ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಸಲು ನಮ್ಮೂರು ಹೆಮ್ಮೆ ಕಾರ್ಯಕ್ರಮ: ಶ್ರೀಜಿತ್

| Published : May 25 2025, 02:03 AM IST

ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಸಲು ನಮ್ಮೂರು ಹೆಮ್ಮೆ ಕಾರ್ಯಕ್ರಮ: ಶ್ರೀಜಿತ್
Share this Article
  • FB
  • TW
  • Linkdin
  • Email

ಸಾರಾಂಶ

ನರಸಿಂಹರಾಜಪುರ, ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನೂ ಗುರುತಿಸಿ ಅವರ ಮನೆಯಲ್ಲೇ ಸನ್ಮಾನಿಸಿ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಯುವ ಕಾಂಗ್ರೆಸ್ ಘಟಕದಿಂದ ನಮ್ಮೂರು ಹೆಮ್ಮೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಶ್ರೀಜಿತ್ ತಿಳಿಸಿದರು.

- ಮೂಡಬಾಗಿಲು ಗ್ರಾಮದಲ್ಲಿ ಯವ ಕಾಂಗ್ರೆಸ್ ಘಟಕದಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನೂ ಗುರುತಿಸಿ ಅವರ ಮನೆಯಲ್ಲೇ ಸನ್ಮಾನಿಸಿ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಯುವ ಕಾಂಗ್ರೆಸ್ ಘಟಕದಿಂದ ನಮ್ಮೂರು ಹೆಮ್ಮೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಶ್ರೀಜಿತ್ ತಿಳಿಸಿದರು.

ಶುಕ್ರವಾರ ಸಂಜೆ ತಾಲೂಕಿನ ಮೂಡಬಾಗಿಲು ಗ್ರಾಮದಲ್ಲಿ ತಾಲೂಕು ಯುವಕಾಂಗ್ರೆಸ್ ಘಟಕದಿಂದ ಹಮ್ಮಿಕೊಂಡಿದ್ದ ನಮ್ಮೂರ ಹೆಮ್ಮೆ ಕಾರ್ಯಕ್ರಮದಲ್ಲಿ ಎಸ್ ಎಸ್ಎಲ್ ಸಿಯಲ್ಲಿ 619 ಅಂಕ ಪಡೆದ ಬಾಳೆ ಗ್ರಾಮದ ಮೂಡಬಾಗಿಲು ಪಿ.ಎಂ.ಸಿಂಚನಾ ಅವರನ್ನು ಸನ್ಮಾನಿಸಿ ಮಾತನಾಡಿದರು.

ಕೋವಿಡ್ ಸಂದರ್ಭದಲ್ಲಿ ಮಕ್ಕಳು ಶಾಲೆಗೆ ಹೋಗಲು ಸಾಧ್ಯವಾಗದೆ ಧೈರ್ಯದಿಂದ ಪರೀಕ್ಷೆ ಬರೆದು ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮುರೊಳ್ಳಿ ಸಲಹೆಯಂತೆ ಅವರ ಮನೆಗೆ ಹೋಗಿ ಸನ್ಮಾನಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಎನ್ ಎಸ್ ಯುಐ ಘಟಕದಿಂದ ನಮ್ಮೂರ ಹೆಮ್ಮೆ ಎಂಬ ಕಾರ್ಯಕ್ರಮ ಪ್ರಾರಂಭಿಸಲಾಗಿತ್ತು. ಪ್ರಸ್ತುತ ನರಸಿಂಹರಾಜಪುರ ತಾಲೂಕಿನಲ್ಲಿ ಎಸ್ ಎಸ್ ಎಲ್ ಸಿಯಲ್ಲಿ ಅತಿಹೆಚ್ಚು ಅಂಕ ಪಡೆದ 10 ವಿದ್ಯಾರ್ಥಿಗಳು ಹಾಗೂ ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ 12 ವಿದ್ಯಾರ್ಥಿಗಳನ್ನು ಅವರ ಮನೆಗೆ ಹೋಗಿ ಸನ್ಮಾನಿಸಿ ಗೌರವಿಸಲಾಗುವುದು ಎಂದರು.

ಸಿಂಚನಾ ಅತಿಹೆಚ್ಚು ಅಂಕ ಪಡೆದಿರುವುದು ಗ್ರಾಮ, ತಾಲೂಕಿಗೆ ಹೆಮ್ಮೆಯಾಗಿದ್ದು ಯುವ ಕಾಂಗ್ರೆಸ್ ಘಟಕದಿಂದ ಅವರ ಮುಂದಿನ ವಿದ್ಯಾಭ್ಯಾಸಕ್ಕೆ ಸಕಲ ರೀತಿ ನೆರವು ನೀಡಲಾಗುವುದು ಎಂದರು.

