ಸಾರಾಂಶ
ಡಾ.ಶಿವಕುಮಾರ ಸ್ವಾಮೀಜಿಗಳು ಸಿದ್ಧಗಂಗಾ ಮಠದಲ್ಲಿ ಲಕ್ಷಾಂತರ ಬಡ ಮಕ್ಕಳಿಗೆ ಅನ್ನ, ಆಶ್ರಯ, ಅಕ್ಷರ ನೀಡಿ ಅವರು ಬದುಕು ಕಟ್ಟಿಕೊಳ್ಳಲು ನೆರವಾಗಿದ್ದಾರೆ.
ತುಮಕೂರು: ತುಮಕೂರು ವಿಶ್ವವಿದ್ಯಾಲಯಕ್ಕೆ ತ್ರಿವಿಧ ದಾಸೋಹಿ ಡಾ.ಶಿವಕುಮಾರ ಸ್ವಾಮೀಜಿಗಳ ಹೆಸರು ಇಡಬೇಕು ಎಂದು ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಬಿ.ಸುರೇಶ್‌ಗೌಡರು ಮಂಗಳವಾರ ಸದನದಲ್ಲಿ ಸರ್ಕಾರವನ್ನು ಒತ್ತಾಯಿಸಿದರು. ಡಾ.ಶಿವಕುಮಾರ ಸ್ವಾಮೀಜಿಗಳು ಸಿದ್ಧಗಂಗಾ ಮಠದಲ್ಲಿ ಲಕ್ಷಾಂತರ ಬಡ ಮಕ್ಕಳಿಗೆ ಅನ್ನ, ಆಶ್ರಯ, ಅಕ್ಷರ ನೀಡಿ ಅವರು ಬದುಕು ಕಟ್ಟಿಕೊಳ್ಳಲು ನೆರವಾಗಿದ್ದಾರೆ. ಅವರು ಹಾಕಿಕೊಟ್ಟ ಹಾದಿಯಲ್ಲೇ ಇಂದೂ ಸಿದ್ಧಗಂಗಾ ಮಠದಲ್ಲಿ ಹತ್ತು ಸಾವಿರ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಡಾ.ಶಿವಕುಮಾರ ಸ್ವಾಮೀಜಿಗಳ ಸೇವಾ ಕಾರ್ಯಕ್ಕೆ ರಾಜ್ಯ ಸರ್ಕಾರ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ. ಇಂತಹ ಮಹನೀಯರ ಹೆಸರನ್ನು ತುಮಕೂರು ವಿಶ್ವವಿದ್ಯಾಲಯಕ್ಕೆ ಇಡುವುದರಿಂದ ವಿ.ವಿ.ಯ ಘನತೆ, ಗೌರವ ಹೆಚ್ಚುತ್ತದೆ ಹಾಗೂ ಬಡ ಮಕ್ಕಳ ಶಿಕ್ಷಣ ಸೇವೆ ಒದಗಿಸಿದ ಪೂಜ್ಯರ ಸೇವೆಯನ್ನು ಶಾಶ್ವತವಾಗಿ ಸ್ಮರಿಸುವಂತಾಗುತ್ತದೆ ಎಂದು ಸುರೇಶ್‌ಗೌಡರು ಉನ್ನತ ಶಿಕ್ಷಣ ಸಚಿವ ಸುಧಾಕರ್ ಅವರಿಗೆ ಮನವಿ ಮಾಡಿದರು.