ಮಂಡ್ಯದಲ್ಲಿ ನಡೆದ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಉಳಿಕೆ ಹಣ ೨.೫೦ ಕೋಟಿ ರು. ಮತ್ತು ಶಾಸಕರಾದ ಪಿ.ರವಿಕುಮಾರ್, ದರ್ಶನ್ ಪುಟ್ಟಣ್ಣಯ್ಯ ಮತ್ತು ರಮೇಶ್ ಬಂಡಿಸಿದ್ದೇಗೌಡ ಅವರು ತಲಾ ೧ ಕೋಟಿ ರು. ಅನುದಾನ ಸೇರಿ ಒಟ್ಟು ೫.೫೦ ಕೋಟಿ ವೆಚ್ಚದಲ್ಲಿ ಭವ್ಯ ಭವನ ಮೂಡಿಬರಲಿದೆ.
ಕನ್ನಡಪ್ರಭ ವಾರ್ತೆ ಮಂಡ್ಯ
೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸವಿ ನೆನಪಿಗಾಗಿ ನಿರ್ಮಾಣವಾಗಲಿರುವ ಕನ್ನಡ ಭವನಕ್ಕೆ ಗಂಗರಸ ‘ಶ್ರೀಪುರುಷ’ ಹೆಸರನ್ನು ನಾಮಕರಣ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.ನಗರದ ಒಳಾಂಗಣ ಕ್ರೀಡಾಂಗಣ ಆವರಣದ ೧೩ ಗುಂಟೆ ಜಾಗದಲ್ಲಿ ೫.೫೦ ಕೋಟಿ ರು. ವೆಚ್ಚದ ಕನ್ನಡ ಭವನ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿ, ಎಂಟನೂರು ವರ್ಷಗಳ ಹಿಂದೆ ಗಂಗ ಸಾಮ್ರಾಜ್ಯವನ್ನು ಕಟ್ಟಿ ಸಾಹಿತ್ಯ ಲೋಕಕ್ಕೆ ಕಾಣಿಕೆಯನ್ನು ನೀಡಿದ ‘ಶ್ರೀಪುರುಷ’ ಹೆಸರನ್ನು ಕನ್ನಡ ಭವನಕ್ಕಿಡುವುದು ಸೂಕ್ತವೆಂದು ಎಲ್ಲರ ಅಭಿಪ್ರಾಯ ಕೇಳಿಬಂದಿದ್ದರಿಂದ ಅದೇ ಹೆಸರನ್ನಿಡಲಾಗಿದೆ ಎಂದರು.
ಮಂಡ್ಯದಲ್ಲಿ ನಡೆದ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗುವಲ್ಲಿ ಜಿಲ್ಲಾಡಳಿತ ಅಪಾರ ಶ್ರಮ ವಹಿಸಿತ್ತು. ಜಿಲ್ಲೆಯ ಕನ್ನಡಪರ ಮನಸುಗಳ ಸಹಕಾರವೂ ಸ್ಮರಣೀಯ. ಸಮ್ಮೇಳನದ ಉಳಿಕೆ ಹಣ ೨.೫೦ ಕೋಟಿ ರು. ಮತ್ತು ಶಾಸಕರಾದ ಪಿ.ರವಿಕುಮಾರ್, ದರ್ಶನ್ ಪುಟ್ಟಣ್ಣಯ್ಯ ಮತ್ತು ರಮೇಶ್ ಬಂಡಿಸಿದ್ದೇಗೌಡ ಅವರು ತಲಾ ೧ ಕೋಟಿ ರು. ಅನುದಾನ ಸೇರಿ ಒಟ್ಟು ೫.೫೦ ಕೋಟಿ ವೆಚ್ಚದಲ್ಲಿ ಭವ್ಯ ಭವನ ಮೂಡಿಬರಲಿದೆ ಎಂದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲೆಯ ಸಾಂಸ್ಕೃತಿಕ ಮತ್ತು ದೇವಸ್ಥಾನ ಅಭಿವೃದ್ಧಿಗೆ ೫೦ ಕೋಟಿ ರು. ವಿಶೇಷ ಅನುದಾನ ನೀಡಿದ್ದಾರೆ. ಮಂಡ್ಯ ಅಭಿವೃದ್ಧಿಗೆ ನಮ್ಮ ಶಕ್ತಿ ಇರುವವರೆಗೂ ಸೇವೆ ಮಾಡುವುದಾಗಿ ತಿಳಿಸಿದರು.
ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಕನ್ನಡ ಭವನವೂ ನಮ್ಮದೇ, ಕ್ರೀಡಾಂಗಣವೂ ನಮ್ಮದೇ. ಯಾರೂ ಅಸಮಾಧಾನಗೊಳ್ಳುವುದು ಬೇಡ. ಎರಡರ ಅಭಿವೃದ್ಧಿಗೂ ಜನಪ್ರತಿನಿಧಿಗಳು ಆದ್ಯತೆ ನೀಡುತ್ತಾರೆ’ ಎಂದರು.ಜಿಲ್ಲಾಧಿಕಾರಿ ಕುಮಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಸಕ ದರ್ಶನ್ ಪುಟ್ಟಣ್ಣಯ್ಯ, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಮುಡಾ ಅಧ್ಯಕ್ಷ ಬಿ.ಪಿ. ಪ್ರಕಾಶ್, ಸಣ್ಣ ಕೈಗಾರಿಗಳ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ವಿಜಯಲಕ್ಷ್ಮಿ ರಘುನಂದನ್, ಜಿಪಂ ಸಿಇಒ ಕೆ.ಆರ್.ನಂದಿನಿ, ಜಿಲ್ಲಾ ಆರಕ್ಷಕ ಅಧೀಕ್ಷಕಿ ಡಾ.ವಿ.ಜೆ. ಶೋಭಾರಾಣಿ, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶಗೌಡ, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷೆ ಮೀರಾ ಶಿವಲಿಂಗಯ್ಯ ಮತ್ತು ಕಸಾಪ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ವಾಲಿಬಾಲ್ ಅಸೋಸಿಯೇಷನ್ ಪದಾಧಿಕಾರಿಗಳ ವಿರೋಧ: ಸಚಿವ ಗರಂಕ್ರೀಡೆಗೆ ಮೀಸಲಾದ ಜಾಗದಲ್ಲಿ ‘ಕನ್ನಡ ಭವನ’ ನಿರ್ಮಾಣ ಮಾಡುವುದಕ್ಕೆ ಸ್ಥಳ ಆಯ್ಕೆ ಮಾಡಿದ ದಿನದಿಂದಲೂ ವಾಲಿಬಾಲ್ ಅಸೋಸಿಯೇಷನ್ ಪದಾಧಿಕಾರಿಗಳು ವಿರೋಧ ವ್ಯಕ್ತಪಡಿಸಿದ್ದರು. ಇಂದಿನ ಕಾರ್ಯಕ್ರಮಕ್ಕೂ ಆಗಮಿಸಿ ಸಚಿವರ ಬಳಿ ತಮ್ಮ ಅಸಮಾಧಾನ ತೋಡಿಕೊಂಡರು.
ಸಚಿವರ ಭಾಷಣ ಮಾಡುವ ವೇಳೆ ವಿರೋಧದ ಕೂಗು ಹಾಕಿದ ವ್ಯಕ್ತಿಯನ್ನು ಕಂಡು ಗರಂ ಆದರು. ನಾನು ಮಾತನಾಡುವಾಗ ಮಾತನಾಡಬೇಡಿ, ಸುಮ್ಮನಿರಿ. ನಮಗೂ ಜವಾಬ್ದಾರಿ ಇದೆ. ನಿಮ್ಮ ಸಮಸ್ಯೆಯನ್ನು ನಾನು ಬಗೆಹರಿಸಿಕೊಡುತ್ತೇನೆ ಎಂದು ಗದರಿದರು.ವಾಲಿಬಾಲ್ ಕ್ರೀಡಾಂಗಣಕ್ಕೆ ಎಷ್ಟು ಜಾಗ ಬೇಕೋ ಅಷ್ಟನ್ನು ಮೀಸಲಿಡಲಾಗಿದೆ. ಯಾವುದೇ ತೊಂದರೆಯಾಗದಂತೆ ಕ್ರಮ ವಹಿಸುತ್ತೇವೆ. ಈ ವಿಷಯವಾಗಿ ಎಲ್ಲರೊಂದಿಗೆ ಮಾತನಾಡುತ್ತೇನೆ. ಸಮಸ್ಯೆ ಬಗೆಹರಿಸಲು ಸಿದ್ಧರಿದ್ದೇವೆ. ಕನ್ನಡ ಭವನದ ಪ್ರವೇಶದ್ವಾರ, ಸ್ಫೋರ್ಟ್ಸ್ ಕಾಂಪ್ಲೆಕ್ಸ್‌ಗೆ ಪ್ರತ್ಯೇಕ ಪ್ರವೇಶದ್ವಾರವಿರುತ್ತದೆ. ಯಾವುದೇ ಅಡಚಣೆಯಾಗುವುದಿಲ್ಲ ಎಂದು ಭರವಸೆ ನೀಡಿದರು.
೭೦ ಲಕ್ಷ ರು. ವೆಚ್ಚದಲ್ಲಿ ವಾಲಿಬಾಲ್ ಕ್ರೀಡಾಂಗಣಶಾಸಕ ಪಿ.ರವಿಕುಮಾರ್ ಮಾತನಾಡಿ, ವಾಲಿಬಾಲ್ ಕ್ರೀಡಾಂಗಣಕ್ಕೆ ೭೦ ಲಕ್ಷ ರು. ಬಿಡುಗಡೆಯಾಗಿದೆ. ಮುಂದಿನ ಎರಡು ಮೂರು ತಿಂಗಳಲ್ಲಿ ಉತ್ತಮ ಕ್ರೀಡಾಂಗಣವನ್ನು ನಿರ್ಮಿಸುತ್ತೇವೆ. ಬ್ಯಾಸ್ಕೆಟ್‌ಬಾಲ್ ಕ್ರೀಡಾಂಗಣವನ್ನೂ ೩.೫ ಕೋಟಿ ರು. ವೆಚ್ಚದಲ್ಲಿ ನಿರ್ಮಾಣ ಮಾಡುತ್ತೇವೆ. ಮುಂದಿನ ೧೫ ದಿನದಲ್ಲಿ ಭೂಮಿಪೂಜೆ ನೆರವೇರಿಸುತ್ತೇವೆ. ವಿಶ್ವವಿದ್ಯಾನಿಲಯದ ಕ್ರೀಡಾಂಗಣಕ್ಕೆ ೨ ಕೋಟಿ ರು. ಬಿಡುಗಡೆ ಮಾಡಲಾಗಿದೆ. ಅದನ್ನು ಕೂಡ ಆರು ತಿಂಗಳಲ್ಲಿ ಪೂರ್ಣಗೊಳಿಸುತ್ತೇವೆ. ಮಂಡ್ಯ ನಗರದ ಚಿತ್ರಣ ಬದಲಿಸಲು ೧೦೦ ಕೋಟಿ ರು. ವಿನಿಯೋಗಿಸಿ, ವೃತ್ತಗಳಿಗೆ ಹೊಸ ರೂಪ ನೀಡುವ ಭರವಸೆ ನೀಡಿದರು.