ವಿವಿಗೆ ರಾಮಕೃಷ್ಣ ಹೆಗಡೆ ಹೆಸರಿಡಿ: ಪಿ.ಜಿ.ಆರ್.ಸಿಂಧ್ಯಾ

| Published : Aug 30 2025, 01:00 AM IST

ಸಾರಾಂಶ

ದೇಶದಲ್ಲೇ ಮೊದಲು ಕರ್ನಾಟಕದಲ್ಲಿ ವಿಧವಾ ವೇತನ ಯೋಜನೆ ಜಾರಿ, ಲೋಕಾಯುಕ್ತ ಸಂಸ್ಥೆಯ ಸ್ಥಾಪನೆ ಸೇರಿ ಅನೇಕ ಮಹತ್ವದ ಕ್ರಾಂತಿಕಾರಕ ಯೋಜನೆಗಳನ್ನು ಜಾರಿಗೆ ತಂದ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಹೆಸರನ್ನು ರಾಜ್ಯದ ವಿಶ್ವವಿದ್ಯಾಲಯಕ್ಕೆ ನಾಮಕರಣ ಮಾಡಬೇಕು ಎಂದು ಭಾರತ್‌ ಸ್ಕೌಟ್ಸ್‌ ಆ್ಯಂಡ್‌ ಗೈಡ್ಸ್‌ ರಾಜ್ಯ ಪ್ರಧಾನ ಆಯುಕ್ತ ಪಿ.ಜಿ.ಆರ್‌.ಸಿಂಧ್ಯಾ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ದೇಶದಲ್ಲೇ ಮೊದಲು ಕರ್ನಾಟಕದಲ್ಲಿ ವಿಧವಾ ವೇತನ ಯೋಜನೆ ಜಾರಿ, ಲೋಕಾಯುಕ್ತ ಸಂಸ್ಥೆಯ ಸ್ಥಾಪನೆ ಸೇರಿ ಅನೇಕ ಮಹತ್ವದ ಕ್ರಾಂತಿಕಾರಕ ಯೋಜನೆಗಳನ್ನು ಜಾರಿಗೆ ತಂದ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಹೆಸರನ್ನು ರಾಜ್ಯದ ವಿಶ್ವವಿದ್ಯಾಲಯಕ್ಕೆ ನಾಮಕರಣ ಮಾಡಬೇಕು ಎಂದು ಭಾರತ್‌ ಸ್ಕೌಟ್ಸ್‌ ಆ್ಯಂಡ್‌ ಗೈಡ್ಸ್‌ ರಾಜ್ಯ ಪ್ರಧಾನ ಆಯುಕ್ತ ಪಿ.ಜಿ.ಆರ್‌.ಸಿಂಧ್ಯಾ ಹೇಳಿದ್ದಾರೆ.

ಶುಕ್ರವಾರ ನಗರದ ಗಾಂಧಿ ಭವನದಲ್ಲಿ ಜನತಾ ಪಕ್ಷದಿಂದ ಆಯೋಜಿಸಿದ್ದ ರಾಮಕೃಷ್ಣ ಹೆಗಡೆ ಅವರ 99ನೇ ಜನ್ಮದಿನಾಚರಣೆ ಮತ್ತು ಮೌಲ್ಯಾಧಾರಿತ ಕಾಯಕಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ವಿಶ್ವವಿದ್ಯಾಲಯದಲ್ಲಿ ರಾಮಕೃಷ್ಣ ಹೆಗಡೆ ಅವರ ಮೌಲ್ಯಾಧಾರಿತ ರಾಜಕಾರಣದ ಬಗ್ಗೆ ಅಧ್ಯಯನ ಮಾಡಬೇಕು. ದಾರಿಯಲ್ಲಿ ಹೋಗುವಾಗ ಬಡ ವಿಧವಾ ಹೆಣ್ಣು ಮಗಳನ್ನು ಕಂಡು ಮಾತನಾಡಿಸಿ ಕಷ್ಟ ಕೇಳಿಸಿಕೊಂಡು ವಿಧವಾ ವೇತನ ಯೋಜನೆ ಜಾರಿಗೆ ತಂದರು. ನಂತರ ಇಡೀ ದೇಶಕ್ಕೆ ಈ ಯೋಜನೆ ವಿಸ್ತರಣೆಯಾಯಿತು ಎಂದರು.

