ಯಲಬುರ್ಗಾ ತಾಲೂಕಿನ ವನಜಭಾವಿ ಗ್ರಾಮದಲ್ಲಿ ರಾಷ್ಟ್ರೀಯ ಬಸವ ದಳದ ವತಿಯಿಂದ ಸಾಮೂಹಿಕ ಇಷ್ಟಲಿಂಗ ಪೂಜೆ ಹಾಗೂ ನೀಲಮ್ಮ ಮತ್ತು ದೇವಪ್ಪ ಕೋಳೂರು ದಂಪತಿಯ ಪುತ್ರಿಗೆ ವಚನ ಸಾಹಿತ್ಯ ಹಾಗೂ ಶರಣ ಪರಂಪರೆಯ ಅನುಸಾರ ನಾಮಕರಣ ಕಾರ್ಯಕ್ರಮ ನಡೆಯಿತು.
ಯಲಬುರ್ಗಾ: ಇತ್ತೀಚಿನ ದಿನಗಳಲ್ಲಿ ನಾಮಕರಣ ಕಾರ್ಯಕ್ರಮಗಳು ಆಡಂಬರ, ಆಚಾರ-ವಿಚಾರಗಳ ಪ್ರದರ್ಶನ ಹಾಗೂ ಅತಿಥಿಗಳ ಸತ್ಕಾರಕ್ಕೆ ಸೀಮಿತವಾಗುತ್ತಿರುವುದು ವಿಷಾದನೀಯ ಎಂದು ನಿವೃತ್ತ ಪಿಎಸ್ಐ ಹಾಗೂ ರಾಷ್ಟ್ರೀಯ ಬಸವದಳದ ಗೌರವಾಧ್ಯಕ್ಷ ಬಸನಗೌಡ ಪೊಲೀಸ್ ಪಾಟೀಲ್ ಹೇಳಿದರು.
ತಾಲೂಕಿನ ವನಜಭಾವಿ ಗ್ರಾಮದಲ್ಲಿ ರಾಷ್ಟ್ರೀಯ ಬಸವ ದಳದ ವತಿಯಿಂದ ಸಾಮೂಹಿಕ ಇಷ್ಟಲಿಂಗ ಪೂಜೆ ಹಾಗೂ ನೀಲಮ್ಮ ಮತ್ತು ದೇವಪ್ಪ ಕೋಳೂರು ದಂಪತಿಯ ಪುತ್ರಿಗೆ ವಚನ ಸಾಹಿತ್ಯ ಹಾಗೂ ಶರಣ ಪರಂಪರೆಯ ಅನುಸಾರ ನಾಮಕರಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ನಾಮಕರಣ ಕೇವಲ ಪ್ರದರ್ಶನವಲ್ಲ, ಅದೊಂದು ಸಂಸ್ಕಾರ. ಮಗುವಿನ ಮನಸ್ಸು ಹಸಿಗೋಡೆಯಿದ್ದಂತೆ. ಬಾಲ್ಯದಿಂದಲೇ ವಚನಗಳ ಸಂಸ್ಕಾರ, ಉತ್ತಮ ನಡತೆ ಹಾಗೂ ಮಾನವೀಯ ಮೌಲ್ಯ ಕಲಿಸುವುದು ಪೋಷಕರ ಕರ್ತವ್ಯವಾಗಿದೆ ಎಂದರು.ಮನಗುಳಿಯ ವಿರಕ್ತ ಮಠದ ವಿರತೀಶಾನಂದ ಸ್ವಾಮೀಜಿ ಮಾತನಾಡಿ, ಮಕ್ಕಳಿಗೆ ಶರಣರ ಹೆಸರಿಡುವುದು ಎಷ್ಟು ಮುಖ್ಯವೋ, ಆ ಹೆಸರಿಗೆ ತಕ್ಕಂತೆ ಅವರು ಬೆಳೆಯುವಂತೆ ನೋಡಿಕೊಳ್ಳುವುದು ಪೋಷಕರ ಜವಾಬ್ದಾರಿಯಾಗಿದೆ. ಮನೆಯಲ್ಲಿ ಪ್ರತಿನಿತ್ಯ ಶರಣರ ವಚನಗಳನ್ನು ಪ್ರಾರ್ಥನೆಯ ರೂಪದಲ್ಲಿ ಹೇಳಿಕೊಡುವ ಮೂಲಕ ಮಕ್ಕಳಲ್ಲಿ ಉತ್ತಮ ವ್ಯಕ್ತಿತ್ವ ರೂಪಿಸಬೇಕು. ವಚನ ಸಾಹಿತ್ಯದ ಹಿನ್ನೆಲೆಯಲ್ಲಿ ನಾಮಕರಣ ಮಾಡುವುದೆಂದರೆ ಕೇವಲ ಹೆಸರಿಡುವುದಲ್ಲ. ಮಗುವನ್ನು ಸಮಾಜದ ಜವಾಬ್ದಾರಿಯುತ, ಸಂಸ್ಕಾರವಂತ ಹಾಗೂ ಕಾಯಕನಿಷ್ಠ ಪ್ರಜೆಯನ್ನಾಗಿ ರೂಪಿಸುವ ಮೊದಲ ಹೆಜ್ಜೆಯಾಗಿದೆ ಎಂದರು.
