ತಾಳೂರು ರಸ್ತೆಗೆ ಮಹಾಯೋಗಿ ವೇಮನ ಹೆಸರು: ಸಚಿವ ನಾಗೇಂದ್ರ

| Published : Jan 20 2024, 02:02 AM IST

ತಾಳೂರು ರಸ್ತೆಗೆ ಮಹಾಯೋಗಿ ವೇಮನ ಹೆಸರು: ಸಚಿವ ನಾಗೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ರೆಡ್ಡಿಗಳದ್ದು ಒಕ್ಕಲುತನವೇ ಮೂಲ ವೃತ್ತಿ. ಆದರೆ, ನಮ್ಮ ಸಮಾಜ ಮೂಲ ವೃತ್ತಿಯಿಂದ ವಿಮುಖಗೊಂಡು ನಗರ ಪ್ರದೇಶಗಳಿಗೆ ಸೇರುತ್ತಿರುವುದು ನೋವಿನ ಸಂಗತಿ.

ಬಳ್ಳಾರಿ: ರೆಡ್ಡಿ ಸಮಾಜದ ಒತ್ತಾಸೆಯಂತೆ ನಗರದ ತಾಳೂರು ರಸ್ತೆಗೆ ಮಹಾಯೋಗಿ ವೇಮನ ಹೆಸರು ಹಾಗೂ ಮೆಣಸಿನಕಾಯಿ ಮಾರುಕಟ್ಟೆಗೆ ಮಹಾಸಾಧ್ವಿ ಹೇಮರೆಡ್ಡಿ ಮಲ್ಲಮ್ಮನವರ ಹೆಸರಿಡಲು ಕ್ರಮ ವಹಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ನಾಗೇಂದ್ರ ಭರವಸೆ ನೀಡಿದರು.

ನಗರದ ಬಿಡಿಎಎ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ರೆಡ್ಡಿ ಜನಸಂಘ ಸಹಯೋಗದಲ್ಲಿ ಜರುಗಿದ ಮಹಾಯೋಗಿ ವೇಮನರ 612ನೇ ಜಯಂತ್ಯುತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.

ನಗರ ಶಾಸಕ ನಾರಾ ಭರತ್ ರೆಡ್ಡಿ ಹಾಗೂ ರೆಡ್ಡಿ ಜನ ಸಂಘದ ಅಧ್ಯಕ್ಷ ನಾರಾ ಪ್ರತಾಪ ರೆಡ್ಡಿ ಅವರು ಮಹಾನ್ ದಾರ್ಶನಿಕ ವೇಮನ ಅವರ ಹೆಸರನ್ನು ತಾಳೂರು ರಸ್ತೆಗೆ ಹಾಗೂ ಮೆಣಸಿನಕಾಯಿ ಮಾರುಕಟ್ಟೆಗೆ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನವರ ಹೆಸರಿಡುವಂತೆ ಕೇಳಿದ್ದಾರೆ. ಈ ಕುರಿತು ಮಹಾನಗರ ಪಾಲಿಕೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗುವುದು. ರೆಡ್ಡಿ ಜನರ ಕಲ್ಯಾಣಕ್ಕಾಗಿ ಪ್ರಾಧಿಕಾರ ರಚನೆ ಮಾಡುವ ಸಂಬಂಧ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳ ಜತೆ ಚರ್ಚಿಸಲಾಗುವುದು. ರೆಡ್ಡಿ ಭವನ ನಿರ್ಮಾಣಕ್ಕೆ ವೈಯಕ್ತಿಕವಾಗಿ ₹15 ಲಕ್ಷಗಳನ್ನು ನೀಡಲಾಗುವುದು ಎಂದು ಸಚಿವ ನಾಗೇಂದ್ರ ಭರವಸೆ ನೀಡಿದರು.

ರೆಡ್ಡಿ ಸಮುದಾಯ ನುಡಿದಂತೆ ನಡೆಯುವ ಸಮಾಜವಾಗಿದೆ. ಹುಟ್ಟಿನಿಂದಲೇ ನಾಯಕತ್ವಗುಣ ಮೈಗೂಡಿಸಿಕೊಂಡಿರುವ ರೆಡ್ಡಿ ಸಮಾಜದವರು ಜನಸೇವೆಯಲ್ಲಿ ಸದಾ ಮುಂಚೂಣಿಯಲ್ಲಿರುತ್ತಾರಲ್ಲದೆ, ಮಹಾಯೋಗಿ ವೇಮನರ ಆಶಯದಂತೆ ಜನರ ಸಂಕಷ್ಟಗಳಿಗೆ ಮಿಡಿದು, ಜನೋಪಕಾರಿಯಾಗಿದ್ದಾರೆ ಎಂದರು.

