ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ನೆಪದಲ್ಲಿ (ಎಸ್ಐಆರ್) ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದ ಮತದಾನದ ಹಕ್ಕು ಕಸಿಯುತ್ತಿರುವುದು ಸರ್ವಾಧಿಕಾರಿ ಧೋರಣೆ. ಇದರ ವಿರುದ್ಧ ನಾವು ಹೋರಾಟ ಮಾಡಿಯೇ ತೀರುತ್ತೇವೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು/ ಮೈಸೂರು

ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ನೆಪದಲ್ಲಿ (ಎಸ್ಐಆರ್) ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದ ಮತದಾನದ ಹಕ್ಕು ಕಸಿಯುತ್ತಿರುವುದು ಸರ್ವಾಧಿಕಾರಿ ಧೋರಣೆ. ಇದರ ವಿರುದ್ಧ ನಾವು ಹೋರಾಟ ಮಾಡಿಯೇ ತೀರುತ್ತೇವೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ಕಾಂಗ್ರೆಸ್ ಪಕ್ಷ ಈ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದೆ. ದೇಶದ ಪ್ರತಿಯೊಬ್ಬ ಪ್ರಜೆಗೆ ಸಂವಿಧಾನ ನೀಡಿರುವ ಮತದಾನದ ಹಕ್ಕು ರಕ್ಷಿಸುವುದು ನಮ್ಮ ಕರ್ತವ್ಯ. ಆ ಕೆಲಸ ನಾವು ಮಾಡುತ್ತೇವೆ. ಕರ್ನಾಟಕದಲ್ಲಿ ಕೋಟ್ಯಂತರ ಮತದಾರರ ಹೆಸರು ಡಿಲೀಟ್ ಮಾಡಲಾಗಿದೆ. ನಾನು ಒಬ್ಬ ಮುಖ್ಯಮಂತ್ರಿಯಾಗಿ ರಾಜ್ಯದ ಜನರ ಮತದಾನದ ಹಕ್ಕನ್ನು ರಕ್ಷಣೆ ಮಾಡುವುದು ನನ್ನ ಕರ್ತವ್ಯ. ಅದನ್ನು ಮಾಡುತ್ತೇನೆ ಎಂದರು.

ಪ್ರಜಾಪ್ರಭುತ್ವದ ಮೇಲೆ ಕೇಂದ್ರದ ದಾಳಿ:

