ಕಾನೂನು ವಿವಿಗೆ ಸರ್‌ ಸಿದ್ದಪ್ಪ ಕಂಬಳಿ ಹೆಸರಿಡಿ: ಹೊರಟ್ಟಿ

| Published : Sep 19 2025, 01:01 AM IST

ಕಾನೂನು ವಿವಿಗೆ ಸರ್‌ ಸಿದ್ದಪ್ಪ ಕಂಬಳಿ ಹೆಸರಿಡಿ: ಹೊರಟ್ಟಿ
Share this Article
  • FB
  • TW
  • Linkdin
  • Email

ಸಾರಾಂಶ

20ನೆಯ ಶತಮಾನದ ಆರಂಭದಲ್ಲಿ ಭಾರತ ದೇಶಕ್ಕೆ ಹೊಸ ರೂಪ ಕೊಟ್ಟ ಗಣ್ಯರಲ್ಲಿ ಸರ್‌ ಸಿದ್ದಪ್ಪ ಕಂಬಳಿ ಪ್ರಮುಖರು. ಮೂಲತಃ ಹುಬ್ಬಳ್ಳಿಯವರಾದ ಇವರು, ಆಗಿನ ಬ್ರಿಟಿಷ್‌ ಆಳ್ವಿಕೆಯ ಮುಂಬೈ ಪ್ರಾಂತ್ಯದ ಸರ್ಕಾರದಲ್ಲಿ ಒಟ್ಟು ಏಳು ಖಾತೆಗಳ ಮಂತ್ರಿಯಾಗಿದ್ದರು. ಅತ್ಯಂತ ಪ್ರಾಮಾಣಿಕ ಮತ್ತು ದಕ್ಷ ಆಡಳಿತ ನೀಡಿ ಬ್ರಿಟಿಷ್‌ ಸರ್ಕಾರ ನೀಡುವ ಅತ್ಯುನ್ನತ ನಾಗರಿಕ ಪದವಿಯಾದ ಸರ್‌ ಬಿರುದು ಪಡೆದುಕೊಂಡಿದ್ದರು.

ಹುಬ್ಬಳ್ಳಿ: ಇಲ್ಲಿನ ನವನಗರದಲ್ಲಿ ಇರುವ "ಕರ್ನಾಟಕ ಕಾನೂನು ವಿಶ್ವವಿದ್ಯಾಲಯ "ಕ್ಕೆ ಸರ್‌ ಸಿದ್ಧಪ್ಪ ಕಂಬಳಿ ಅವರ ಹೆಸರನ್ನು ಇಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಆಗ್ರಹಿಸಿದ್ದಾರೆ.

ಈ ಕುರಿತು ಪತ್ರ ಬರೆದಿರುವ ಹೊರಟ್ಟಿ ಅವರು, 20ನೆಯ ಶತಮಾನದ ಆರಂಭದಲ್ಲಿ ಭಾರತ ದೇಶಕ್ಕೆ ಹೊಸ ರೂಪ ಕೊಟ್ಟ ಗಣ್ಯರಲ್ಲಿ ಸರ್‌ ಸಿದ್ದಪ್ಪ ಕಂಬಳಿ ಪ್ರಮುಖರು. ಮೂಲತಃ ಹುಬ್ಬಳ್ಳಿಯವರಾದ ಇವರು, ಆಗಿನ ಬ್ರಿಟಿಷ್‌ ಆಳ್ವಿಕೆಯ ಮುಂಬೈ ಪ್ರಾಂತ್ಯದ ಸರ್ಕಾರದಲ್ಲಿ ಒಟ್ಟು ಏಳು ಖಾತೆಗಳ ಮಂತ್ರಿಯಾಗಿದ್ದರು. ಅತ್ಯಂತ ಪ್ರಾಮಾಣಿಕ ಮತ್ತು ದಕ್ಷ ಆಡಳಿತ ನೀಡಿ ಬ್ರಿಟಿಷ್‌ ಸರ್ಕಾರ ನೀಡುವ ಅತ್ಯುನ್ನತ ನಾಗರಿಕ ಪದವಿಯಾದ ಸರ್‌ ಬಿರುದು ಪಡೆದುಕೊಂಡಿದ್ದರು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಶಿಕ್ಷಣ ಕ್ಷೇತ್ರಕ್ಕೂ ಅಪಾರ ಕೊಡುಗೆ ನೀಡಿ ಕರ್ನಾಟಕ ವಿವಿ, ಕರ್ನಾಟಕ ಕಾಲೇಜ್‌, ಲಿಂಗರಾಜ ಕಾಲೇಜ್‌ ಒಳಗೊಂಡಂತೆ ಅನೇಕ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಿದ ಪ್ರಮುಖರು ಸರ್‌ ಸಿದ್ದಪ್ಪ ಕಂಬಳಿ ಅವರು.