ಮೊದಲ ಬಾರಿ ರೈತರ ಸಾಲ ಮನ್ನಾ ಮಾಡಿದರು. ಭ್ರಷ್ಟಾಚಾರ ನಿಯಂತ್ರಣಕ್ಕಾಗಿ ಅವರು ಸ್ಥಾಪಿಸಿದ ಲೋಕಾಯುಕ್ತ ಸಂಸ್ಥೆ ಇಂದು ಹಲ್ಲಿಲ್ಲದೆ ಕೇವಲ ಬುಸುಗುಟ್ಟುವ ಹಾವಾಗಿದೆ. ಇಡೀ ವ್ಯವಸ್ಥೆಯೇ ಈ ರೀತಿ ಇರುವಾಗ ಯಾರನ್ನೂ ದೂಷಿಸಲಾಗದು. ಆದರೆ, ಪಾರದರ್ಶಕ, ಜನಸ್ನೇಹಿ ಸೇವೆ ಜನರಿಗೆ ಸಿಗಬೇಕು ಎಂಬ ಕನಸು ಹೆಗಡೆ ಕಂಡಿದ್ದರು. ಕಾವೇರಿ ನದಿ ನೀರು ವಿವಾದ ಪರಿಹರಿಸುವ ಯತ್ನ ಮಾಡಿದ್ದರು. ವಿಪಕ್ಷಗಳ ನಾಯಕರನ್ನು ಸ್ನೇಹಪೂರ್ವಕವಾಗಿ ಕಾಣುತ್ತಿದ್ದರು. ಆದರೆ, ಇಂದು ರಾಜಕೀಯ ಎಂಬುದು ಕಲುಷಿತವಾಗಿದೆ ಎಂದು ಪಿ.ಜಿ.ಆರ್.ಸಿಂಧ್ಯಾ ಬೇಸರ ವ್ಯಕ್ತಪಡಿಸಿದರು.

ಭರತನಾಟ್ಯ ಕಲಾವಿದೆ ಪ್ರತಿಭಾ ಪ್ರಹ್ಲಾದ್ ಮಾತನಾಡಿ, ಅಧಿಕಾರ ವಿಕೇಂದ್ರೀಕರಣ, ಮೌಲ್ಯಾಧಾರಿತ ರಾಜಕಾರಣ ಸೇರಿ ದೇಶಕ್ಕೆ, ನಾಡಿಗೆ ಅನೇಕ ಕೊಡುಗೆಗಳನ್ನು ನೀಡಿರುವ ರಾಮಕೃಷ್ಣ ಹೆಗಡೆ ಅವರ 100ನೇ ಜನ್ಮ ದಿನಾಚರಣೆ ವೇಳೆ ಕೇಂದ್ರ ಸರ್ಕಾರ ಭಾರತ ರತ್ನ ಪ್ರಶಸ್ತಿ ನೀಡಬೇಕು. ಇದರಿಂದ ಅವರು ನಮ್ಮ ದೇಶಕ್ಕೆ, ನಾಡಿಗೆ ಸಲ್ಲಿಸಿದ ಸೇವೆಗೆ ಗೌರವ ಸಲ್ಲಿಸಿದಂತಾಗುತ್ತದೆ. ಮತಗಳು, ಚುನಾವಣೆ, ಜನಾಂಗ, ರಾಜಕೀಯ ಲಾಭ ಮುಂತಾದ ವಿಚಾರಗಳನ್ನು ನೋಡದೆ ಅವರ ಕೊಡುಗೆಯನ್ನು ಮಾನದಂಡವಾಗಿಟ್ಟುಕೊಂಡು ಭಾರತ ರತ್ನಕ್ಕೆ ಪರಿಗಣಿಸಬೇಕು ಎಂದರು.

ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಅವರಿಗೆ ಕಳೆದ ವರ್ಷ ಭಾರತ ರತ್ನ ನೀಡಲಾಗಿದೆ. ಅವರಿಗಿಂತಲೂ ಅನೇಕ ವಿಚಾರಗಳಲ್ಲಿ ಉತ್ತಮ ಸೇವೆ ಸಲ್ಲಿಸಿ ಕೊಡುಗೆ ನೀಡಿರುವ ಹೆಗಡೆ ಅವರು ಭಾರತರತ್ನಕ್ಕೆ ಅರ್ಹರಾಗಿದ್ದಾರೆ. ಬಡವರು, ರೈತರು, ಕಾರ್ಮಿಕ ವರ್ಗ ಸೇರಿದಂತೆ ಎಲ್ಲರ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಹೆಗಡೆ ಅವರು ನಾಡಿನ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ್ದರು ಎಂದು ಪ್ರತಿಭಾ ಪ್ರಹ್ಲಾದ್ ತಿಳಿಸಿದರು.

ಕಲಾಕ್ಷೇತ್ರದ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದ ಹೆಗಡೆ ಅವರ ಹೆಸರಿನಲ್ಲಿ ರಾಜ್ಯದಲ್ಲಿ ಒಂದು ಕಲಾಕ್ಷೇತ್ರ ಸ್ಥಾಪಿಸಬೇಕು. ಅಲ್ಲಿ ಬಡ ಕಲಾವಿದರೂ ಪ್ರದರ್ಶನ ನೀಡಲು ಅನುಕೂಲವಾಗುತ್ತದೆ ಎಂದು ಪ್ರತಿಭಾ ಪ್ರಹ್ಲಾದ್ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು.

