಂಕಟೇಶ್, ಗೌರವಾಧ್ಯಕ್ಷ ಕೆ. ರಾಜು, ಪಪಂ ಮಾಜಿ ಸದಸ್ಯರಾದ ರಮೇಶ್, ನಾಗೇಂದ್ರ, ಮಧುಸೂದನ್, ವೆಂಕಟರಾಮು, ರಾಘವೇಂದ್ರ, ಆದಿಕರ್ನಾಟಕ ಮಹಾಸಭಾ ಅಧ್ಯಕ್ಷ ಎಚ್.ಸಿ. ನರಸಿಂಹಮೂರ್ತಿ, ನಂದಿನಾಥಪುರ ಬಸಪ್ಪ, ಶೇಖರ್, ಸುರೇಂದ್ರ, ಬಿಳಿಯಪ್ಪ, ಮಹಾದೇವ, ಪುಟ್ಟಭೋವಿ, ಚಿಕ್ಕಬರಗಿ ನಾಗರಾಜು, ಜಯಲಕ್ಷ್ಮೀಪುರ ವೆಂಕಟರಾಮು, ನಾಗರಾಜು ವಡ್ಡರಗುಡಿ ಇದ್ದರು.

ಇದಕ್ಕೂ ಮುನ್ನ ಸಿದ್ದರಾಮೇಶ್ವರರ ಜಯಂತಿ ಅಂಗವಾಗಿ ಪಟ್ಟಣದ ಸಂತೆಮಾಳ ಸಂತೆ ಮಾಸ್ತಮ್ಮ ದೇವಸ್ಥಾನದಿಂದ ಬೆಳ್ಳಿ ರಥದಲ್ಲಿ ಸಿದ್ದರಾಮೇಶ್ವರ ಭಾವಚಿತ್ರ ಇರಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು. ಒಂದನೇ ಮುಖ್ಯರಸ್ತೆ ಹಾಗೂ ಮಹಾವೀರ ಸರ್ಕಲ್, ಬಸ್ ನಿಲ್ದಾಣದ ಮುಂಭಾಗದ ಮೂಲಕ ಕೆಇಬಿ ಕಚೇರಿ ಅದೇ ಮಾರ್ಗವಾಗಿ ನಾಮಧಾರಿಗೌಡ ಸಮುದಾಯ ಭವನದಲ್ಲಿ ಕೊನೆಗೊಂಡಿತು.