ಸಾರಾಂಶ
ಕನ್ನಡಪ್ರಭ ವಾರ್ತೆ ಹನೂರು ಮಲೆಮಹದೇಶ್ವರ ಬೆಟ್ಟಕ್ಕೆ ಬರುವ ಪ್ರವಾಸಿಗರನ್ನು ತನ್ನತ್ತ ಸೆಳೆಯಲು ಅಂಬಿಗರೇ ವಿನೂತನ ಮಾದರಿಯಲ್ಲಿ ನಾಮಫಲಕ ಅಳವಡಿಸುವ ಮೂಲಕ ಪ್ರವಾಸೋದ್ಯಮ ಇಲಾಖೆಗೆ ಸೆಡ್ಡು ಹೊಡೆದಿದ್ದಾರೆ.
ಕರ್ನಾಟಕದ ನಯಾಗರ ಫಾಲ್ಸ್ ಎಂದೇ ಪ್ರಖ್ಯಾತಿ ಪಡೆದಿರುವ ಹೊಗೇನಕಲ್ ಫಾಲ್ಸ್ ಜಲಪಾತಕ್ಕೆ ಪ್ರವಾಸಿಗರನ್ನು ಆಕರ್ಷಿಸಲು ತೆಪ್ಪ ನಡೆಸುವವರ ಚಂದ ವಸೂಲಿ ಮಾಡಿ ಹೆಚ್ಚು ಜನಸಂದಣಿ ಇರುವ ತಾಳು ಬೆಟ್ಟ, ಮಲೆಮಹದೇಶ್ವರ ಬೆಟ್ಟ ಪಾಲಾರ್ ಸೇರಿದಂತೆ ಹೊಗೇನಕಲ್ ಫಾಲ್ಸ್ ಜಲಪಾತದ ಬಳಿ ಪ್ರವಾಸಿಗರಿಗೆ ನಾಮಫಲಕ ಅಳವಡಿಸಿ ಹೊಗೆನಕಲ್ ಫಾಲ್ಸ್ ಆಕರ್ಷಿತರನ್ನಾಗಿ ಮಾಡಲು ಪಣತೊಟ್ಟಿದ್ದಾರೆ. ಮಲೆಮಹದೇಶ್ವರ ಬೆಟ್ಟಕ್ಕೆ ಜಾತ್ರಾ ಮಹೋತ್ಸವ ಹಬ್ಬ ಹರಿದಿನ, ಅಮಾವಾಸ್ಯೆ ಹುಣ್ಣಿಮೆ ಹಾಗೂ ರಜಾ ದಿನಗಳಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ. ಆದರೆ ಎಷ್ಟೋ ಮಂದಿ ಭಕ್ತರಿಗೆ ಹಾಗೂ ಪ್ರವಾಸಿಗರಿಗೆ ಹೊಗೆನಕಲ್ ಫಾಲ್ಸ್ ಜಲಪಾತದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲದೆ ವಾಪಸ್ ತೆರಳುತ್ತಿದ್ದಾರೆ. ಇಂತಹ ಪ್ರವಾಸಿಗರನ್ನು ಜಲಪಾತದತ್ತ ಆಕರ್ಷಿಸಲು ಅಂಬಿಗರು ನಾಮಫಲಕ ಅಳವಡಿಸಿ ಗಮನ ಸೆಳೆದಿದ್ದಾರೆ.ಇತ್ತೀಚಿನ ದಿನಗಳಲ್ಲಿ ಹೊಗೆನಕಲ್ ಫಾಲ್ಸ್ ಜಲಪಾತಕ್ಕೆ ಪ್ರವಾಸಿಗರ ಸಂಖ್ಯೆ ಕ್ಷೀಣಿಸುತ್ತಿದೆ. ಈ ಭಾಗದಲ್ಲಿ ಈಗಾಗಲೇ ಅರಣ್ಯ ಇಲಾಖೆ ವತಿಯಿಂದ ಸಫಾರಿ ಆರಂಭ ಮಾಡಲಾಗಿದೆ. ಹೊಗೇನಕಲ್ ಫಾಲ್ಸ್ ಜಲಪಾತದಲ್ಲಿ ತೆಪ್ಪದ ಮೂಲಕ ಫಾಲ್ಸ್ ವೀಕ್ಷಣೆ ಮಾಡಬಹುದು. ಆದರೆ ಅಭಿವೃದ್ಧಿಪಡಿಸಬೇಕಾದ ಪ್ರವಾಸೋದ್ಯಮ ಇಲಾಖೆ ಇತ್ತ ಗಮನ ಹರಿಸದೆ ಇರುವುದರಿಂದ ಪ್ರವಾಸೋದ್ಯಮಕ್ಕೆ ಪೆಟ್ಟು ನೀಡಿದೆ. ಈ ನಿಟ್ಟಿನಲ್ಲಿ ಅಂಬಿಗರೆ ಚಂದ ವಸೂಲಿ ಮಾಡಿ ನಾಮಫಲಕ ಅಳವಡಿಸಿದ್ದಾರೆ.
