ಜಿಲ್ಲೆಯಲ್ಲಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ನಂತರ ಕರಡು ಮತದಾರರ ಪಟ್ಟಿಯು ಬಿಡುಗಡೆಯಾಗಿದ್ದು, ಮತದಾರರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿರುವುದನ್ನು ಸ್ಥಳೀಯ ಬಿಎಲ್‌ಒ ಕಚೇರಿಗಳಲ್ಲಿ ಅಥವಾ ಚುನಾವಣಾ ಆಯೋಗದ ಅಧಿಕೃತ ಜಾಲತಾಣದಲ್ಲಿ ಪರಿಶೀಲಿಸಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಹೇಳಿದರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಜಿಲ್ಲೆಯಲ್ಲಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ನಂತರ ಕರಡು ಮತದಾರರ ಪಟ್ಟಿಯು ಬಿಡುಗಡೆಯಾಗಿದ್ದು, ಮತದಾರರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿರುವುದನ್ನು ಸ್ಥಳೀಯ ಬಿಎಲ್‌ಒ ಕಚೇರಿಗಳಲ್ಲಿ ಅಥವಾ ಚುನಾವಣಾ ಆಯೋಗದ ಅಧಿಕೃತ ಜಾಲತಾಣದಲ್ಲಿ ಪರಿಶೀಲಿಸಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಹೇಳಿದರು.ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ಪ್ರಸ್ತುತ ಪ್ರಕಟಿಸಲಾಗಿರುವ ಕರಡು ಮತದಾರರ ಪಟ್ಟಿಯಲ್ಲಿ ಸುಮಾರು 48,668 ಮತದಾರರ ಹೆಸರುಗಳನ್ನು ಪಟ್ಟಿಯಿಂದ ಹೊರಗಿಡಲಾಗಿದೆ. ಇದರಲ್ಲಿ ಈವರೆಗೆ ಮ್ಯಾಪಿಂಗ್ ಆಗದಿರುವ 15,164 ಮತದಾರರಿಗೆ ಹಾಗೂ ತಂದೆ-ಮಗನ ವಯಸ್ಸಿನ ಗಣನೀಯ ಅಂತರ ಸೇರಿದಂತೆ ದೋಷಪೂರಿತ ಮಾಹಿತಿ ಇರುವ (ಅನೋಮಲಿಸ್) 33,504 ಮತದಾರರು ಸೇರಿದಂತೆ ಒಟ್ಟು 48,668 ಮತದಾರರಿಗೆ ನೋಟಿಸ್ ನೀಡಲಾಗುತ್ತದೆ ಎಂದು ತಿಳಿಸಿದರು.ಪಟ್ಟಿಯಲ್ಲಿ ಹೆಸರು ಇಲ್ಲದಿರುವವರು ಆಕ್ಷೇಪಣೆ ಸಲ್ಲಿಸಲು ಸೆಪ್ಟೆಂಬರ್ 23ರವರೆಗೆ ಅವಕಾಶವಿದ್ದು, ಮತದಾರರು ತಮ್ಮ ಹೆಸರು ಇದೆಯೇ ಎಂದು ಪರಿಶೀಲಿಸಿಕೊಳ್ಳುವ ಬಗ್ಗೆ ಚುನಾವಣಾ ಆಯೋಗ ಮಾಹಿತಿ ನೀಡಲಿದೆ ಎಂದು ಮಾಹಿತಿ ನೀಡಿದರು.
ಕಳೆದ ಜೂನ್ 16ರ ಮತಪಟ್ಟಿಯಲ್ಲಿದ್ದಂತೆ ಜಿಲ್ಲೆಯಲ್ಲಿ 15,19,459 ಮತದಾರರಿದ್ದು, ಅವರಲ್ಲಿ 13,30,905ಮತದಾರರ ಹೆಸರನ್ನು ಅಧಿಕೃತಗೊಳಿಸಿ, ಗಣಕೀಕರಣ ಕಾರ್ಯ ಪೂರ್ಣಗೊಳಿಸಲಾಗಿದೆ. ಅಂದರೆ, ಶೇ.87.59ರಷ್ಟು ಪರಿಷ್ಕರಣೆ ಕಾರ್ಯ ಪೂರ್ಣಗೊಂಡಂತಾಗಿದೆ. ಎಸ್‌ಐಆರ್ ಪ್ರಕ್ರಿಯೆ ವೇಳೆ 1,88,554 ಮತದಾರರನ್ನು ‘ಎಎಸ್‌ಡಿಡಿಒ’ ವರ್ಗಕ್ಕೆ ಸೇರಿಸಲಾಗಿದೆ. ಈ ಮತದಾರರ ಹೆಸರು ಕರಡು ಮತದಾರರ ಪಟ್ಟಿಯಲ್ಲಿ ಬರುವುದಿಲ್ಲ. ಈ ಪೈಕಿ 46683 ಮತದಾರರ ಮೃತರಾಗಿರುವುದನ್ನು, 23165 ಮತದಾರರ ಗೈರಾಗಿರುವುದನ್ನು ಹಾಗೂ 99225 ಮತದಾರರು ಸ್ಥಳಾಂತರಗೊಂಡಿರುವುದನ್ನು ಗುರುತಿಸಲಾಗಿದೆ ಎಂದು ತಿಳಿಸಿದರು.