ದೇಶದಲ್ಲಿ ಪ್ರಜಾಪ್ರಭುತ್ವವಿದೆಯೇ ಅಥವಾ ತುರ್ತು ಪರಿಸ್ಥಿತಿಯಿದೆಯೇ ಎಂಬುದಕ್ಕೆ ಪ್ರಧಾನಿ ಅವರು ರಾಷ್ಟ್ರದ ಜನತೆಗೆ ಉತ್ತರಿಸಬೇಕು. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಪ್ರತಿಭಟಿಸುವ ಅವಕಾಶವಿದೆ. ಅದನ್ನು ಹತ್ತಿಕ್ಕಲು ಸಾಧ್ಯವಿಲ್ಲ. ಸರ್ಕಾರದ ವಿರುದ್ಧ ಧನಿ ಎತ್ತುವವರನ್ನು ಏಕಾಏಕಿ ವಿಮಾನದಲ್ಲೇ ಬಂಧಿಸುವುದು ಮತ್ತು ಪ್ರತಿನಿಧಿಗಳನ್ನು ವಶಕ್ಕೆ ಪಡೆಯುವುದು ಇಡೀ ದೇಶಕ್ಕೇ ಮಾಡುತ್ತಿರುವ ದೊಡ್ಡ ಅವಮಾನ. ವಿಶ್ವದಲ್ಲಿ ಭಾರತ ಎಂದರೆ ಪ್ರಜಾಪ್ರಭುತ್ವ ಎಂದು ಹೆಸರಾಗಿದೆ. ಈ ಹೆಸರಿಗೆ ಕೇಂದ್ರ ಸರ್ಕಾರ ಕಳಂಕ ತರುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಕೇಂದ್ರ ಸರ್ಕಾರ ದೇಶದ ಜನರ ಧ್ವನಿಗೆ ಮನ್ನಣೆ ಕೊಡಬೇಕು. ಅವರ ಅಭಿಪ್ರಾಯ ಆಲಿಸಬೇಕು. ಚುನಾವಣಾ ಆಯೋಗವನ್ನು ಭೇಟಿ ಮಾಡಲು ಅವಕಾಶ ಕೊಡಬೇಕು. ಸರ್ಕಾರದ ಕಾರ್ಯವೈಖರಿ ಬಗ್ಗೆ ಟೀಕೆಗಳನ್ನು ಕೇಳಬೇಕು. ಅದನ್ನು ಬಿಟ್ಟು ಟೀಕಿಸುವವರನ್ನು ಬಂಧಿಸುವುದು ಸರಿಯಲ್ಲ ಎಂದರು.ಪ್ರಜಾಪ್ರಭುತ್ವ ಉಳಿವಿಗೆ ಹೋರಾಟ: ಇನ್ನು ಮೈಸೂರಿನಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ಪ್ರಜಾಪ್ರಭುತ್ವದ ಮೂಲ ಭಾರತ. ಪ್ರಜಾಪ್ರಭುತ್ವಕ್ಕೆ 4 ಸ್ತಂಭಗಳು, ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹಾಗೂ ಪತ್ರಿಕೆ- ಮಾಧ್ಯಮ. ಈ ಆಧಾರ ಸ್ತಂಭಗಳನ್ನು ಉಳಿಸಲು ನಾವು ಹೋರಾಟ ಮಾಡುತ್ತಿದ್ದೇವೆ ಎಂದು ತಿಳಿಸಿದರು.ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೆ ರಾಜರಿದ್ದರು, ಈಗ ನಾವು ಜನರ ಪ್ರತಿನಿಧಿಗಳಾಗಿದ್ದೇವೆ. ಈಗಾಗಲೇ 150ಕ್ಕೂ ಹೆಚ್ಚು ನಿವೃತ್ತ ಐಎಎಸ್ ಅಧಿಕಾರಿಗಳು ನಮ್ಮ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ. ಮೊನ್ನೆಯಿಂದಲೇ ದೆಹಲಿಗೆ ಯಾರೂ ಕೂಡ ಕಾಲಿಡಬಾರದು ಎಂದು ಎಲ್ಲಾ ರೀತಿಯಿಂದಲೂ ನಿರ್ಬಂಧ ಹೇರಲಾಗಿದೆ. ಇಂಟರ್ ನೆಟ್ ಸಂಪರ್ಕ ಕಡಿತಗೊಳಿಸಲಾಗಿದೆ. ಇದು ಸರಿಯಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.ಹೀಗಾಗಿ, ಸೋಮವಾರದಂದು ನಮ್ಮ ಪಕ್ಷದ ಎಲ್ಲಾ ಹಿರಿಯ ನಾಯಕರು, ಸಂಸತ್ ಸದಸ್ಯರು, ಸಚಿವರು, ಶಾಸಕರು ಎಲ್ಲರೂ ಸೇರಿ ಹೋರಾಟ ಹಮ್ಮಿಕೊಡಿದ್ದೇವೆ. ಅದರಲ್ಲಿ ನಾನೂ ಕೂಡ ಪಾಲ್ಗೊಳ್ಳಲಿದ್ದೇನೆ ಎಂದರು.ಕೊಪ್ಪಳದ ಗವಿಮಠದ ಶ್ರೀಗಳು ಹೇಳಿದಂತೆ ಎಲ್ಲಾ ಪವರ್‌ಗಳಿಗಿಂತ ನಮ್ಮ ಈ ಚಾಮುಂಡಿ ತಾಯಿಯ ಪವರ್ ಬಹಳ ಶಕ್ತಿಶಾಲಿಯಾಗಿದೆ. ಆಕೆ ನಮ್ಮನ್ನು ಕಾಪಾಡುತ್ತಾಳೆ. ನಾವು ಪವಿತ್ರವಾದ ಸ್ಥಳದಲ್ಲಿ ನಿಂತಿದ್ದೇವೆ ಎಂದು ಹೇಳಿದರು. ಹೊಟೇಲ್ ಒಂದರಲ್ಲಿ ಸ್ಟಿಂಗ್ ಆಪರೇಷನ್ ನಡೆಸಿದ ವ್ಯಕ್ತಿ ಹೆಸರನ್ನು ಸಿಎಂ ಬಹಿರಂಗ ಪಡಿಸಲಿ ಎಂಬ ಎಚ್.ಡಿ. ಕುಮಾರಸ್ವಾಮಿ ಸವಾಲಿನ ಬಗ್ಗೆ ಕೇಳಿದಾಗ, ಅದಕ್ಕೆಲ್ಲಾ ಕಾಲವೇ ಉತ್ತರ ನೀಡುತ್ತದೆ ಎಂದರು.