ಅರಣ್ಯ ಇಲಾಖೆಯಿಂದ ತಾರತಮ್ಯ:ಮಹದೇಶ್ವರ ವನ್ಯಜೀವಿಧಾಮ ವ್ಯಾಪ್ತಿಯ ಅಜ್ಜೀಪುರ ಸಮೀಪದ ಉಡುತೊರೆ ಹಳ್ಳ ಜಲಾಶಯದ ಸಫಾರಿ ಕೇಂದ್ರದ ಬಗ್ಗೆ ಕೊಳ್ಳೇಗಾಲದಿಂದ ಅಜ್ಜೀಪುರ ಗ್ರಾಮದವರೆಗೆ, ಕೌದಳ್ಳಿ ಗ್ರಾಮದಿಂದ ಅಜ್ಜೀಪುರ ಗ್ರಾಮದವರೆಗೆ ಹಲವಾರು ನಾಮಪಲಕಗಳನ್ನು ಅಳವಡಿಸುವ ಮೂಲಕ ಸಾರ್ವಜನಿಕರಿಗೆ ಮಾಹಿತಿ ಫಲಕಗಳನ್ನು ಹಾಕಿದ್ದಾರೆ. ಆದರೆ ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯಲ್ಲಿರುವ ಗೋಪಿನಾಥಂ ಸಫಾರಿ ಹಾಗೂ ಹೊಗೇನಕಲ್ ಫಾಲ್ಸ್ ಜಲಪಾತದ ಬಗ್ಗೆ ಯಾವುದೇ ನಾಮಫಲಕ ಅಳವಡಿಸದೆ ಇರುವುದರಿಂದ ಸಫಾರಿ ಹಾಗೂ ಹೊಗೆನಕಲ್ ಫಾಲ್ಸ್ ಜಲಪಾತಕ್ಕೆ ಪ್ರವಾಸಿಗರ ಸಂಖ್ಯೆ ಕ್ಷೀಣಿಸುತ್ತಿದೆ ಎನ್ನಲಾಗಿದೆ.
ಅರಣ್ಯ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ವತಿಯಿಂದ ಹೊಗೇನಕಲ್ ಫಾಲ್ಸ್ ಜಲಪಾತದ ಬಗ್ಗೆ ಸಾರ್ವಜನಿಕರಿಗೆ ಹೆಚ್ಚಿನ ಮಾಹಿತಿ ನೀಡಿದ್ದರೆ ಹೆಚ್ಚಿನ ಪ್ರವಾಸಿಗರು ಹೊಗೆನೇಕಲ್ ಫಾಲ್ಸ್ ಗೆ ಭೇಟಿ ನೀಡುತ್ತಿದ್ದರು. ಸಾರ್ವಜನಿಕರಿಗೆ ಹೆಚ್ಚಿನ ಮಾಹಿತಿ ಇಲ್ಲದೆ ಇರುವುದರಿಂದ ಪ್ರವಾಸಿಗರ ಸಂಖ್ಯೆ ಕ್ಷೀಣಿಸುತ್ತಿರುವುದರಿಂದ ಅಂಬಿಗರೆ ನಾಮಫಲಕ ಅಳವಡಿಸಿದ್ದೇವೆ.ಮಣಿ, ಅಂಬಿಗ ಹೊಗೇನಕಲ್ ಜಲಪಾತ.