ರಸ್ತೆಗಳಿಗೆ ನಾಮಫಲಕ ಅಳವಡಿಸಲಿ

| Published : Jun 10 2024, 12:32 AM IST

ಸಾರಾಂಶ

ಹೊಸಬರು ಬಂದರೆ ವಿಳಾಸ ಗುರುತು ಹಿಡಿಯಲೆಂದು ಎಲ್ಲಾ ಬಡವಾಣೆಗಳಲ್ಲಿ ಬಡಾವಣೆಯ ಹೆಸರು, ಎಷ್ಟನೇ ಕ್ರಾಸ್, ಅಡ್ಡ ರಸ್ತೆ ಇತ್ಯಾಧಿಯ ನಾಮಫಲಗಳು ಎಲ್ಲ ನಗರಗಳಲ್ಲಿ ಇರುವುದು ಸಾಮಾನ್ಯ, ಆದರೆ ಬಂಗಾರಪೇಟೆಯಲ್ಲಿ ಫಲಕಗಳೇ ಇಲ್ಲ

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಪಟ್ಟಣದಲ್ಲಿ ಯಾವುದೇ ಬಡಾವಣೆಗೆ ಹೋಗಬೇಕಾದರೆ ದಾರಿ ತೋರಿಸುವ ನಾಮಫಲಗಳು ಅತ್ಯಗತ್ಯ. ಅದು ಇಲ್ಲದಿದ್ದರೆ ತಲುಪಬೇಕಾದ ವಿಳಾಸ ತಲುಪಲಾಗದೆ ಪರದಾಡಬೇಕಾಗುತ್ತದೆ, ಪಟ್ಟಣದಲ್ಲಿ ಇಂತಹದೇ ಪರಿಸ್ಥಿತಿ ನಿರ್ಮಾಣವಾಗಿದೆ.

ಪಟ್ಟಣದ ಯಾವುದೇ ಬಡಾವಣೆಯಲ್ಲಿ ನಾಮಫಲಕಗಳೇ ಇಲ್ಲ. ಬೆರೆ ಊರುಗಳಿಂದ ಬರುವ ಹೊಸಬರಿಗೆ ವಿಳಾಸ ಪತ್ತೆ ಮಾಡುವುದು ದೊಡ್ಡ ಸಮಸ್ಯೆಯಾಗಿದೆ.

ಬೆಳೆಯುತ್ತಿರುವ ಪಟ್ಟಣ

ಬಂಗಾರಪೇಟೆ ಪಟ್ಟಣ ವರ್ಷದಿಂದ ವರ್ಷಕ್ಕೆ ಜನಸಂಖ್ಯೆಯಲ್ಲಿ ಆಂಜನೇಯ ಬಾಲದಂತೆ ಬೆಳೆಯುತ್ತಿದೆ. ಪ್ರತಿ ವರ್ಷ ಕಟ್ಟಡಗಳೂ ಸಹ ಬೃಹತ್ತಾಗಿ ತಲೆ ಎತ್ತಿ ಪಟ್ಟಣ ಗುರುತು ಸಿಗದಷ್ಟು ಬದಲಾಗುತ್ತಿದೆ. ಪ್ರತಿ ವರ್ಷ ಹೊಸ ಬಡಾವಣೆಗಳೂ ನಿರ್ಮಾಣವಾಗುತ್ತಿದೆ. ಬಹುತೇಕ ಬಡಾವಣೆಗಳು ಅನಧಿಕೃತವಾಗಿ ನಿರ್ಮಾಣವಾಗುತ್ತಿದ್ದರೂ ಕೆಡಿಎ ಅಧಿಕಾರಿಗಳು ಚಕಾರ ಎತ್ತುತ್ತಿಲ್ಲ.ಇದು ಅಭಿವೃದ್ದಿಗೆ ಮಾರಕವಾಗಿದೆ. ಪುರಸಭೆ ವ್ಯಾಪ್ತಿ ದೊಡ್ಡದಾಗಿ ಬೆಳೆಯುತ್ತಿದೆ. ಪಟ್ಟಣಕ್ಕೆ ಹೊಸಬರು ಬಂದರೆ ವಿಳಾಸ ಗುರುತು ಹಿಡಿಯಲೆಂದು ಎಲ್ಲಾ ಬಡವಾಣೆಗಳಲ್ಲಿ ಬಡಾವಣೆಯ ಹೆಸರು, ಎಷ್ಟನೇ ಕ್ರಾಸ್, ಅಡ್ಡ ರಸ್ತೆ ಇತ್ಯಾಧಿಯ ನಾಮಫಲಗಳು ಎಲ್ಲ ನಗರಗಳಲ್ಲಿ ಇರುವುದು ಸಾಮಾನ್ಯ, ಆದರೆ ಪಟ್ಟಣದಲ್ಲಿ ಯಾವುದೇ ಬಡಾವಣೆಗೆ ಹೋದರೂ ಒಂದೇ ಒಂದು ನಾಮಫಲಕ ಕಾಣಿಸುವುದಿಲ್ಲ. ಇನ್ನು ಅಡ್ಡ ರಸ್ತೆ ಮುಖ್ಯ ರಸ್ತೆ ಯಾವುದೆಂದು ಪತ್ತೆ ಮಾಡುವುದು ದೊಡ್ಡ ಸಾಹಸವಾಗಿದೆ.ಒಂದೇ ರಸ್ತೆಗೆ 2 ಹೆಸರು

