ಸಾರಾಂಶ
ಶಿವಮೊಗ್ಗದ ವಿಮಾನ ನಿಲ್ದಾಣ ಲೋಕಾರ್ಪಣೆಗೊಂಡು ಎರಡು ವರ್ಷಗಳಾದರೂ ನಿಲ್ದಾಣಕ್ಕೆ ಯಾವ ಹೆಸರನ್ನೂ ನಾಮಕರಣ ಮಾಡಿಲ್ಲ. ಆದ್ದರಿಂದ ಈ ಹಿಂದೆ ತೀರ್ಮಾನವಾಗಿರುವಂತೆ ರಾಷ್ಟ್ರಕವಿ ಕುವೆಂಪು ಅವರ ಹೆಸರನ್ನೇ ಇಡಬೇಕು ಎಂದು ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್‌ನ ವ್ಯವಸ್ಥಾಪಕ ಟ್ರಸ್ಟಿ ಕಲ್ಲೂರು ಮೇಘರಾಜ್ ಒತ್ತಾಯಿಸಿದರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಶಿವಮೊಗ್ಗದ ವಿಮಾನ ನಿಲ್ದಾಣ ಲೋಕಾರ್ಪಣೆಗೊಂಡು ಎರಡು ವರ್ಷಗಳಾದರೂ ನಿಲ್ದಾಣಕ್ಕೆ ಯಾವ ಹೆಸರನ್ನೂ ನಾಮಕರಣ ಮಾಡಿಲ್ಲ. ಆದ್ದರಿಂದ ಈ ಹಿಂದೆ ತೀರ್ಮಾನವಾಗಿರುವಂತೆ ರಾಷ್ಟ್ರಕವಿ ಕುವೆಂಪು ಅವರ ಹೆಸರನ್ನೇ ಇಡಬೇಕು ಎಂದು ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್‌ನ ವ್ಯವಸ್ಥಾಪಕ ಟ್ರಸ್ಟಿ ಕಲ್ಲೂರು ಮೇಘರಾಜ್ ಒತ್ತಾಯಿಸಿದರು.ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಈ ಹಿಂದೆ ಈ ವಿಮಾನ ನಿಲ್ದಾಣಕ್ಕೆ ಬಿ.ಎಸ್. ಯಡಿಯೂರಪ್ಪನವರ ಹೆಸರಿಡಬೇಕು ಎಂಬ ಕೂಗು ಕೇಳಿಬಂದಿತ್ತು. ಆಗ ಯಡಿಯೂರಪ್ಪನವರೇ ನನ್ನ ಹೆಸರು ಬೇಡ, ಕುವೆಂಪು ಅವರ ಹೆಸರನ್ನು ಇಡಿ ಎಂದು ಸೂಚನೆ ಕೊಟ್ಟಿದ್ದರು. ರಾಜ್ಯ ಸರ್ಕಾರ ಕೂಡ ಕುವೆಂಪು ಅವರ ಹೆಸರಿಡುವಂತೆ ಕೇಂದ್ರಕ್ಕೆ ಪ್ರಸ್ತಾವನೆ ಕೂಡ ಸಲ್ಲಿಸಿತ್ತು. ಆದರೂ ಇದುವರೆಗೂ ಯಾವ ಹೆಸರೂ ಇಲ್ಲದೇ ಶಿವಮೊಗ್ಗ ವಿಮಾನ ನಿಲ್ದಾಣ ಎಂದೇ ಇದೆ ಎಂದರು.
ಕುವೆಂಪು ಅವರ ಹೆಸರನ್ನು ಇಡುವುದು ಬಹಳ ಸೂಕ್ತವಾಗಿದೆ. ಅವರು ರಾಷ್ಟ್ರಕವಿಯಾಗಿದ್ದಾರೆ. ಪದ್ಮವಿಭೂಷಣ, ಪದ್ಮಭೂಷಣ ಪ್ರಶಸ್ತಿ ಕೂಡ ಸಿಕ್ಕಿದೆ. ಇಂಥವರ ಹೆಸರನ್ನು ಇಡುವುದು ಅತ್ಯಂತ ಸೂಕ್ತವಾಗಿದೆ. ಆದರೆ, ಕೇಂದ್ರ ಸರ್ಕಾರ ಈ ಬಗ್ಗೆ ಆಸಕ್ತಿಯನ್ನೇ ವಹಿಸಿಲ್ಲ ಎಂದು ದೂರಿದರು.ಕೇಂದ್ರ ಸರ್ಕಾರಕ್ಕೆ ಕುವೆಂಪು ಅವರ ಹೆಸರಿಡಲು ಅಪಥ್ಯ ಎನಿಸಿದರೆ ಸಂಘ ಪರಿವಾರದ ಮುಖಂಡರಾದ ಮೋಹನ್ ಭಾಗವತ್, ಸಾವರ್ಕರ್, ದತ್ತಾತ್ರೇಯ ಹೊಸಬಾಳೆ ಅವರ ಹೆಸರುಗಳನ್ನಾದರೂ ಇಡಲಿ ಎಂದು ವ್ಯಂಗ್ಯವಾಡಿದರು.
ಗೋಷ್ಠಿಯಲ್ಲಿ ಟ್ರಸ್ಟ್ ನ ಪ್ರಮುಖರಾದ ಜನಮೇಜಿರಾವ್, ವೇದಾಂತಗೌಡರು, ನಾಗರತ್ನಮ್ಮ, ಕೋಡ್ಲು ಶ್ರೀಧರ್, ಶಂಕ್ರಾನಾಯ್ಕ, ಬಾಬು ಇದ್ದರು.