ರೆಡ್ಡಿ ಜನರು ಕುಲಕಸಬು ಬಿಡದಿರಿ: ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನಗರ ಶಾಸಕ ನಾರಾ ಭರತ್ ರೆಡ್ಡಿ ಮಾತನಾಡಿ, ರೆಡ್ಡಿ ಸಮಾಜ ಜನರ ಸಂಕಷ್ಟಗಳಿಗೆ ಸ್ಪಂದಿಸುವ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಂಡಿರುವ ವಿಶಿಷ್ಟ ಸಮಾಜವಾಗಿದೆ. ರೆಡ್ಡಿಗಳದ್ದು ಒಕ್ಕಲುತನವೇ ಮೂಲ ವೃತ್ತಿ. ಆದರೆ, ನಮ್ಮ ಸಮಾಜ ಮೂಲ ವೃತ್ತಿಯಿಂದ ವಿಮುಖಗೊಂಡು ನಗರ ಪ್ರದೇಶಗಳಿಗೆ ಸೇರುತ್ತಿರುವುದು ನೋವಿನ ಸಂಗತಿ. ಹಳ್ಳಿಯಲ್ಲಿಯೇ ಇದ್ದು ಮೂಲ ಕಸುಬುನ್ನು ಮುಂದುವರಿಸಿಕೊಂಡು ಹೋಗಬೇಕು. ಜತೆಗೆ ಬಡವರು, ಶೋಷಿತ ಸಮದಾಯಗಳಿಗೆ ನೆರವು ನೀಡುವ ಮೂಲಕ ರೆಡ್ಡಿ ಜನಾಂಗದ ಮಾನವೀಯ ಕಾರ್ಯಗಳು ಸ್ಥಗಿತವಾಗದಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ರೆಡ್ಡಿ ಸಮಾಜದ ಒತ್ತಾಸೆಯಂತೆ ತಾಳೂರು ರಸ್ತೆಗೆ ಮಹಾಯೋಗಿ ವೇಮನ ಹೆಸರು, ಒಣಮೆಣಸಿನಕಾಯಿ ಮಾರುಕಟ್ಟೆಗೆ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನವರ ಹೆಸರಿಡಬೇಕು. ರೆಡ್ಡಿ ಪ್ರಾಧಿಕಾರ ರಚನೆಗೆ ಮುಂದಾಗಬೇಕು ಎಂದು ಜಿಲ್ಲಾ ಸಚಿವರನ್ನು ಕೋರಿಕೊಂಡರು.

ಮೇಯರ್ ಬಿ. ಶ್ವೇತಾ ಹಾಗೂ ಉಪಮೇಯರ್ ಜಾನಕಿ ಅವರು ಮಾತನಾಡಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ರೆಡ್ಡಿ ಜನಸಂಘದ ಅಧ್ಯಕ್ಷ ನಾರಾ ಪ್ರತಾಪ ರೆಡ್ಡಿ ಅವರು, ರೆಡ್ಡಿ ಜನರ ಕೋರಿಕೆಯಂತೆ ತಾಳೂರು ರಸ್ತೆಗೆ ಮಹಾಯೋಗಿ ವೇಮನ ಹಾಗೂ ಮೆಣಸಿನಕಾಯಿ ಮಾರುಕಟ್ಟೆಗೆ ಶಿವಭಕ್ತೆ ಹೇಮರೆಡ್ಡಿ ಮಲ್ಲಮ್ಮನವರ ಹೆಸರಿಡುವ ಕುರಿತು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ನಗರ ಶಾಸಕರು ಪೂರಕ ಕ್ರಮ ವಹಿಸಬೇಕು ಎಂದರು.

ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್, ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರು, ಸಹಾಯಕ ಆಯುಕ್ತ ಹೇಮಂತ್ ಕುಮಾರ್, ಪಾಲಿಕೆ ಸದಸ್ಯರಾದ ರಾಜೇಶ್ವರಿ, ಕಲ್ಪನಾ, ರೆಡ್ಡಿ ಜನಸಂಘದ ತಿಮ್ಮಾರೆಡ್ಡಿ ಮತ್ತಿತರರಿದ್ದರು. ಲಕ್ಷ್ಮಿಪವನಕುಮಾರ್ ಸುಗಮ ಸಂಗೀತ ನಡೆಸಿಕೊಟ್ಟರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ. ನಾಗರಾಜ್ ನಿರ್ವಹಿಸಿದರು. ಕಾರ್ಯಕ್ರಮ ಮುನ್ನ ಮಹಾಯೋಗಿ ವೇಮನ ಭಾವಚಿತ್ರದ ಮೆರವಣಿಗೆ ಜರುಗಿತು.ರೆಡ್ಡಿ ಭವನ ನಿರ್ಮಾಣಕ್ಕೆ ₹50 ಲಕ್ಷ ನೆರವು

ನಗರದಲ್ಲಿನ ರೆಡ್ಡಿ ಭವನ ನಿರ್ಮಾಣಕ್ಕೆ ವೈಯಕ್ತಿಕವಾಗಿ ನಮ್ಮ ಕುಟುಂಬದಿಂದ ₹50 ಲಕ್ಷ ನೀಡಲಾಗುವುದು ಎಂದು ನಗರ ಶಾಸಕ ನಾರಾ ಭರತ್ ರೆಡ್ಡಿ ಭರವಸೆ ನೀಡಿದರು.

ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಕುಟುಂಬದ ರಾಜಕೀಯ ಬೆಳವಣಿಗೆಗೆ ರೆಡ್ಡಿ ಸಮಾಜ ಸಾಕಷ್ಟು ಸಹಕಾರ ನೀಡಿದೆ. ಸಮಾಜದ ಋಣ ನಮ್ಮ ಮೇಲಿದೆ. ಸಮಾಜದ ಹಿತಕ್ಕಾಗಿ ನಮ್ಮಿಂದಾದ ಸೇವೆ- ಸಹಕಾರ ನೀಡಲಾಗುವುದು ಎಂದರು.