ರಾಷ್ಟ್ರೀಯ ಬಸವದಳದ ಕಾರ್ಯದರ್ಶಿ ಬಸವರಾಜ ಹೂಗಾರ ಮಾತನಾಡಿ, ವಚನ ಸಾಹಿತ್ಯವು ಸಮಾಜದಲ್ಲಿ ಸಮಾನತೆ, ಸದಾಚಾರ ಹಾಗೂ ವೈಚಾರಿಕತೆಯ ಮೌಲ್ಯ ಬಿತ್ತಿದ ಮಹಾನ್ ಪರಂಪರೆಯಾಗಿದೆ. ಇಂದಿನ ಆಧುನಿಕ ಯುಗದಲ್ಲಿ ಅರ್ಥವಿಲ್ಲದ ಹಾಗೂ ವಿಚಿತ್ರ ಹೆಸರುಗಳ ಬೆನ್ನತ್ತದೆ, ಜೀವನಕ್ಕೆ ಪ್ರೇರಣೆ ನೀಡುವ ಅರ್ಥಪೂರ್ಣ ಹೆಸರುಗಳನ್ನು ಮಕ್ಕಳಿಗೆ ಇಡುವುದು ಅಗತ್ಯ ಎಂದರು.ಮರಕಟ್ ಬಸವ ಕೇಂದ್ರದ ಅಧ್ಯಕ್ಷ ಅಮರೇಶಪ್ಪ ಬಳ್ಳಾರಿ ಮಾತನಾಡಿ, ನಾಮಕರಣದ ದಿನದಿಂದಲೇ ಮಗುವಿನ ಸುತ್ತ ಜ್ಞಾನ ಮತ್ತು ಭಕ್ತಿಯ ವಾತಾವರಣ ನಿರ್ಮಿಸಬೇಕು. ವಚನ ಸಾಹಿತ್ಯವು ಮೂಢನಂಬಿಕೆ, ಅಂಧಶ್ರದ್ಧೆ ಹಾಗೂ ಜಾತೀಯತೆಯನ್ನು ವಿರೋಧಿಸಿದೆ ಎಂದರು.
ಕಾರ್ಯಕ್ರಮದ ಆರಂಭದಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ ನೆರವೇರಿಸಿ, ಮಗುವಿಗೆ ಲಿಂಗದೀಕ್ಷೆ ನೀಡುವ ಮೂಲಕ ಅಕ್ಕಮಹಾದೇವಿ ಎಂದು ನಾಮಕರಣ ಮಾಡಲಾಯಿತು. ತಾಪಂ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ರುದ್ರಪ್ಪ ಮರಕಟ್ ಷಟ್ಸ್ಥಲ ಧ್ವಜಾರೋಹಣ ನೆರವೇರಿಸಿದರು.ಶರಣ ದಂಪತಿಗಳಾದ ಅಮರೇಶಪ್ಪ ಬಳ್ಳಾರಿ ಹಾಗೂ ಬಸವರಾಜ ಹೂಗಾರ ಅವರನ್ನು ಗೌರವಿಸಲಾಯಿತು.
ಗಣ್ಯರಾದ ದೇವಪ್ಪ ಕೋಳೂರು, ಹಂಪಣ್ಣ ತಾವರಗೇರಾ, ರುದ್ರಪ್ಪ ಹಳ್ಳಿ, ಶಂಕ್ರಪ್ಪ ಬೇವೂರು, ಶರಣಪ್ಪ ಅಬ್ಬಿ, ಗಿರಮಲ್ಲಪ್ಪ ಪರಂಗಿ, ವಿರೂಪಾಕ್ಷಪ್ಪ ಮೇಟಿ, ಚಿದಾನಂದಪ್ಪ ಗೊಂದಿ, ನಿಂಗಪ್ಪ ಪರಂಗಿ, ಶರಣಮ್ಮ, ಯಮನಮ್ಮ ಗೌಡ್ರು, ಸಾವಿತ್ರಮ್ಮ ಆವಾರಿ, ಶಂಕ್ರಮ್ಮ, ಬಸಮ್ಮ ಹೂಗಾರ ಪಾಲ್ಗೊಂಡಿದ್ದರು.