ಸಾರಾಂಶ
ಹುಬ್ಬಳ್ಳಿ:
ಇನ್ನು ಮುಂದೆ ಮಹಾನಗರ ಪಾಲಿಕೆಯ ₹ 10 ಲಕ್ಷಕ್ಕೂ ಹೆಚ್ಚಿನ ತೆರಿಗೆ ಬಾಕಿ ಉಳಿಸಿಕೊಂಡವರ ಹೆಸರು ದಿನಪ್ರತಿಕೆ ಹಾಗೂ ಪಾಲಿಕೆಯ ವೆಬ್‌ಸೈಟ್‌ನಲ್ಲಿ ಪ್ರಕಟವಾಗಲಿದೆ!ಸೋಮವಾರ ಮಹಾನಗರ ಪಾಲಿಕೆಯ 2025-26ನೇ ಸಾಲಿನ ಬಜೆಟ್ ಕುರಿತಂತೆ ಮಹಾನಗರ ಪಾಲಿಕೆಯ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಮೇಯರ್ ರಾಮಪ್ಪ ಬಡಿಗೇರ ಹಿಗೇಂದು ಘೋಷಿಸಿದ್ದಾರೆ. ಮಹಾನಗರ ಪಾಲಿಕೆಯ ₹ 143 ಕೋಟಿ ಆಸ್ತಿ ತೆರಿಗೆಯಲ್ಲಿ ಈ ವರೆಗೆ ₹ 113 ಕೋಟಿ ಸಂಗ್ರಹವಾಗಿದೆ. ಉಳಿದ ₹ 30 ಕೋಟಿ ತೆರಿಗೆ ಸಂಗ್ರಹಿಸಲು ಆಯಾ ವಾರ್ಡ್ ಸದಸ್ಯರು ಸಹಕಾರ ನೀಡಬೇಕು. ₹ 10 ಲಕ್ಷಕ್ಕಿಂತ ಹೆಚ್ಚಿನ ತೆರಿಗೆ ಉಳಿಸಿಕೊಂಡವರ ಹೆಸರನ್ನು ಪಾಲಿಕೆಯ ವೆಬ್‌ಸೈಟ್ ಹಾಗೂ ದಿನಪತ್ರಿಕೆಯಲ್ಲಿ ಪ್ರಕಟಿಸುವುದಾಗಿ ತಿಳಿಸಿದರು.
ಇದಕ್ಕೂ ಮುನ್ನ ನಡೆದ ಚರ್ಚೆಯಲ್ಲಿ ಮಹಾನಗರ ಪಾಲಿಕೆಯಲ್ಲಿ ಇಂದಿಗೂ ಹಲವು ಪ್ರಭಾವಿಗಳು, ಉಳ್ಳವರೇ ಪಾಲಿಕೆಗೆ ತೆರಿಗೆ ಕಟ್ಟದೆ ಲಕ್ಷಾಂತರ ರುಪಾಯಿ ಉಳಿಸಿಕೊಂಡಿದ್ದಾರೆ. ಅಂಥವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು. ಗರಿಷ್ಠ ಮೊತ್ತದಲ್ಲಿ ತೆರಿಗೆ ಉಳಿಸಿಕೊಂಡಿದ್ದಲ್ಲಿ ಅಂಥವರ ಹೆಸರು ಪಾಲಿಕೆಯ ವೆಬ್‌ಸೈಟ್ ಹಾಗೂ ಪತ್ರಿಕೆಗಳಲ್ಲಿ ಪ್ರಕಟಿಸಬೇಕು ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಸಾರ್ವಜನಿಕರು ಮೇಯರ್ ಅವರನ್ನು ಒತ್ತಾಯಿಸಿದ್ದರು.ತೆರಿಗೆದಾರರನ್ನು ಸನ್ಮಾನಿಸಿ:
ಮಹಾನಗರ ವ್ಯಾಪ್ತಿಯಲ್ಲಿ ಅತೀ ಹೆಚ್ಚು ತೆರಿಗೆ ಕಟ್ಟುವವರು, ಸಕಾಲಕ್ಕೆ ಪಾವತಿಸುವ ಪ್ರಾಮಾಣಿಕರನ್ನು ಪಾಲಿಕೆ ವತಿಯಿಂದ ಗೌರವಿಸಬೇಕು. ಇದು ತೆರಿಗೆ ಪಾವತಿಸಲು ಇತರರಿಗೂ ಪ್ರೇರಣೆ ಆಗಲಿದೆ ಎಂದು ಶಂಕರ ದೊಡ್ಡಮನಿ ಹೇಳಿದರು.ಕರವೇ ಮುಖ್ಯಸ್ಥ ಮಂಜುನಾಥ ಲೂತಿಮಠ ಮಾತನಾಡಿ, ಪಾಲಿಕೆ ಒಡೆತನದ ಖುಲ್ಲಾ ಜಾಗೆ ಮತ್ತು ಉದ್ಯಾನವನ್ನು ಕೆಲವರು ಅತಿಕ್ರಮಣ ಮಾಡಿದ್ದಾರೆ. ತಕ್ಷಣವೇ ತೆರವುಗೊಳಿಸಿ ಅವರಿಂದ ದಂಡ ವಸೂಲಿ ಮಾಡಬೇಕು. ಹಾಗೂ ಉದ್ಯಾನಗಳ ನಿರ್ವಹಣೆಗೆ ಸಮರ್ಪಕ ಅನುದಾನ ಮೀಸಲಿಡುವಂತೆ ಒತ್ತಾಯಿಸಿದರು.
