ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಅಂಬೇಡ್ಕರ್ ಹೆಸರಿಡಿ

| Published : Jun 12 2024, 12:36 AM IST

ಸಾರಾಂಶ

ದಾವಣಗೆರೆ ನಗರದ ನೂತನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಡಾ. ಬಿ.ಆರ್. ಅಂಬೇಡ್ಕರ್ ಅವರ ಹೆಸರಿಡಲು ಆಗ್ರಹಿಸಿ ಸರ್ಕಾರಿ ಬಸ್ ನಿಲ್ದಾಣದ ಎದುರು ಬಸ್‌ಗಳನ್ನು ತಡೆದು ಭೀಮ್ ಆರ್ಮಿ ಕರ್ನಾಟಕ ಏಕತಾ ಮಿಷನ್ ವತಿಯಿಂದ ಪ್ರತಿಭಟನೆಯನ್ನು ನಡೆಸಲಾಯಿತು.

- ಬಸ್‌ಗಳ ತಡೆದು ಭೀಮ್ ಆರ್ಮಿ ಕರ್ನಾಟಕ ಏಕತಾ ಮಿಷನ್ ಪ್ರತಿಭಟನೆಯಲ್ಲಿ ಆಗ್ರಹ- - -

- ಪ್ರತಿಭಟನೆ ವೇಳೆ ಉಪಾಧ್ಯಕ್ಷ ಮೈಲಾರಪ್ಪ ಅಸ್ವಸ್ಥ । ಆಂಬ್ಯುಲೆನ್ಸ್‌ನಲ್ಲಿ ಜಿಲ್ಲಾಸ್ಪತ್ರೆಗೆ ದಾಖಲು

- ಪೊಲೀಸ್‌ ಅಧಿಕಾರಿಯೊಬ್ಬರ ವಿರುದ್ಧ ನಿಂದನೆ ಆರೋಪಕ್ಕೆ ಕ್ಷಮೆ ಕೋರಿದ ಇನ್‌ಸ್ಪೆಕ್ಟರ್‌ ಸುನೀಲ್ ಕುಮಾರ್- - -

ಕನ್ನಡಪ್ರಭ ವಾರ್ತೆ, ದಾವಣಗೆರೆ

ನಗರದ ನೂತನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಡಾ. ಬಿ.ಆರ್. ಅಂಬೇಡ್ಕರ್ ಅವರ ಹೆಸರಿಡಲು ಆಗ್ರಹಿಸಿ ಸರ್ಕಾರಿ ಬಸ್ ನಿಲ್ದಾಣದ ಎದುರು ಬಸ್‌ಗಳನ್ನು ತಡೆದು ಭೀಮ್ ಆರ್ಮಿ ಕರ್ನಾಟಕ ಏಕತಾ ಮಿಷನ್ ವತಿಯಿಂದ ಪ್ರತಿಭಟನೆಯನ್ನು ನಡೆಸಲಾಯಿತು.

ಈ ಸಂದರ್ಭ ಸಂಘಟನೆಯ ಉಪಾಧ್ಯಕ್ಷ ಮೈಲಾರಪ್ಪ ಎಂಬ ವ್ಯಕ್ತಿ ಅಸ್ವಸ್ಥಗೊಂಡ ಕಾರಣ ಆಂಬ್ಯುಲೆನ್ಸ್ ಮೂಲಕ ನಗರದ ಜಿಲ್ಲಾಸ್ಪತ್ರೆಗೆ ರವಾನಿಸಲಾಯಿತು. ಬೆಂಗಳೂರು ಕಡೆಯಿಂದ ಬರುವಂತ ಬಸ್‌ಗಳನ್ನು ಸುಮಾರು ಅರ್ಧ ಗಂಟೆ ತಡೆದು ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು, ಡಾ. ಬಿ.ಆರ್.ಅಂಬೇಡ್ಕರ್ ಅವರ ಹೆಸರನ್ನು ನೂತನ ಸರ್ಕಾರಿ ಬಸ್ ನಿಲ್ದಾಣಕ್ಕೆ ಇಡಬೇಕು ಮತ್ತು ಬಸ್ ನಿಲ್ದಾಣದ ಕಟ್ಟಡಕ್ಕೆ ಅಂಬೇಡ್ಕರ್ ಭಾವಚಿತ್ರವನ್ನು ಅಂಟಿಸಬೇಕು ಎಂದು ಆಗ್ರಹಿಸಿದರು.