ಇದಲ್ಲದೆ ಒಂದೇ ರಸ್ತೆಗೆ ಎರಡು ಹೆಸರು ಇಡಲಾಗಿದೆ. ತಾಪಂ ಮುಂದಿರುವ ರಸ್ತೆಗೆ ಈ ಹಿಂದೆ ಕಾರೋನೇಷನ್ ರಸ್ತೆ ಎಂದು ನಾಮಕರಣ ಮಾಡಿ ನಾಮಫಲಕ ಹಾಕಲಾಗಿತ್ತು. ಕೆಲ ವರ್ಷಗಳ ನಂತರ ಇದೇ ರಸ್ತೆಗೆ ಸರ್‌ ಎಂ.ವಿಶ್ವೇಶ್ವರಯ್ಯ ಹೆಸರನ್ನು ಮರು ನಾಮಕರಣ ಮಾಡಲಾಗಿದೆ. ಒಂದೇ ರಸ್ತೆಗೆ ಎರಡು ಹೆಸರನ್ನು ಇಡುವ ಮೂಲಕ ಪುರಸಭೆ ಗೊಂದಲ ಮೂಡಿಸಿದೆ.

ಈ ಹಿಂದೆ ಶಂಷುದ್ದಿನ್ ಬಾಬು ಕೆಡಿಎ ಅಧ್ಯಕ್ಷರಾಗಿದ್ದಾಗ ಎಲ್ಲಾ ಬಡಾವಣೆಗಳಿಗೆ ಕೆಡಿಎ ವತಿಯಿಂದ ಉಚಿತವಾಗಿ ಮಾರ್ಗ ಹಾಗೂ ವಿಳಾಸ ಸೂಚಿಸುವ ನಾಮಫಲಕಗಳನ್ನು ಅಳವಡಿಸಲು ನಿರ್ಧರಿಸಿ ಪ್ರಾಯೋಗಿಕವಾಗಿ ಒಂದೆರಡು ಬಡಾವಣೆಗಳಲ್ಲಿ ನಾಮಫಲಗಳನ್ನು ಹಾಕಿದ್ದರು. ಇದು ಎಲ್ಲರಿಗೂ ಅನುಕೂಲವಾಗಿತ್ತು.ಶಾಸಕರ ಹೆಸರಿಗೆ ಮಸಿ

ಈ ನಾಮಫಲಕಗಳಲ್ಲಿ ಶಾಸಕರ ಹೆಸರು ಹಾಕಿದ್ದನ್ನು ನಾಗರಿಕರು, ರಾಜಕೀಯ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಶಾಸಕರ ಹೆಸರಿಗೆ ಮಸಿ ಬಳಿಯಲಾತು. ಆದರೆ ಈ ನಾಮಫಲಗಳು ಎಲ್ಲಾ ಬಡಾವಣೆಗಳಿಗೆ ವಿಸ್ತರಣೆ ಮಾಡದೆ ಕೆಡಿಎ ಕೈಬಿಟ್ಟಿತು. ಇದರಿಂದ ಸಾರ್ವಜನಿಕರಿಗೆ ವಿಳಾಸ ಪತ್ತೆಗೆ ಪರದಾಡುವಂತಾಗಿದೆ. ಆದ್ದರಿಂದ ಪುರಸಭೆ ಎಲ್ಲಾ ಬಡಾವಣೆಗಳಲ್ಲಿ ಹೆಸರು, ರಸ್ತೆ, ಅಡ್ಡ ರಸ್ತೆ, ಮುಖ್ಯ ರಸ್ತೆ ಸೂಚಿಸುವ ನಾಮಫಲಗಳನ್ನು ಅಳವಡಿಸಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.