ತಾಲೂಕು ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ರತನ್ ಗೌಡ ಮಾತನಾಡಿ, ಎನ್ ಎಸ್ ಐಯು ಘಟಕದಿಂದ ಪ್ರಾರಂಭವಾದ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಪ್ರೋತ್ಸಾಹಿಸುವ ಕಾರ್ಯಕ್ರಮ ಪ್ರಸ್ತುತ ಯುವ ಕಾಂಗ್ರೆಸ್ ಘಟಕದಿಂದ ರಾಜ್ಯದಾದ್ಯಂತ ಹಮ್ಮಿಕೊಳ್ಳಲಾಗುತ್ತಿದೆ. ಅದರಂತೆ ತಾಲೂಕಿನಲ್ಲಿ ಎಸ್ ಎಸ್ ಎಲ್ ಸಿಯಲ್ಲಿ ಪಿ.ಎಂ.ಸಿಂಚನಾ 619 ಅಂಕ ಪಡೆದಿರುವುದು ತಾಲೂಕಿಗೆ ಹೆಮ್ಮೆ. ಅವರಿಗೆ ಪ್ರೋತ್ಸಾಹಿಸಿ ಮುಂದಿನ ದಿನಗಳಲ್ಲಿ ಯಶಸ್ಸು ಸಾಧಿಸಲು ಸಹಾಯ ಮಾಡಲಾಗುವುದು ಎಂದರು.

ತಾಲೂಕು ಕಾಂಗ್ರೆಸ್ ಹೋಬಳಿ ಘಟಕದ ಅಧ್ಯಕ್ಷ ಕೆ.ವಿ.ಸಾಜು ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ವ್ಯಾಸಂಗ ಮಾಡಿದ ಆಟೊ ಚಾಲಕನ ಮಗಳು ಅತ್ಯುನ್ನತ ಸಾಧನೆ ಮಾಡಿರುವುದು ಊರಿಗೆ ಹೆಮ್ಮೆ ವಿಷಯವಾಗಿದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಉತ್ತಮ ವ್ಯಾಸಂಗ ಮಾಡಿ ಐಎಎಸ್, ಐಪಿಎಸ್ ನಂತಹ ಉನ್ನತ ಹುದ್ದೆಗಳಲ್ಲಿ ನೇಮಕ ವಾಗುವಂತಾಗಬೇಕು ಎಂದರು.

ಕೊಪ್ಪ ಎಪಿಎಂಸಿ ನಿರ್ದೇಶಕ ಎಚ್.ಎಂ.ಶಿವಣ್ಣ ಮಾತನಾಡಿ, ಸರ್ಕಾರ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡುತ್ತಿದೆ. ಸಕಲ ಸೌಲಭ್ಯ ಗಳಿದ್ದರೂ ಸಾಧನೆ ಮಾಡದ ವಿದ್ಯಾರ್ಥಿಗಳ ನಡುವೆ ಸಿಂಚನಾ ಸಾಧನೆ ಇತರರಿಗೆ ಮಾದರಿ ಎಂದರು.

ತಾಲೂಕಿಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿ ಪಿ.ಎಂ.ಸಿಂಚನಾ ಮಾತನಾಡಿ, ಪೋಷಕರ ಸಹಕಾರ ದಿಂದ ಎಸ್ ಎಸ್ ಎಲ್ ಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಲು ಸಾಧ್ಯವಾಯಿತು. ಮುಂದೆ ಉತ್ತಮ ವ್ಯಾಸಂಗ ಮಾಡಿ ವೈದ್ಯಳಾಗುವ ಗುರಿ ಹೊಂದಿದ್ದೇನೆ ಎಂದರು.

ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಮುಖಂಡರಾದ ಮಹಮ್ಮದ್ ತಯೀಬ್, ರಾಶ್ವಿಕ್, ಉಮೇಶ್, ಸಂದೀಪ್, ಮಂಜು, ಪ್ರಜ್ವಲ್, ನಿಧೀಶ್, ಬಿನು, ಬಸವರಾಜ್, ತಾಲೂಕು ಕೃಷಿಕ ಸಮಾಜದ ಉಪಾಧ್ಯಕ್ಷ ಮಂಜಪ್ಪಗೌಡ ವಿದ್ಯಾರ್ಥಿನಿ ಪೋಷಕರಾದ ಎಲ್ದೋ, ಧನು ಇದ್ದರು.