ಕರ್ನಾಟಕ ಏಕೀಕರಣದ ಮೊದಲ ಅಧ್ಯಕ್ಷರಾಗಿ, ಕರ್ನಾಟಕದಲ್ಲಿ ಪ್ರಪ್ರಥಮವಾಗಿ ಹಿಂದುಳಿದವರ ಕಲ್ಯಾಣಕ್ಕಾಗಿ 1920ರಲ್ಲೇ ಸಮಾವೇಶ ನಡೆಸಿದ್ದರು. ಅದರ ಅಧ್ಯಕ್ಷತೆಯನ್ನು ಕೊಲ್ಲಾಪುರದ ಶಾಹು ಮಹಾರಾಜರು ವಹಿಸಿದ್ದರು. ಸಾನ್ನಿಧ್ಯವನ್ನು ಸದ್ಗುರು ಶ್ರೀ ಸಿದ್ಧಾರೂಢ ಮಹಾಸ್ವಾಮೀಜಿ ವಹಿಸಿದ್ದರು. ಅಂಬೇಡ್ಕರ್‌ ಅಂತವರಿಗೆ ಪ್ರೊಪೆಸರ್‌ ಹುದ್ದೆ ನೀಡಿ ಗೌರವಿಸಿದ ಮಹಾನ್‌ ನಾಯಕರು. ಕೆಳವರ್ಗದ ವ್ಯಕ್ತಿಗಳಿಗೆ ಶಿಕ್ಷಣ, ಉದ್ಯೋಗಾವಕಾಶ ನೀಡುವುದರ ಮೂಲಕ ಜಾತಿ, ತಾರತಮ್ಯದ ವಿರುದ್ಧ ಕಾನೂನು ರೂಪಿಸಿದ್ದಲ್ಲದೇ, ಕಾನೂನನ್ನು ಸಕ್ರಿಯಗೊಳಿಸಿದ ಕೀರ್ತಿ ಸಿದ್ದಪ್ಪ ಕಂಬಳಿ ಅವರಿಗೆ ಸಲ್ಲುತ್ತದೆ. ಇಂಥ ಮಹನೀಯರ ಹೆಸರನ್ನು ಕಾನೂನು ವಿವಿಗೆ ಇಡಬೇಕು ಎಂಬುದು ಜನರ ಹಾಗೂ ನಮ್ಮ ಅಭಿಲಾಷೆ. ನಮ್ಮ ಬೇಡಿಕೆ ಈಡೇರಿಸುತ್ತೀರಿ ಎಂದು ನಂಬಿದ್ದೇನೆ ಎಂದು ಪತ್ರದಲ್ಲಿ ಹೊರಟ್ಟಿ ತಿಳಿಸಿದ್ದಾರೆ.

ಭ್ರಷ್ಟರನ್ನು ಹೊರಹಾಕಿ: ಉತ್ತರ ಕರ್ನಾಟಕದ ಜನತೆಯ ಬಹುವರ್ಷಗಳ ಬೇಡಿಕೆಯಂತೆ ಧಾರವಾಡದಲ್ಲಿ ಹೈಕೋರ್ಟ್ ಪೀಠ, ಹುಬ್ಬಳ್ಳಿಯಲ್ಲಿ ಕಾನೂನು ವಿವಿ ಸ್ಥಾಪನೆಯಾಗಿವೆ. ಆದರೆ, ಕಾನೂನು ವಿವಿಗೆ ಸರ್ಕಾರ ಸೂಕ್ತ ಕುಲಪತಿ, ಕುಲಸಚಿವರನ್ನು ನೇಮಿಸದೇ ವಿವಿಯನ್ನು ಭ್ರಷ್ಟರ ಕೂಪ ಮಾಡಿದೆ. ದಿನವೊ ಒಂದೊಂದು ಹಗರಣಗಳು ಅಲ್ಲಿ ಕೇಳಿಬರುತ್ತಿದ್ದು, ಇದರಿಂದ ವಿದ್ಯಾರ್ಥಿಗಳು ಉತ್ತಮ ವ್ಯಾಸಂಗದಿಂದ ವಂಚಿತರಾಗುತ್ತಿದ್ದಾರೆ. ತಕ್ಷಣ ಅಂಥವರನ್ನು ಬದಲಿಸಿ, ಸರ್‌ ಸಿದ್ದಪ್ಪ ಕಂಬಳಿ ಅವರ ಗೌರವ ಕಾಪಾಡುವ ಪ್ರಾಮಾಣಿಕರನ್ನು ನೇಮಕ ಮಾಡಬೇಕೆಂದೂ ಹೊರಟ್ಟಿ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ.