Name Victoria Hospital after Gopala Gowda

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಸಮಾಜವಾದಿ ಹೋರಾಟಗಾರ ಶಾಂತವೇರಿ ಗೋಪಾಲಗೌಡರ ಹೆಸರಿಡುವ ಕುರಿತು ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದ್ದ ನಿರ್ಧಾರವನ್ನು ಈವರೆಗೆ ಅನುಷ್ಠಾನಗೊಳಿಸಿಲ್ಲ ಎಂದು ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್‌ನ ವ್ಯವಸ್ಥಾಪಕ ಟ್ರಸ್ಟಿ ಕಲ್ಲೂರು ಮೇಘರಾಜ್ ಅಸಮಾಧಾನ ವ್ಯಕ್ತಪಡಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಗೋಪಾಲಗೌಡರ 104ನೇ ಜನ್ಮದಿನವಾದ 2027ರ ಮಾರ್ಚ್ 14ರಂದು ವಿಕ್ಟೋರಿಯಾ ಆಸ್ಪತ್ರೆಯ ಎದುರು ಉಪವಾಸ ಸತ್ಯಾಗ್ರಹ ನಡೆಸಲಾಗುವುದು. ಅಷ್ಟರೊಳಗೆ ಸರ್ಕಾರ ಮರುನಾಮಕರಣ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಇಲ್ಲದಿದ್ದರೆ ಬೆಂಗಳೂರಿನ ಹಾಗೂ ರಾಜ್ಯದ ವಿವಿಧ ಭಾಗಗಳ ಗೋಪಾಲಗೌಡರ ಅಭಿಮಾನಿಗಳನ್ನು ಒಗ್ಗೂಡಿಸಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

2026–27ನೇ ಸಾಲಿನ ರಾಜ್ಯ ಬಜೆಟ್‌ನ ಖಂಡಿಕೆ 166ರಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ಶಾಂತವೇರಿ ಗೋಪಾಲಗೌಡರ ಹೆಸರಿಡುವ ಐತಿಹಾಸಿಕ ನಿರ್ಧಾರವನ್ನು ಸಿದ್ದರಾಮಯ್ಯ ಪ್ರಕಟಿಸಿದ್ದರು. ಆದರೆ, ಈ ಘೋಷಣೆ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಶಾಂತವೇರಿ ಗೋಪಾಲಗೌಡರು ರಾಜ್ಯ ಕಂಡ ಅಪ್ರತಿಮ ಸಮಾಜವಾದಿ ಹೋರಾಟಗಾರರು. 1951ರ ದಶಕದಲ್ಲಿ ಅವರು ನಡೆಸಿದ ಐತಿಹಾಸಿಕ ಕಾಗೋಡು ಸತ್ಯಾಗ್ರಹವು ರಾಜ್ಯದ ಭೂ ಸುಧಾರಣಾ ಹೋರಾಟಕ್ಕೆ ಮಹತ್ವದ ತಿರುವು ನೀಡಿತ್ತು. ಇದರ ಪರಿಣಾಮವಾಗಿ ಲಕ್ಷಾಂತರ ಗೇಣಿ ಕುಟುಂಬಗಳಿಗೆ ಭೂಮಿಯ ಒಡೆತನದ ಹಕ್ಕು ದೊರೆಯಲು ಸಾಧ್ಯವಾಯಿತು ಎಂದು ಸ್ಮರಿಸಿದರು.ಮೂರು ಬಾರಿ ಶಾಸಕರಾಗಿದ್ದರೂ ತಮ್ಮ ಹೆಸರಿಗೆ ಒಂದು ಎಕರೆ ಜಮೀನು ಅಥವಾ ನಿವೇಶನವನ್ನೂ ಮಂಜೂರು ಮಾಡಿಸಿಕೊಳ್ಳದೆ ಜನಸೇವೆಗೆ ಜೀವನ ಮುಡಿಪಾಗಿಟ್ಟಿದ್ದ ಗೋಪಾಲಗೌಡರು, ರಾಮಮನೋಹರ ಲೋಹಿಯಾ ಅವರ ಸಮಾಜವಾದಿ ಸಿದ್ಧಾಂತಗಳಿಂದ ಪ್ರೇರಿತರಾಗಿ ಆದರ್ಶಮಯ ಬದುಕು ನಡೆಸಿದ್ದರು. ಇಂತಹ ಮಹಾನ್ ನಾಯಕನ ಹೆಸರನ್ನು ಪ್ರಮುಖ ಸರ್ಕಾರಿ ಆಸ್ಪತ್ರೆಗೆ ಇಡುವ ನಿರ್ಧಾರವನ್ನು ವಿಳಂಬ ಮಾಡುತ್ತಿರುವುದು ಖಂಡನೀಯ ಎಂದು ಹೇಳಿದರು.ಸಂಧ್ಯಾ ರಾಗಿಗುಡ್ಡ, ಅಲೀಂ ಖಾನ್, ಎಸ್. ಪಿ. ಶಿವಣ್ಣ, ಶಂಕರ್ ನಾಯ್ಕ್,ಆದಿಶೇಷ, ರಾಜಮ್ಮ ಇದ್ದರು.-----------------

ಪೋಟೋ: 26ಎಸ್‌ಎಂಜಿಕೆಪಿ04

ಶಿವಮೊಗ್ಗದ ಪತ್ರಿಕಾಭವನದಲ್ಲಿ ಗುರುವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್‌ನ ವ್ಯವಸ್ಥಾಪಕ ಟ್ರಸ್ಟಿ ಕಲ್ಲೂರು ಮೇಘರಾಜ್ ಮಾತನಾಡಿದರು.