ಸಂಜಯ ಧುಮಕನಾಳ ಮಾತನಾಡಿ, ಉದ್ಯಾನ ಮತ್ತು ಸರ್ಕಾರಿ ಜಾಗೆಯಲ್ಲಿ ಕಲ್ಯಾಣ ಮಂಟಪ ನಿರ್ಮಿಸಿಕೊಂಡು ಲಾಭ ಪಡೆಯುತ್ತಿರುವ ಖಾಸಗಿ ವ್ಯಕ್ತಿಗಳಿಂದ ಇಂತಿಷ್ಟು ಎಂದು ವಂತಿಕೆ ವಸೂಲಿ ಮಾಡಬೇಕು. ಇದರಿಂದ ಪಾಲಿಕೆಯ ಬೊಕ್ಕಸಕ್ಕೆ ಲಾಭವಾಗಲಿದೆ ಎಂದರು.ಈ ವೇಳೆ ಉಪ ಮೇಯರ್ ದುರ್ಗಮ್ಮ ಬಿಜವಾಡ, ತೆರಿಗೆ ನಿರ್ಧರಣೆ, ಹಣಕಾಸು ಹಾಗೂ ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷ ಚಂದ್ರಶೇಖರ ಮನಗುಂಡಿ, ಮುಖ್ಯ ಲೆಕ್ಕಾಧಿಕಾರಿ ಟಿ.ಬಿ. ವಿಶ್ವನಾಥ, ಸದಸ್ಯರಾದ ರೂಪಾ ಶೆಟ್ಟಿ, ಮಂಜುನಾಥ ಬುರ್ಲಿ, ರತ್ನಾಬಾಯಿ ನಾಝರೆ, ಸರತಾಜ ಆದೋನಿ, ಶಾಂತಾ ಹಿರೇಮಠ, ಮಂಗಳಾ ಗೌರಿ ಸೇರಿದಂತೆ ಹಲವರಿದ್ದರು.
ತೆರಿಗೆ ಸಂಗ್ರಹಿಸುವವರಿಗೆ ವಿಶೇಷ ಅನುದಾನ:ತಮ್ಮ ವಾರ್ಡ್‌ಗಳಿಂದ ಅತೀ ಹೆಚ್ಚಿನ ತೆರಿಗೆ ಸಂಗ್ರಹಿಸಲು ಶ್ರಮಿಸುವ ಆಯಾ ವಾರ್ಡ್ ಸದಸ್ಯರಿಗೆ ಪಾಲಿಕೆಯಿಂದ ವಿಶೇಷ ಅನುದಾನ ನೀಡುವುದಾಗಿ ಮೇಯರ್ ರಾಮಪ್ಪ ಬಡಿಗೇರ ಘೋಷಿಸಿದರು. ಯಾರ ಒತ್ತಡಕ್ಕೂ ಮಣಿಯದೇ ಪಕ್ಷಾತೀತವಾಗಿ ಕರ ಸಂಗ್ರಹಕ್ಕೆ ಸದಸ್ಯರು ಮುಂದಾಗಬೇಕು ಎಂದರು. ಕಳೆದ ಬಾರಿ ₹1400 ಕೋಟಿ ಬಜೆಟ್ ಮಂಡಿಸಲಾಗಿತ್ತು. ಆದರೆ, ಈ ಬಾರಿ ದೊಡ್ಡ ಗಾತ್ರದ ಬಜೆಟ್ ಆಗದಿದ್ದರೂ ವಾಸ್ತವಕ್ಕೆ ಹತ್ತಿರವಾದ ಬಜೆಟ್ ಮಂಡಿಸುವುದಾಗಿ ತಿಳಿಸಿದರು. ಫೆಬ್ರವರಿ ಅಂತ್ಯದಲ್ಲಿ ಆಯವ್ಯಯ ಮಂಡನೆಯಾಗಲಿದೆ. ಅದರೊಳಗೆ ಪಾಲಿಕೆಯ ಆದಾಯ ಹೆಚ್ಚಿಸಿಕೊಳ್ಳುವ ಅಗತ್ಯತೆ ಇದ್ದು, ಇನ್ನೂ 8-10 ದಿನಗಳ ಒಳಗಾಗಿ ಇ ಸ್ವತ್ತು ಮೇಳ ಮಾಡಲಾಗುವುದು ಎಂದು ಮಾಹಿತಿ ನೀಡಿದರು.ಮೇಯರ್-ಆಯುಕ್ತರ ವಿರುದ್ಧ ಘೋಷಣೆ:
ಬಜೆಟ್ ಪೂರ್ವಭಾವಿ ಸಭೆ ಬೆಳಗ್ಗೆ 11ಕ್ಕೆ ನಿಗದಿಯಾಗಿತ್ತು. ಆದರೆ, 12 ಗಂಟೆಯಾದರೂ ಆರಂಭವಾಗಲಿಲ್ಲ. ಇದರಿಂದಾಗಿ ಸಭೆಯಲ್ಲಿದ್ದ ಮುಖಂಡರು ಪಾಲಿಕೆ ಆಯುಕ್ತರು ಹಾಗೂ ಮೇಯರ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಆಗಮಿಸಿದ ಮೇಯರ್ ರಾಮಣ್ಣ ಬಡಿಗೇರ ಎಲ್ಲರನ್ನು ಸಮಾಧಾನ ಪಡಿಸಿ ಜಿಲ್ಲಾ ಅಧಿಕಾರಿಗಳೊಂದಿಗೆ ಸಭೆ ನಿಗದಿಯಾದ ಹಿನ್ನೆಲೆಯಲ್ಲಿ ಸಭೆಗೆ ಆಗಮಿಸಲು ವಿಳಂಬವಾಗಿದೆ. ಈ ಕುರಿತು ನಾನು ಕ್ಷಮೆ ಕೋರುವುದಾಗಿ ತಿಳಿಸಿದ ನಂತರ ಸಭೆ ಆರಂಭಗೊಂಡಿತು.