ಸ್ಥಳಕ್ಕೆ ಜಿಲ್ಲಾಧಿಕಾರಿ ಅಥವಾ ಉಪವಿಭಾಗಾಧಿಕಾರಿ ಅವರು ಬಂದು ಮನವಿ ಸ್ವೀಕರಿಸಬೇಕು ಎಂದು ಪಟ್ಟು ಹಿಡಿದು ಪ್ರತಿಭಟನೆ ಮುಂದುವರೆಸಿದರು. ಅನಂತರ ಸ್ಥಳಕ್ಕೆ ಬಂದ ಕೆ.ಟಿ.ಜೆ. ನಗರ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಸುನೀಲ್ ಕುಮಾರ್ ಅವರಿಗೆ ಮನವಿ ಸಲ್ಲಿಸುವ ಮೂಲಕ ಪ್ರತಿಭಟನೆ ಹಿಂಪಡೆದು ಬಸ್‌ಗಳು ಸಂಚರಿಸಲು ಅನುವು ಮಾಡಿಕೊಟ್ಟರು.

ಈ ಸಂದರ್ಭ ಸಂಘಟನೆ ಜಿಲ್ಲಾಧ್ಯಕ್ಷ ನಿಂಗಪ್ಪ ಬನ್ನಿಹಟ್ಟಿ ಮಾತನಾಡಿ, ಸಂವಿಧಾನಶಿಲ್ಪಿ ಡಾ. ಅಂಬೇಡ್ಕರ್ ಅವರ ಏಕಾಕೃತಿಯ ಭಾವಚಿತ್ರವನ್ನು ಬಸ್ ನಿಲ್ದಾಣಕ್ಕೆ ಅಂಟಿಸಬೇಕು. ಜೊತೆಗೆ ಅಂಬೇಡ್ಕರ್ ಹೆಸರನ್ನು ಬಸ್ ನಿಲ್ದಾಣಕ್ಕೆ ನಾಮಕರಣ ಮಾಡಬೇಕು ಎಂದು ಒತ್ತಾಯಿಸಿದರು.

ಪೊಲೀಸ್ ಅಧಿಕಾರಿಯೊಬ್ಬರು ಪ್ರತಿಭಟನಾನಿರತರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಅವಮಾನಿಸಿದ್ದಾರೆ. ಅಸ್ವಸ್ಥಗೊಂಡ ಪ್ರತಿಭಟನಾಕಾರನನ್ನು ಎಳೆದಾಡಿ, ಆಂಬ್ಯುಲೆನ್ಸ್ ಮೂಲಕ ರವಾನಿಸಲಾಗಿದೆ ಎಂದು ಪೊಲೀಸ್ ಇನ್‌ಸ್ಪೆಕ್ಟರ್ ಸುನೀಲ್ ಕುಮಾರ್ ಅವರ ಬಳಿ ಜಿಲ್ಲಾಧ್ಯಕ್ಷ ನಿಂಗಪ್ಪ ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಇನ್‌ಸ್ಪೆಕ್ಟರ್‌ ಸುನೀಲ್ ಕುಮಾರ್ ಅವರ ತಪ್ಪಿಗೆ ನಾನು ಕ್ಷಮೆ ಕೇಳುತ್ತೇನೆ ಎಂದು ಅಸಮಾಧಾನ ಶಮನಗೊಳಿಸಿದರು.

ಪ್ರತಿಭಟನೆಯಲ್ಲಿ ಸಂಘಟನೆ ಜಿಲ್ಲಾ ಉಪಾಧ್ಯಕ್ಷ ಚಿಕ್ಕನಹಳ್ಳಿ ನಿಂಗರಾಜು, ದುಶ್ಯಂತ್, ತಾಲೂಕು ಅಧ್ಯಕ್ಷ ಅಣ್ಣಪ್ಪ, ತಾಲೂಕು ಉಪಾಧ್ಯಕ್ಷ ಶಿವರಾಜ, ಪ್ರಶಾಂತ, ತಾಲೂಕು ಸಂಚಾಲಕ ಹಾಲೇಶ ಹೂವಿನಮಡು ಇತರರು ಇದ್ದರು.

- - - -11ಕೆಡಿವಿಜಿ32ಃ:

ದಾವಣಗೆರೆಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಡಾ. ಬಿ.ಆರ್. ಅಂಬೇಡ್ಕರ್ ಹೆಸರಿಡುವಂತೆ ಭೀಮ್ ಆರ್ಮಿ ಕರ್ನಾಟಕ ಏಕತಾ ಮಿಷನ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಜಿಲ್ಲಾಧ್ಯಕ್ಷ ನಿಂಗಪ್ಪ ಬನ್ನಿಹಟ್ಟಿ, ಉಪಾಧ್ಯಕ್ಷ ಚಿಕ್ಕನಹಳ್ಳಿ ನಿಂಗರಾಜು, ದುಶ್ಯಂತ್, ತಾಲೂಕು ಅಧ್ಯಕ್ಷ ಅಣ್ಣಪ್ಪ ಇತರರು ಇದ್ದರು.