ಕರಡು ಮತದಾರರ ಪಟ್ಟಿಯಿಂದ ಹೊರಗುಳಿದಿರುವ ಮತದಾರರ (ಎಎಸ್‌ಡಿಡಿಒ) ಪೈಕಿ ಗೈರು, ಸ್ಥಳಾಂತರಗೊಂಡಿರುವ, ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ ಅಥವಾ ತಿದ್ದುಪಡಿ ಇದ್ದರೆ, ಹೊಸ ಸೇರ್ಪಡೆಗೆ ಮತದಾರರು ನಿಗದಿತ ದಾಖಲೆಗಳೊಂದಿಗೆ ಫಾರ್ಮ್ 6 ಸಲ್ಲಿಕೆ ಮಾಡಬೇಕು. ಇದರ ಜತೆಗೆ ಅ.1ಕ್ಕೆ 18 ವರ್ಷ ತುಂಬುವ ಯುವ ಮತದಾರರು ನಿಗದಿತ ದಾಖಲೆಗಳೊಂದಿಗೆ ಫಾರ್ಮ್ 6 ಸಲ್ಲಿಸಿ ಮತದಾರರ ಪಟ್ಟಿಗೆ ಸೇರ್ಪಡೆಯಾಗಬಹುದು. ಹೆಸರು, ವಿಳಾಸ ಬದಲಾವಣೆಗೆ ನಮೂನೆ-8 ಬಳಸಿ ಅರ್ಜಿ ಹಾಕಬಹುದು. ಮತಗಟ್ಟೆ ಅಧಿಕಾರಿಗಳ ಪರಿಶೀಲನೆಯ ನಂತರ ಆ ಮತದಾರರ ಪಟ್ಟಿಯ ಪೌರತ್ವ ದೃಢಪಟ್ಟರಷ್ಟೇ, ಅವರ ಹೆಸರನ್ನು ಅಂತಿಮ ಮತದಾರರ ಪಟ್ಟಿಗೆ ಸೇರಿಸಲಾಗುತ್ತದೆ ಎಂದು ವಿವರಿಸಿದರು. ಪ್ರಜಾಸೇವೆ: ಸರ್ಕಾರದ ಮಾರ್ಗಸೂಚಿಯಂತೆ ಸೆಪ್ಟಂಬರ್ ಮಾಹೆಯಿಂದ ಪ್ರಜಾಸೇವಾ ಚಟುವಟಿಕೆಗಳು ಆರಂಭಗೊಳ್ಳಲಿವೆ. ಪ್ರತಿ ತಿಂಗಳ ಮೊದಲ ಮತ್ತು ಮೂರನೇ ವಾರಗಳಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ಉಪಸ್ಥಿತಿಯಲ್ಲಿ ಹಾಗೂ ಎರಡು ಮತ್ತು ನಾಲ್ಕನೇ ಶನಿವಾರಗಳಂದು ಜಿಲ್ಲಾಧಿಕಾರಿಗಳು ಹಾಗೂ ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ನಗರ, ಪಟ್ಟಣ, ಹೋಬಳಿ ಮತ್ತು ಗ್ರಾಮ ಪಂಚಾಯಿತಿಗಳ ಮಟ್ಟದಲ್ಲಿ ಸಭೆಗಳನ್ನು ಆಯೋಜಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ವಿ.ಅಭಿಷೇಕ್ , ಚುನಾವಣಾ ತಹಸೀಲ್ದಾರ್ ಮಂಜುಳಾ ಹೆಗಡಾಳ ಸೇರಿದಂತೆ ಜಿಲ್ಲಾ ಚುನಾವಣಾ ಶಾಖೆಯ ಅಧಿಕಾರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.ಭಾರತ್ ಜೋಡೋ ಯುವ ಸಂಘಗಳ ಸ್ಥಾಪನೆ
ಯುವಕರ ಸಬಲೀಕರಣಕ್ಕೆ ರಾಜ್ಯ ಸರ್ಕಾರವು ಆರಂಭಿಸಿರುವ ವಿಶೇಷ ಯೋಜನೆ ಇದಾಗಿದ್ದು, ಜಿಲ್ಲೆಯ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ 35600ಸದಸ್ಯರನ್ನು ಒಳಗೊಂಡ ಸುಮಾರು 356 ಭಾರತ್ ಜೋಡೋ ಯುವ ಸಂಘಗಳನ್ನು ಸ್ಥಾಪಿಸುವ ಗುರಿ ಹೊಂದಲಾಗಿದ್ದು, ಈವರೆಗೆ, 28137ಜನ ಸದಸ್ಯರಾಗಿದ್ದು, ರಾಜ್ಯದಲ್ಲಿ ಸಂಘಗಳ ರಚನೆಯಲ್ಲಿ ಶಿವಮೊಗ್ಗ ಜಿಲ್ಲೆ 6ನೇ ಸ್ಥಾನದಲ್ಲಿದೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ತಿಳಿಸಿದರು.