ಕನ್ನಡಪ್ರಭ ಪ್ರಧಾನ ಸಂಪಾದಕ ರವಿ ಹೆಗಡೆ ಮಾತನಾಡಿ, 80ರ ದಶಕದಲ್ಲಿ ಅಧಿಕಾರ ವಿಕೇಂದ್ರಿಕರಣ, ಮೌಲ್ಯಾಧಾರಿತ ರಾಜಕಾರಣದ ಮೂಲಕ ರಾಜಕೀಯದಲ್ಲಿ ಹೊಸ ಅಲೆಯನ್ನು ರಾಮಕೃಷ್ಣ ಹೆಗಡೆ ಸೃಷ್ಟಿಸಿದರು. ಅನೇಕ ಸಾಮಾಜಿಕ ಭದ್ರತಾ ಯೋಜನೆಗಳು, ವಿಜ್ಞಾನ ಸಂಶೋಧನಾ ಕೇಂದ್ರ, ಎಂಜಿನಿಯರಿಂಗ್ ಸಂಸ್ಥೆಗಳು ಸೇರಿ ಅನೇಕ ಆಧುನಿಕ ಅಭಿವೃದ್ಧಿ ಕಾರ್ಯಗಳನ್ನು ರಾಜ್ಯದಲ್ಲಿ ಆರಂಭಿಸಿದರು. ರಾಜಕಾರಣವನ್ನು ಅದ್ಭುತವಾಗಿ ಸಂಘಟಿಸುತ್ತಿದ್ದರು. ಜಾತಿ ಮೀರಿದ ರಾಜಕಾರಣಿಯಾಗಿದ್ದರು. ಜಾತಿಯ ಮಿತಿಗೆ ಒಳಪಡದ ವ್ಯಕ್ತಿತ್ವ ಬೆಳೆಸಿಕೊಂಡಿದ್ದರು ಎಂದು ಹೇಳಿದರು.

ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಿದ್ದ ಅವರು ಎಲ್ಲಾ ಜಾತಿ ಸಮುದಾಯಗಳ ಯುವ ರಾಜಕಾರಣಿಗಳನ್ನು ತಮ್ಮೊಂದಿಗೆ ಬೆಳೆಸಿದರು. ಮೌಲ್ಯಾಧಾರಿತ ರಾಜಕಾರಣ ಕಲಿಸಿದರು. ಕುಟುಂಬ ರಾಜಕಾರಣ ಮಾಡಲಿಲ್ಲ. ತಮ್ಮ ಕುಟುಂಬ, ಸಂಬಂಧಿಕರಿಗೇ ಏನಾದರೂ ಅನುಕೂಲ ಮಾಡಿಕೊಡಬೇಕು ಎನ್ನುವ ಮನಸ್ಥಿತಿಯನ್ನು ಹೊಂದಿರದೆ ಸಮಾಜಮುಖಿಯಾಗಿದ್ದರು. ಪತ್ರಿಕೆಗಳೊಂದಿಗೆ ತೀರಾ ಹತ್ತಿರವಾಗಿರುವುದಾಗಲಿ, ದೂರ ಇಡುವುದಾಗಲಿ ಮಾಡಲಿಲ್ಲ. ಇದೇ ಕಾರಣಕ್ಕೆ ಅವರ ನಿಧನರಾಗಿ 25 ವರ್ಷಗಳಾದರೂ ಜನ ಸಾಮಾನ್ಯರ ಮನಸ್ಸಿನಲ್ಲಿ ಉಳಿದುಕೊಂಡಿದ್ದಾರೆ ಎಂದು ರವಿ ಹೆಗಡೆ ತಿಳಿಸಿದರು.

ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜಯಪ್ರಕಾಶ್ ಬಂಧು, ಎಂ.ಪಿ.ನಾಡಗೌಡ ಸೇರಿ ಇನ್ನಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪ್ರಶಸ್ತಿ ಪುರಸ್ಕೃತರು:

ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ, ಕೋಡಿಹಳ್ಳಿ ಚಂದ್ರಶೇಖರ್, ಕನ್ನಡಪ್ರಭ ಪ್ರಧಾನ ಸಂಪಾದಕ ರವಿ ಹೆಗಡೆ, ಭರತನಾಟ್ಯ ಕಲಾವಿದೆ ಪ್ರತಿಭಾ ಪ್ರಹ್ಲಾದ್, ಜನತಾ ಪಕ್ಷದ ರಾಷ್ಟ್ರೀಯ ಮಹಿಳಾ ಅಧ್ಯಕ್ಷೆ ಡಾ। ವಾಣಿ ಎನ್.ಶೆಟ್ಟಿ, ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ(ಅನುಪಸ್ಥಿತಿ).